ADVERTISEMENT

ಅರ್ಧಕ್ಕರ್ಧ ಕಡಿಮೆಯಾದ ಪಟಾಕಿ ಅಂಗಡಿ

ಹಸಿರು ಲೋಗೊ ಇಲ್ಲದ ಪಟಾಕಿ ಮಾರಾಟ ಮಾಡಿದಲ್ಲಿ ಕ್ರಮದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 2:30 IST
Last Updated 15 ನವೆಂಬರ್ 2020, 2:30 IST
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶನಿವಾರ ಪಟಾಕಿ ಖರೀದಿಸಲು ಮುಂದಾದ ಗ್ರಾಹಕರು
ಚಿತ್ರದುರ್ಗದ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಶನಿವಾರ ಪಟಾಕಿ ಖರೀದಿಸಲು ಮುಂದಾದ ಗ್ರಾಹಕರು   

ಚಿತ್ರದುರ್ಗ: ‘ಹಸಿರು ಪಟಾಕಿ’ ಸಿಗದ ಕಾರಣ ಜಿಲ್ಲೆಯಲ್ಲಿ ಅರ್ಧಕ್ಕರ್ಧ ಪಟಾಕಿ ವ್ಯಾಪಾರಸ್ಥರು ಈ ಬಾರಿ ಅಂಗಡಿ ತೆರೆಯುವ ಸಾಹಸಕ್ಕೆ ಕೈಹಾಕಿಲ್ಲ. ಪರವಾನಗಿ ಪಡೆದ ಕೆಲ ವ್ಯಾಪಾರಿಗಳು ಹಸಿರು ಲೋಗೊ ಇರುವ ಪಟಾಕಿಗಳ ವ್ಯಾಪಾರಕ್ಕೆ ಶನಿವಾರದಿಂದ ಮುಂದಾಗಿದ್ದಾರೆ.

ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯದಲ್ಲಿ ಸಮ್ಮತಿ ಸೂಚಿಸಿದೆ. ಹಸಿರು ಲೋಗೊ ಇರದ ಪಟಾಕಿ ಮಾರಾಟ ಮಾಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇದರಿಂದಾಗಿ ಮಳಿಗೆಗಳ ಸಂಖ್ಯೆ ಹಿಂದಿನ ವರ್ಷಕ್ಕಿಂತಲೂ ಕಡಿಮೆಯಾಗಿದೆ.

ಜಿಲ್ಲೆಯ ಚಿತ್ರದುರ್ಗ ನಗರವೊಂದರಲ್ಲೇ ದೀಪಾವಳಿ ವೇಳೆ ಪ್ರತಿ ವರ್ಷ 18 ಮಳಿಗೆಗಳು ತೆರೆಯುತ್ತಿದ್ದವು. ಆದರೆ, ಈ ಬಾರಿ 9 ಮಾತ್ರ ತೆರೆದಿವೆ. ಪರವಾನಗಿಗೆ ಅರ್ಜಿ ಸಲ್ಲಿಸಿದ 18 ಜನರ ಪೈಕಿ 9 ಮಂದಿಗೆ ಮಾತ್ರ ಪೊಲೀಸ್ ಇಲಾಖೆ ಅನುಮತಿ ನೀಡಿದೆ. ಸರಿಯಾದ ದಾಖಲೆ ಒದಗಿಸದ ಕಾರಣಕ್ಕೆ ಉಳಿದ ಅರ್ಜಿಗಳನ್ನು ತಿರಸ್ಕರಿಸಿದೆ.

ADVERTISEMENT

ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಬಲಿಪಾಡ್ಯಮಿವರೆಗೂ ಮಾರಾಟಕ್ಕೆ ನಗರಸಭೆ ಅವಕಾಶ ಕಲ್ಪಿಸಿದೆ. ಈಗಾಗಲೇ ಮಳಿಗೆಗಳನ್ನು ನಿರ್ಮಿಸಿಕೊಂಡಿರುವ ವ್ಯಾಪಾರಸ್ಥರು ಕೋವಿಡ್ ಮಾರ್ಗಸೂಚಿ ಪಾಲನೆಗೂ ಮುಂದಾಗಿದ್ದಾರೆ.

ಹಸಿರು ಲೋಗೊ ಇದೆಯೋ, ಇಲ್ಲವೋ ಎಂಬ ಕುರಿತು ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜು ಅವರು ಶನಿವಾರ ಅಧಿಕಾರಿಗಳ ಜತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಠಾಣೆ ಪೊಲೀಸರು ಕೂಡ ಮಧ್ಯಾಹ್ನ ಪರಿಶೀಲಿಸಲು ಮುಂದಾದರು. ಈ ವೇಳೆ ಹಸಿರು ಲೋಗೊ ಇರುವ ಪಟಾಕಿ ಮಾರಾಟ ಮಾಡುತ್ತಿದ್ದದ್ದು, ಕಂಡು ಬಂದಿದೆ. ಪುನಃ ನಗರಸಭೆ ಅಧಿಕಾರಿಗಳು ಸಮಿತಿಯೊಂದಿಗೆ ಭಾನುವಾರ ಪರಿಶೀಲನೆ ನಡೆಸಲಿದ್ದಾರೆ.

ಪಟಾಕಿ ಮಳಿಗೆ ತೆರೆದು ಮೊದಲ ದಿನವಾದ್ದರಿಂದ ಹೇಳಿಕೊಳ್ಳುವಂಥ ವ್ಯಾಪಾರ ನಡೆದಿಲ್ಲ. ಇದು ವ್ಯಾಪಾರಸ್ಥರಲ್ಲಿ ನಿರಾಸೆ ಮೂಡಿಸಿದೆ. ಇನ್ನೂ ಎರಡು ದಿನ ಹಬ್ಬವಿರುವುದರಿಂದ ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದಾರೆ.

‘ಸರ್ಕಾರದ ಮಾರ್ಗಸೂಚಿ ಅನುಸರಿಸದಿದ್ದರೆ, ಹಸಿರು ಲೋಗೊ ಇಲ್ಲದ ಪಟಾಕಿ ಮಾರಾಟ ಮಾಡಿರುವ ಕುರಿತು ದೂರು ಕೇಳಿ ಬಂದರೆ ಪೊಲೀಸ್ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಕ್ರಮ ಕೈಗೊಳ್ಳಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಎಚ್ಚರಿಕೆ ನೀಡಿದ್ದಾರೆ.

‘ಪರವಾನಗಿ ಪಡೆದ ಮೂವರು ವ್ಯಾಪಾರಸ್ಥರು ಹಸಿರು ಪಟಾಕಿ ಸಿಗದ ಕಾರಣ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಈ ಬಾರಿ ಪಟಾಕಿ ಅಂಗಡಿ ತೆರೆಯುತ್ತಿಲ್ಲ’ ಎಂದು ಮನವಿ ಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.