ಚಿತ್ರದುರ್ಗ: ‘ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸಿದಂತೆ, ಕೈಮಗ್ಗ ನೇಕಾರರಿಂದ ತಯಾರಿಸಲ್ಪಟ್ಟ ಕೈಮಗ್ಗ ಉತ್ಪನ್ನಗಳಿಗೂ ಎಂಎಸ್‌ಪಿ ಸಿಗುವಂತಾಗಬೇಕು. ಈ ಮೂಲಕ ನೇಕಾರರಿಗೆ ಪ್ರೋತ್ಸಾಹ ನೀಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಅಭಿಪ್ರಾಯಪಟ್ಟರು.
ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಈಚೆಗೆ ಆಯೋಜಿಸಿದ್ದ ಕೈಮಗ್ಗ ಮೇಳ-ವಸ್ತ್ರಾಂಜಲಿ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ‘ನೂತನ ಜವಳಿ ನೀತಿ ಜಾರಿಗೆ ರಾಜ್ಯ ಸರ್ಕಾರ ಕ್ರಮವಹಿಸಿದೆ. ಅದರಲ್ಲಿ ಕೈಮಗ್ಗ ನೇಕಾರರಿಗೆ ವಿಶೇಷ ಆದ್ಯತೆ ನೀಡಬೇಕಿದೆ’ ಎಂದರು.
‘ಮೊಳಕಾಲ್ಮುರು ರೇಷ್ಮೆ ಸೀರೆಗೆ ಜಿಐ ಟ್ಯಾಗ್ ದೊರೆತಿರುವುದು ಸಂತೋಷದ ಸಂಗತಿ. ಜವಳಿ ಪಾರ್ಕ್ ನಿರ್ಮಾಣಕ್ಕೂ ಮನವಿ ಮಾಡಲಾಗಿದ್ದು, ಈ ಸಂಬಂಧ ಜವಳಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಯುಕ್ತರು ಮೊಳಕಾಲ್ಮುರಿಗೆ ಭೇಟಿ ನೀಡಿ, ಶೀಘ್ರದಲ್ಲಿಯೇ ಸಭೆ ನಡೆಸಲಿದ್ದಾರೆ’ ಎಂದು ತಿಳಿಸಿದರು.
‘ಕೈಮಗ್ಗ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದೆ. ನಶಿಸಿಹೋಗುತ್ತಿರುವ ಉದ್ಯಮವನ್ನು ಉಳಿಸುವ ಸಲುವಾಗಿ ರಾಜ್ಯ ಸರ್ಕಾರ ನೂತನ ಜವಳಿ ನೀತಿಯನ್ನು ರೂಪಿಸುತ್ತಿದೆ’ ಎಂದು ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ.ಗಣೇಶ್ ಹೇಳಿದರು.
‘ತಮಿಳುನಾಡಿನ ಮಾದರಿ ಅನುಸರಿಸಿ, ವಿನ್ಯಾಸ, ತಂತ್ರಜ್ಞಾನ, ಉದ್ಯೋಗ ಸೃಷ್ಟಿ ಹಾಗೂ ಯುವ ಜನತೆಯನ್ನು ಕೈಮಗ್ಗ ಕ್ಷೇತ್ರಕ್ಕೆ ಸೆಳೆಯಲು ಚರ್ಚೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.
‘ಕೈಮಗ್ಗ ನೇಕಾರರು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಹಾಗೂ ನೇಕಾರರಿಗೆ ನಿರಂತರ ಉದ್ಯೋಗ ಕಲ್ಪಿಸಲು ಮೇಳ ಸಹಕಾರಿಯಾಗಿದೆ. ಗ್ರಾಹಕರು ಹೆಚ್ಚು ಹೆಚ್ಚು ಖಾದಿ ವಸ್ತ್ರಗಳನ್ನು ಬಳಕೆ ಮಾಡುವ ಮೂಲಕ ಸ್ವದೇಶಿ ವಸ್ತ್ರನೀತಿ ಸಂಹಿತೆಗೆ ಹಾಗೂ ಆರೋಗ್ಯದ ಹಿತದೃಷ್ಟಿಯಿಂದಲೂ ಖಾದಿ ಬಳಕೆ ಉತ್ತಮ’ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಶಿವಣ್ಣ ಹೇಳಿದರು.
‘ಗಾಂಧಿ ಜಯಂತಿ, ದಸರಾ ಹಬ್ಬದ ಪ್ರಯುಕ್ತ ಸೆ.30 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ವಸ್ತ್ರಾಂಜಲಿ-2025 ಹೆಸರಿನಲ್ಲಿ ರಾಜ್ಯ ಹಾತ್‌ಕರ್ಗಾ ವಿಶೇಷ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಶೇ 20ರಷ್ಟು ರಿಯಾಯಿತಿ ದರದಲ್ಲಿ ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಲಕ್ಷ್ಮಣ್ ತಳವಾರ್ ತಿಳಿಸಿದರು.
ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ತುಮಕೂರು ಪೂರ್ವವಲಯ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಶ್ರೀಧರ ನಾಯಕ, ಬೆಂಗಳೂರು ನೇಕಾರರ ಸೇವಾ ಕೇಂದ್ರದ ಸಿ.ಪ್ರಭಾಕರನ್, ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ತಿಪ್ಪೇಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.