ಸಿರಿಗೆರೆ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ನೀಡಿರುವ ಜಿಎಸ್‌ಟಿ ರಿಯಾಯಿತಿಯಿಂದ ದೇಶದಲ್ಲಿ ಆರ್ಥಿಕ ಸುಧಾರಣೆ ಆಗುತ್ತಿದೆ’ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಭರಮಸಾಗರ ಹೋಬಳಿ ಕೊಳಹಾಳ್ ಗ್ರಾಮದಲ್ಲಿ ₹ 1.25 ಕೋಟಿ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ನೂತನ ಗ್ರಾಮ ಸೌಧ ಕಟ್ಟಡ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಲೋಕಸಭೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದಾರೆ. ಮುಂಬರುವ ದಿನದಲ್ಲಿ ಅವರ ಸಂಖ್ಯೆ 100 ದಾಟಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ. ಗ್ರಾಮಗಳಲ್ಲಿರುವ ಜನರು ಕೇಂದ್ರ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು’ ಎಂದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ಮಳೆಯ ನೀರನ್ನು ವ್ಯರ್ಥವಾಗಿ ಹರಿದು ಹೋಗದಂತೆ ತಡೆಗಟ್ಟಿ ಶೇಖರಿಸಿ ಕೃಷಿಗೆ ಬಳಸುವುದು ನಮ್ಮ ರೈತರ ಕೆಲಸ. ಅದನ್ನು ತಪ್ಪದೆ ಮಾಡಬೇಕು. ಈ ದೃಷ್ಟಿಯಿಂದ ಕ್ಷೇತ್ರದ ಹಲವು ಕಡೆಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿಸಿದ್ದೇವೆ’ ಎಂದರು.
‘ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ವಿಶೇಷ ಕಾಳಜಿ ವಹಿಸಿ ₹ 25 ಲಕ್ಷ ನೀಡಿದ್ದಾರೆ. ಕಲ್ಲೇಶ್ವರ, ಚೌಡೇಶ್ವರಿ ದೇವಸ್ಥಾನಗಳಿಗೂ ಹಣ ಕೊಟ್ಟಿದ್ದೇನೆ. ಎಲ್ಲಾ ಕಡೆ ಸಿಮೆಂಟ್ ರಸ್ತೆಗಳಾಗಿದೆ. ಭರಮಸಾಗರ ಕೆರೆಗೆ ಸೂಳೆಕೆರೆಯಿಂದ ನೀರು ಬರುತ್ತಿತ್ತು. ಅದಕ್ಕಾಗಿ ಓವರ್ ಟ್ಯಾಂಕ್ ಕೂಡ ನಿರ್ಮಾಣವಾಗಿದೆ. ₹ 5 ಕೋಟಿ ವೆಚ್ಚದಲ್ಲಿ ದೊಡ್ಡ ಡ್ಯಾಂ ಕಟ್ಟಿಸಿದ ಪರಿಣಾಮವಾಗಿ ಕೊಳಾಳ್, ಕೊಳಾಳ್ ಗೊಲ್ಲರಹಟ್ಟಿ, ಅರಬಘಟ್ಟ, ಕರಿಯಮ್ಮನಹಳ್ಳಿ, ಹಳೆ ರಂಗಾಪುರ ಸೇರಿದಂತೆ 8-9 ಹಳ್ಳಿಗಳಲ್ಲಿ ಐವತ್ತು ಅಡಿಯಲ್ಲಿ ನೀರು ಸಿಗುತ್ತಿದೆ ಎಂದು ಆ ಭಾಗದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದರು.
‘ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಲ್ಲಿದೆ. ಅಜ್ಜಪ್ಪನಹಳ್ಳಿ ಬಳಿ ₹ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಇದರಿಂದ ಇನ್ನು ಐವತ್ತು ವರ್ಷಗಳ ಕಾಲ ರೈತರಿಗೆ ವಿದ್ಯುತ್ ಸಮಸ್ಯೆಯಾಗುವುದಿಲ್ಲ. ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ನನ್ನ ಅನುದಾನದಿಂದಲೂ ₹ 10 ಲಕ್ಷ ನೀಡುತ್ತೇನೆ’ ಎಂದು ಚಂದ್ರಪ್ಪ ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಚಿತ್ರದುರ್ಗ ತಾ.ಪಂ. ಇಒ ರವಿಕುಮಾರ್, ಗ್ರಾ.ಪಂ. ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ದೀಪಾ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ಭರಮಸಾಗರ ಮಂಡಲ ಅಧ್ಯಕ್ಷ ಎನ್.ಟಿ. ಬಸವರಾಜ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಮುಖರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.