ಚಿಕ್ಕಜಾಜೂರು: ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಕಾಣುತ್ತಿದ್ದ ರಸ್ತೆ ಒಕ್ಕಣೆಗೆ (ಸುಗ್ಗಿ) ಈ ವರ್ಷ ಅಲ್ಪ ವಿರಾಮ ಸಿಕ್ಕಂತಾಗಿದ್ದು, ಬಹುತೇಕ ರೈತರು ಕೊಯಿಲು ಯಂತ್ರಗಳ ಮೊರೆ ಹೋಗಿರುವುದು ಕಂಡು ಬಂದಿದೆ. ಇದರಿಂದಾಗಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರು ಸರಾಗವಾಗಿ ಸಂಚರಿಸುವ ಸ್ಥಿತಿ ಇದೆ.
ಹೋಬಳಿಯ ಅನೇಕ ಗ್ರಾಮಗಳ ರೈತರು ತಾವು ಬೆಳೆದ ರಾಗಿ ಹಾಗೂ ತೊಗರಿ ಗಿಡಗಳನ್ನು ಖಟಾವು ಮಾಡಿ, ಈಚೆಗೆ ಸರ್ಕಾರದ ಯೋಜನೆಯಲ್ಲಿ ಸಿದ್ಧಪಡಿಸಲಾದ ಕಾಂಕ್ರೀಟ್ ಕಣಗಳಲ್ಲಿ ಒಕ್ಕಣೆ ಮಾಡುತ್ತಿರುವುದು ಸಮಾಧಾನಕರ ಸಂಗತಿಯಾಗಿದೆ. ಕಳೆದ ವರ್ಷ ಇದೇ ವೇಳೆಯಲ್ಲಿ ಬಹುತೇಕ ರೈತರು ಬೆಳೆದ ಪೈರುಗಳನ್ನು ಖಟಾವು ಮಾಡಿ, ಡಾಂಬರ್ ರಸ್ತೆಗೆ ಹಾಕಿ, ಅಲ್ಲಿ ಸಂಚರಿಸುವ ವಾಹನಗಳ ಗಾಲಿಗೆ ಸಿಗುವಂತೆ ಮಾಡಿ, ಹುಲ್ಲು ಹಾಗೂ ಕಡ್ಡಿಗಳಿಂದ ಕಾಳನ್ನು ಬೇರ್ಪಡಿಸಿ ನಂತರ, ಸುಗ್ಗಿ ಮಾಡುತ್ತಿದ್ದರು.
ಇದರಿಂದಾಗಿ ರಸ್ತೆ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳು, ಬಸ್ಸು, ಕಾರು, ಟ್ರ್ಯಾಕ್ಟರ್, ಲಾರಿ ಮತ್ತಿತರ ವಾಹನಗಳ ಚಾಲಕರಿಗೆ ಕಿರಿಕಿರಿಯಾಗುತ್ತಿತ್ತು. ಆದರೆ, ಈ ಬಾರಿ ಅಂತಹ ಸಮಸ್ಯೆಗಳಿಗೆ ವಿರಾಮ ಸಿಕ್ಕಂತಾಗಿದೆ. ಅಲ್ಲದೆ ಸಮೀಪದ ಹಿರಿಯೂರು, ಅಂದನೂರು, ಗ್ಯಾರೆಹಳ್ಳಿ, ಅರಸನಘಟ್ಟ, ಕೋಟೆಹಾಳ್ ಮೊದಲಾದ ಗ್ರಾಮಗಳ ರೈತರು ಸುಗ್ಗಿಯನ್ನು ಸ್ವಂತ ಕಣಗಳಲ್ಲಿ ಮತ್ತೆ ಕೆಲವರು ಸಮೀಪದ ದೊಡ್ಡ ಗ್ರಾಮಗಳಲ್ಲಿ ಸರ್ಕಾರದ ಯೋಜನೆಗಳಲ್ಲಿ ಸಿದ್ಧಪಡಿಸಲಾದ ಕಾಂಕ್ರೀಟ್ ಕಣಗಳಿಗೆ ತಂದು ಅಲ್ಲಿ ಸುಗ್ಗಿ ಮಾಡಿಕೊಂಡು, ದವಸ ಧಾನ್ಯಗಳನ್ನು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದುದು ಕಂಡು ಬಂದಿದೆ.
ಖಟಾವು ಯಂತ್ರಗಳ ಮೊರೆ ಹೋದ ರೈತ ವರ್ಗ: ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಹಾಗೂ ರಾಗಿಯನ್ನು ಬಿತ್ತನೆ ಮಾಡಲಾಗಲಿಲ್ಲ. ಜತೆಗೆ, ಕೊಯಿಲಿಗೆ ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ಅಧಿಕ ಕೂಲಿಗೆ ಹೆದರಿದ ಬಹುತೇಕ ಸಣ್ಣ ಹಾಗೂ ದೊಡ್ಡ ರೈತರು ಖಟಾವು ಯಂತ್ರಗಳ ಮೊರೆ ಹೋದರು.
ರೈತ ಕಾರ್ಮಿಕರು ಎಕರೆಗೆ ₹ 15,000 ದಿಂದ ₹ 18,000 ವರೆಗೆ ಕೂಲಿ ಅಥವಾ ಗುತ್ತಿಗೆ ಕೇಳುತ್ತಿದ್ದುದರಿಂದ, ಅಷ್ಟು ಹಣ ಕೊಟ್ಟರೂ, ಅಷ್ಟು ಬೆಲೆಯ ರಾಗಿ ಸಿಗುತ್ತದೆಯೇ ಎಂಬ ಆತಂಕದಲ್ಲಿ ಬಹುತೇಕ ರೈತರು ಖಟಾವು ಯಂತ್ರಗಳ ಮೊರೆ ಹೋದರು. ಇಡೀ ದಿನ ಖಟಾವಿಗೆ ಕಾರ್ಮಿಕರು ತೆಗೆದುಕೊಳ್ಳುತ್ತಿದ್ದರು. ಅಲ್ಲದೆ, ಹುಲ್ಲಿನಿಂದ ರಾಗಿಯನ್ನು ಬೇರ್ಪಡಿಸಲು ಕಣಸುಗ್ಗಿ ಮಾಡಬೇಕಿತ್ತು. ಆದರೆ, ಖಟಾವು ಯಂತ್ರದಿಂದ ರಾಗಿ ಕಾಳನ್ನು ಬೇರ್ಪಡಿಸುವುದಲ್ಲದೆ, ಕೊಯಿಲು ಮಾಡಿದ ರಾಗಿ ಹುಲ್ಲನ್ನು ಯಂತ್ರದ ಮೂಲಕವೇ ಪೆಂಡಿ (ಹುಂಡೆ ಕಟ್ಟು) ಮಾಡುತ್ತಿದ್ದುದರಿಂದ ಸಮಯ ಉಳಿತಾಯವಾಗುವುದರ ಜತೆ, ಕಡಿಮೆ ಖರ್ಚಿನಲ್ಲಿ ಕೊಯಿಲು ಮತ್ತು ಸುಗ್ಗಿ ಆಗುವಂತಾಯಿತು ಎನ್ನುತ್ತಾರೆ ರೈತರಾದ ಚಂದ್ರಪ್ಪ, ಹನುಮಂತಪ್ಪ, ದ್ಯಾಮಣ್ಣ, ಈಶ್ವರಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.