ನಾಯಕನಹಟ್ಟಿ: ಸಂತ ಮೆಹಬೂಬ್ ಸುಬಾನಿಯವರ ಸ್ಮರಣೆಯ ನಿಮಿತ್ತವಾಗಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ಹಿಂದೂ– ಮುಸ್ಲಿಂ ಸಮುದಾಯದ ಭಕ್ತರು ಒಗ್ಗೂಡಿ ಹಿರಿಯರ (ಗ್ಯಾರವಿ) ಹಬ್ಬವನ್ನು ಶನಿವಾರ ರಾತ್ರಿ ಸಂಭ್ರಮದಿಂದ ಆಚರಿಸಿದರು.
ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಗ್ರಾಮದಲ್ಲಿ ಇರುವುದು ಕೇವಲ ಎರಡು ಮುಸ್ಲಿಂ ಕುಟುಂಬಗಳು. ಉಳಿದಂತೆ ಗ್ರಾಮದಲ್ಲಿ ಇರುವುದೆಲ್ಲ ಹಿಂದೂ ಕುಟುಂಬಗಳೇ. ಪ್ರತಿ ವರ್ಷ ಗ್ರಾಮಸ್ಥರೆಲ್ಲರೂ ಸೇರಿ ಮುಸ್ಲಿಂ ಧರ್ಮದ ಸಂತ ಮಹಬೂಬ್ ಸುಬಾನಿಯವರ ಜನ್ಮದಿನವನ್ನು ಆಚರಿಸುವ ಮೂಲಕ ಭಾವೈಕ್ಯ ಮೆರೆಯುತ್ತಾರೆ.
ಶುಕ್ರವಾರ ಬೆಳಗಿನಿಂದಲೇ ನಾಯಕನಹಟ್ಟಿ, ಚಳ್ಳಕೆರೆ, ಮೊಳಕಾಲ್ಮುರು ಚಿತ್ರದುರ್ಗ ಜಿಲ್ಲೆ ಸೇರಿ ಬಳ್ಳಾರಿ, ರಾಯಚೂರು, ದಾವಣಗೆರೆ, ಶಿವಮೊಗ್ಗ, ತುಮಕೂರು, ಬೆಂಗಳೂರು, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ, ಕಲ್ಯಾಣದುರ್ಗದಿಂದ 3,000ಕ್ಕೂ ಹೆಚ್ಚು ಸಂತ ಮೆಹಬೂಬ್ ಸುಬಾನಿಯವರ ಭಕ್ತರು ಗ್ಯಾರವಿ ಹಬ್ಬದಲ್ಲಿ ಭಾಗವಹಿಸಿ ಹೂವು ಮತ್ತು ಸಕ್ಕರೆಯನ್ನು ಹರಕೆಯಾಗಿ ಅರ್ಪಿಸಿ ಪೂಜಿಸಿದರು.
ರಾತ್ರಿ 8 ಗಂಟೆಗೆ ಗ್ರಾಮದ ಹೃದಯ ಭಾಗದಲ್ಲಿರುವ ಮೆಹಬೂಬ್ ಸುಬಾನಿಯವರ ಝಂಡಾ ಕಟ್ಟೆಯ ಮೇಲಿರುವ ಬೇವಿನಮರದ ಬಳಿ ಸೇರಿದ ಸಾವಿರಾರು ಭಕ್ತರು ಸಂಪ್ರದಾಯದಂತೆ ಬೃಹತ್ತಾದ ಹಸಿರು ಬಾವುಟವನ್ನು ಬೇವಿನಮರದ ಮೇಲೆ ಕಟ್ಟಿ ಸಂಭ್ರಮಿಸಿದರು.
ನಂತರ ಭಕ್ತರು ಸಕ್ಕರೆ, ಸಿಹಿ ಖಾದ್ಯಗಳನ್ನು ನೈವೇದ್ಯವಾಗಿ ಅರ್ಪಿಸಿ ಪ್ರಾರ್ಥಿಸಿದರು. ನಂತರ ರಾತ್ರಿಯಿಡೀ ಮುಸ್ಲಿಂ ಧರ್ಮ ಗುರುಗಳು ಮೆಹಬೂಬ್ ಸುಬಾನಿಯವರ ಜೀವನ ಚರಿತ್ರೆಯ ಪ್ರವಚನವನ್ನು ನೀಡಿದರು. ಭಕ್ತರಿಗೆ ಗ್ರಾಮಸ್ಥರು ಮತ್ತು ಗ್ಯಾರವಿ ಹಬ್ಬದ ಆಚರಣೆ ಸಮಿತಿಯಿಂದ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಪಿಎಸ್ಐ ಜಿ.ಪಾಂಡುರಂಗ, ಮುಸ್ಲಿಂ ಮುಖಂಡರಾದ ಮಸ್ತಾನ್ ಖಾನ್, ಜಿಲಾನ್ ಬಾಷಾ, ಷಫೀವುಲ್ಲಾ, ಗ್ರಾಮ ಪಂಚಾಯಿತಿ ಸದಸ್ಯರಾದ ವೀರೇಶ್, ಪಿ.ಬಸಮ್ಮ, ಗ್ರಾಮಸ್ಥರಾದ ಟಿ.ಎಂ.ಚಿನ್ನಯ್ಯ, ಅಶೋಕ, ಪೂಜಾರಿ ತಿಪ್ಪೇಸ್ವಾಮಿ, ಜಗ್ಗಣ್ಣ, ಪೂಜಾರಿ ಪಾಲಯ್ಯ, ಎಸ್.ತಿಪ್ಪೇಸ್ವಾಮಿ, ಎಂ.ತಿಪ್ಪೇಸ್ವಾಮಿ, ಜಿ.ಎಂ.ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.