ಧರ್ಮಪುರ: ಭಾನುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಹೋಬಳಿಯಲ್ಲಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ಅರಳೀಕೆರೆ, ಶ್ರವಣಗೆರೆ, ಹಲಗಲದ್ದಿ, ಹೊಸಕೆರೆ, ಹರಿಯಬ್ಬೆ, ಚಿಲ್ಲಹಳ್ಳಿ, ವೇಣುಕಲ್ಲುಗುಡ್ಡ, ಸೂಗೂರು ಸಕ್ಕರ, ಬ್ಯಾಡರಹಳ್ಳಿ, ದೇವರಕೊಟ್ಟ, ಕಂಬತ್ತನಹಳ್ಳಿ ಮೊದಲಾದ ಭಾಗಗಳಲ್ಲಿ ಭಾನುವಾರ ತಡರಾತ್ರಿ ಉತ್ತಮ ಮಳೆ ಸುರಿದಿದೆ. ಚೆಕ್ ಡ್ಯಾಂ, ಗೋಕಟ್ಟೆಗಳು ತುಂಬಿಕೊಂಡಿವೆ.
ಜಲಾವೃತ: ಕಳೆದ ನಾಲ್ಕೈದು ತಿಂಗಳಿನಿಂದ ಮಳೆ ಬಾರದೆ ರೈತರು ಕಂಗಾಲಾಗಿದ್ದರು. ಮಳೆ ಇಲ್ಲದೆ ಇದ್ದುದ್ದರಿಂದ ಹೋಬಳಿಯಲ್ಲಿ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿತ್ತು. ರೈತರು ಚಿಂತಾಕ್ರಾಂತರಾಗಿದ್ದರು. ಕೊಳವೆ ಬಾವಿಗಳನ್ನು ಹೊಂದಿದ್ದ ರೈತರು ಈರುಳ್ಳಿ, ಟೊಮೆಟೊ ಮತ್ತು ದಾಳಿಂಬೆ ಬೆಳೆಗೆ ಮಾರು ಹೋಗಿದ್ದರು.
ಟೊಮೆಟೊ ಮತ್ತು ಈರುಳ್ಳಿ ಫಸಲಿಗೆ ಬಂದಿದ್ದು, ಕೆಲವರು ಈರುಳ್ಳಿ ಕಟಾವು ಮಾಡಿ ಹೊಲದಲ್ಲಿ ಬಿಟ್ಟಿದ್ದರು. ಭಾನುವಾರ ರಾತ್ರಿ ಸುರಿದ ಮಳೆಗೆ ಅರಳೀಕೆರೆ ರಂಗಸ್ವಾಮಿ ಅವರ 5 ಎಕರೆಯಲ್ಲಿ ನಾಟಿ ಮಾಡಿದ್ದ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಕೆಲವು ರೈತರ ಹೊಲಗಳಲ್ಲಿ ನೀರು ನಿಂತಿದ್ದು, ಟೊಮೆಟೊ ಬೆಳೆ ಜಲಾವೃತವಾಗಿದೆ. ಅರಳೀಕೆರೆ ಗೊಲ್ಲರಹಟ್ಟಿಯ ರೈತ ಮುದ್ದಣ್ಣನ ಎರಡು ಎಕರೆಯಲ್ಲಿನ ಟೊಮೆಟೊ ಬೆಳೆ ಜಲಾವೃತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.