ಚಿತ್ರದುರ್ಗ: ‘ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಚಿತ್ರದುರ್ಗ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶಿವಣ್ಣ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಯೋಜನೆಗಳ ಅನುಷ್ಠಾನ ಪರಿಣಾಮಕಾರಿಯಾಗಬೇಕು. ಅರ್ಹರಿಗೆ ಸೌಲಭ್ಯ ದೊರಕಬೇಕು’ ಎಂದು ತಿಳಿಸಿದರು.
‘ಗೃಹ ಲಕ್ಷ್ಮೀ ಯೋಜನೆಯಡಿ ಎನ್‌ಪಿಸಿಐ ವಿಫಲವಾದ ಫಲಾನುಭವಿಗಳ ಸಂಖ್ಯೆಯನ್ನು ಪ್ರತಿ ಗ್ರಾಮವಾರು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ಸಂಗ್ರಹಿಸಿ, ಇ–ಕೆವೈಸಿ ಮಾಡಿಸಬೇಕು. ಕುಟುಂಬದ ಮುಖ್ಯಸ್ಥರು ಮರಣ ಹೊಂದಿದ್ದಲ್ಲಿ ಕುಟುಂಬದ ಇತರೆ ಸದಸ್ಯರನ್ನು ಕುಟುಂಬದ ಮುಖ್ಯಸ್ಥರನ್ನಾಗಿ ಮಾಡಬೇಕು. ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗದಂತೆ ಕ್ರಮ ವಹಿಸಬೇಕು’ ಎಂದು ಸೂಚಿಸಿದರು.
‘ಶಕ್ತಿ ಯೋಜನೆಯು ಬಹಳಷ್ಟು ಅನುಕೂಲವಾಗಿದೆ. ಹೊಳಲ್ಕೆರೆ ಹಾಗೂ ಮೊಳಕಾಲ್ಮುರಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಪ್ರಾರಂಭವಾದರೆ ಶಕ್ತಿ ಯೋಜನೆ ಇನ್ನೂ ಪರಿಣಾಮಕಾರಿಯಾಗಲಿದೆ’ ಎಂದು ಪ್ರಾಧಿಕಾರದ ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ತಿಳಿಸಿದರು.
‘ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಇದೇ ಮೊದಲ ಬಾರಿಗೆ 2024– 25ನೇ ಸಾಲಿನಲ್ಲಿ ಹೆಚ್ಚಾಗಿರುವುದು ಶಕ್ತಿ ಯೋಜನೆಯ ಫಲಶ್ರುತಿಯಾಗಿದೆ. ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಯಶೋಗಾಥೆಗಳ ವಿಡಿಯೊ ಚಿತ್ರೀಕರಣಕ್ಕೆ ಅ. 22ರೊಳಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಸ್.ಆಕಾಶ್ ಹೇಳಿದರು.
ಪ್ರಾಧಿಕಾರದ ಉಪಾಧ್ಯಕ್ಷ ನಾಗೇಶ ರೆಡ್ಡಿ, ಸದಸ್ಯರಾದ ಇಂದಿರಾ, ನಿರಂಜನ್, ಅಬ್ದುಲ್ ಷಾ ವಲಿ, ಹೇಮಂತ್ ಯಾದವ್, ಹನುಮಂತಪ್ಪ, ಚೌಳೂರು ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.