ADVERTISEMENT

ಜಿಎಸ್‌ಟಿ ಇಳಿಕೆಯಿಂದ ಜೀವನ ಸುಗಮ: ಕೆ.ಟಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 4:38 IST
Last Updated 23 ಸೆಪ್ಟೆಂಬರ್ 2025, 4:38 IST
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಿದ ಬಿಜೆಪಿ ಜಿಲ್ಲಾ ಘಟಕ
ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಸಿಹಿ ವಿತರಿಸಿ ಸಂಭ್ರಮಿಸಿದ ಬಿಜೆಪಿ ಜಿಲ್ಲಾ ಘಟಕ   

ಚಿತ್ರದುರ್ಗ: ‘ನಿತ್ಯ ಬಳಕೆ, ಆಹಾರ ಉತ್ಪನ್ನಗಳು, ವಾಹನಗಳು ಸೇರಿದಂತೆ 375 ಉತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಇಳಿಕೆ ಬಡವರು, ಮಧ್ಯಮ ವರ್ಗದವರಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ. ದುಬಾರಿಯಾದ ಜನ ಜೀವನ ಸುಗಮವಾಗಲಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ತಿಳಿಸಿದರು.

ನಗರದ ಗಾಂಧಿವೃತ್ತದಲ್ಲಿ ಸೋಮವಾರ ಕೇಂದ್ರ ಸರ್ಕಾರ ಜಿಎಸ್‌ಟಿ ದರ ಪರಿಷ್ಕೃತಗೊಳಿಸಿರುವುದನ್ನು ಸ್ವಾಗತಿಸಿ ಸಿಹಿ ವಿತರಿಸಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದಿಂದ ಜನತೆಗೆ ದಸರಾ ಸಮಯದಲ್ಲಿ ಸಿಹಿ ಸುದ್ದಿ ದೊರೆತಿದೆ. ಇದರಿಂದ ಅಗ್ಗದ ದರದಲ್ಲಿ ವಸ್ತುಗಳು ಲಭ್ಯವಾಗಲಿವೆ’ ಎಂದರು.

‘ಈ ನಿರ್ಧಾರ ಆತ್ಮ ನಿರ್ಭರ ಭಾರತ ನಿರ್ಮಾಣದ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಜಿಎಸ್‍ಟಿ ಸುಧಾರಣೆಯನ್ನು ಉಳಿತಾಯ ಉತ್ಸವವಾಗಿ ಆಚರಿಸಲಾಗುತ್ತಿದೆ. ಇದರಿಂದ ದೇಶದ ಪ್ರಗತಿಯ ಕಥೆಗಳಿಗೆ ವೇಗ ಸಿಗಲಿದೆ. ಈ ಸುಧಾರಣೆಗಳು ಉದ್ಯಮದ ಸರಳತೆಯನ್ನು ಹೆಚ್ಚಿಸಿ, ಹೂಡಿಕೆದಾರರನ್ನು ಆಕರ್ಷಿಸಲಿವೆ’ ಎಂದು ತಿಳಿಸಿದರು.

ADVERTISEMENT

‘ದೇಶ ಮತ್ತು ರಾಜ್ಯಗಳು ಜತೆಯಾಗಿ ಕಾರ್ಯ ನಿರ್ವಹಿಸಿದಾಗ ಸ್ವಾವಲಂಬಿ ಭಾರತದ ಕನಸು ನನಸಾಗುತ್ತದೆ. ಈ ಹಿಂದೆ ಶೇ.12ರ ತೆರಿಗೆ ವ್ಯಾಪ್ತಿಯಲ್ಲಿದ್ದ ಶೇ.99ರಷ್ಟು ಉತ್ಪನ್ನಗಳು ಈ ಶೇ.5ರ ತೆರಿಗೆ ವ್ಯಾಪ್ತಿಗೆ ಬರುತ್ತಿವೆ. ಜನರ ನೆಮ್ಮದಿಯೇ ಕೇಂದ್ರ ಸರ್ಕಾರ ಆಶಯವಾಗಿದೆ’ ಎಂದರು.

‘ಜಿಎಸ್‍ಟಿ ದರದ ಪರಿಷ್ಕರಣೆ ಸರ್ಕಾರದ 'ನಾಗರಿಕ ದೇವೋ ಭವ' ಎಂಬ ಮಂತ್ರವನ್ನು ಪ್ರತಿನಿಧಿಸುತ್ತದೆ. ಈ ಪರಿಷ್ಕರಣೆ ನಿರ್ಮಾಣ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಖರ್ಚನ್ನು ತಗ್ಗಿಸುವ ಜತೆಗೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಇಳಿಸಲಿದೆ. ನವರಾತ್ರಿ ಮೊದಲ ದಿನ ಭಾರತದ ದೊಡ್ಡ ಹೆಜ್ಜೆಯಾಗಿದೆ’ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜುನ್‌ ತಿಳಿಸಿದರು.

‘ಜಿಎಸ್‌ಟಿ ದರವನ್ನು ಸರಿದೂಗಿಸುವ ದೃಷ್ಟಿಯಿಂದ ಈಗಾಗಲೇ ಹಲವು ಗ್ರಾಹಕ ಬಳಕೆ ಉತ್ಪನ್ನಗಳನ್ನು (ಎಫ್‌ಎಂಸಿಜಿ) ತಯಾರಿಸುವ ಕಂಪನಿಗಳು ಪರಿಷ್ಕೃತ ದರವನ್ನು ಪ್ರಕಟಿಸಿವೆ. ಸ್ವದೇಶಿ ಉತ್ಪನ್ನಗಳ ವೈಭವ ಮರುಕಳಿಸಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮ(ಎಂಎಸ್‌ಎಂಇ)ಗಳಿಗೆ ಜಿಎಸ್‍ಟಿ ಸುಧಾರಣೆ ಹೆಚ್ಚಿನ ಪ್ರಯೋಜನ ನೀಡಲಿದೆ’ ಎಂದರು.

ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಜೆಪಿ ಜಿಲ್ಲಾ ಖಜಾಂಚಿ ಮಾಧುರಿ ಗಿರೀಶ್‌, ಪ್ರಧಾನ ಕಾರ್ಯದರ್ಶಿ ಸಿದ್ದಾಪುರ ಸುರೇಶ್‌, ಜಿಲ್ಲಾ ಕಾರ್ಯದರ್ಶಿ ಜಿ.ಎಚ್‌.ಮೋಹನ್‌ ಕುಮಾರ್‌, ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್‌ ಯಾದವ್‌, ರಾಜ್ಯ ಮಹಿಳಾ ಮೋರ್ಚಾ ಸದಸ್ಯೆ ಶ್ಯಾಮಲ ಶಿವಪ್ರಕಾಶ್, ನಗರ ಘಟಕದ ಅಧ್ಯಕ್ಷ ಲೋಕೇಶ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.