ADVERTISEMENT

ಚಿತ್ರದುರ್ಗ: ಹಿಂದೂ ಮಹಾಗಣಪತಿ ಮಹೋತ್ಸವ ಸೆ.7ರಿಂದ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 16:23 IST
Last Updated 3 ಸೆಪ್ಟೆಂಬರ್ 2024, 16:23 IST
ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್‌ 
ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್‌    

ಚಿತ್ರದುರ್ಗ: ‘ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಕರ್ಷಕ ಗಣಪತಿ ಪ್ರತಿಷ್ಠಾಪನಾ ಪೆಂಡಾಲ್‌ನಲ್ಲಿ ಸೆ.7ರಿಂದ ಸೆ.28ರವರೆಗೆ ಹಿಂದೂ ಮಹಾಗಣಪತಿ ಮಹೋತ್ಸವ ನಡೆಯಲಿದೆ‘ ಎಂದು ದಕ್ಷಿಣ ಪ್ರಾಂತ ಭಜರಂಗದಳದ ಸಂಚಾಲಕ ಪ್ರಭಂಜನ್ ತಿಳಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್- ಭಜರಂಗದಳದ ವತಿಯಿಂದ ಮಹೋತ್ಸವ ನಡೆಯಲಿದೆ. ದಶಾವತಾರ ಮಾದರಿಯಲ್ಲಿ ಪೆಂಡಾಲ್ ಕೆಲಸ ಆರಂಭಗೊಂಡಿದೆ. ಸೆ.4ರಂದು ಗಣಪತಿ ಮೂರುತಿ ಪುರ ಪ್ರವೇಶ ಸಮಾರಂಭವಿದೆ. ದೇಶಭಕ್ತಿಯನ್ನು ಹೆಚ್ಚಿಸುವುದು ಮಹೋತ್ಸವದ ಉದ್ದೇಶ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಕಲಾ ತಂಡಗಳ ವಾದ್ಯಗೋಷ್ಠಿಯೊಂದಿಗೆ ಹಿಂದೂ ಮಹಾಗಣಪತಿಯನ್ನು ಮೆರವಣಿಗೆ ಮೂಲಕ ಪೆಂಡಾಲ್‍ಗೆ ಮೂರುತಿ ತರಲಾಗುವುದು’ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಷ್ಟ್ರೀಯತೆ, ದೇಶಭಕ್ತಿ, ಸಂಸ್ಕೃತಿ ಬಿಂಬಿಸುವಲ್ಲಿ ಹಿಂದೂ ಮಹಾಗಣಪತಿ ಮಹೋತ್ಸವ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಕೃತಿ, ಸಂಪ್ರದಾಯ ಬಿಂಬಿಸುವ 25 ಗಣಪತಿಗಳಿಗೆ ಬಹುಮಾನ ನೀಡಲಾಗುವುದು. ಗಣಪತಿ ವಿಸರ್ಜನಾ ಮೆರವಣಿಗೆಯನ್ನು ಭಜರಂಗದಳದ ಮುಖಂಡ ನೀರಜ್ ತೊಗೇರಿಯಾ ಉದ್ಘಾಟಿಸುವರು’ ಎಂದರು.

ADVERTISEMENT

2024ರ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಬಿ.ನಯನ್ ಮಾತನಾಡಿ ‘21 ದಿನಗಳ ಕಾಲ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ.26 ರಂದು ಕನಕ ವೃತ್ತದಿಂದ ಹೊರಡುವ ಬೈಕ್ ರ‍್ಯಾಲಿ ನಗರದೆಲ್ಲೆಡೆ ಸಂಚರಿಸಲಿದ್ದು, ಸೆ. 28ರಂದು ಮೂರುತಿ ವಿಸರ್ಜನೆ ಮಾಡಲಾಗುವುದು’ ಎಂದರು.

ಉತ್ಸವ ಸಮಿತಿಯ ಮಾರ್ಗದರ್ಶಕರಾದ ಟಿ.ಬದರಿನಾಥ್ ಮಾತನಾಡಿ ‘ಗರುಡಾರೂಢ ‌ ಪ್ರಭಾವಳಿ ಪೀಠ ಸೇರಿ ಈ ಬಾರಿಯ ಗಣಪತಿ 17 ಅಡಿ ಎತ್ತರ ಹೊಂದಿದೆ. 13 ರೀತಿಯ ಮಹಾ ಮಂಗಳಾರತಿ ನಡೆಯಲಿದೆ. ಪೆಂಡಾಲ್‌ ನಿರ್ಮಾಣಕ್ಕೆ ₹ 17 ಲಕ್ಷ ಖರ್ಚಾಗಿದೆ’ ಎಂದರು.

ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್, ಭಜರಂಗದಳದ ಜಿಲ್ಲಾ ಸಂಯೋಜಕ ಸಂದೀಪ್, ವಿಶ್ವಹಿಂದೂ ಪರಿಷತ್ ನಗರ ಘಟಕದ ಅಧ್ಯಕ್ಷ ಇ.ಅಶೋಕ್, ಉಪಾಧ್ಯಕ್ಷ ಜಿ.ಎಸ್.ರಂಗಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.