
ಹಿರಿಯೂರು: ಸಹಕಾರಿ ಕ್ಷೇತ್ರದಲ್ಲಿನ ಆರ್ಥಿಕ ಸಂಸ್ಥೆಗಳು ಬಲಗೊಂಡರೆ ರೈತರಿಗೆ ಹೆಚ್ಚಿನ ಬಲ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ನಿರ್ಮಿಸಿರುವ 12 ನೂತನ ವಾಣಿಜ್ಯ ಮಳಿಗೆಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಹಕಾರ ಸಂಘಗಳು ಒಂದು ಕಾಲದಲ್ಲಿ ಆರ್ಥಿಕವಾಗಿ ಸಬಲವಾಗಿದ್ದವು. ಕೆಲ ದಶಕಗಳಿಂದ ಸಾಲ ನೀಡಿಕೆಯಲ್ಲಿನ ದೋಷ, ವಸೂಲಿಯಲ್ಲಿ ನಿರ್ಲಕ್ಷ್ಯದ ಕಾರಣದಿಂದ ನಷ್ಟದ ಸುಳಿಗೆ ಸಿಲುಕಿದವು. ಈಚೆಗೆ ಸರ್ಕಾರದ ಯೋಜನೆಗಳನ್ನು ಇಂತಹ ಸಹಕಾರ ಸಂಘಗಳ ಮೂಲಕ ಜಾರಿಗೊಳಿಸುತ್ತಿರುವ ಕಾರಣ ಚೇತರಿಕೆ ಹಾದಿಯಲ್ಲಿವೆ. ಈ ಸಂಸ್ಥೆ 12 ನೂತನ ಮಳಿಗೆಗಳನ್ನು ನಿರ್ಮಿಸಿದ್ದು, ಸ್ಥಳೀಯ ವ್ಯಾಪಾರಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುವುದರ ಜೊತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸಹುದು ಎಂದು ತಿಳಿಸಿದರು.
ಬೆಂಗಳೂರಿನ ರಾಜ್ಯ ಸಹಕಾರ ಮಾರಾಟ ಮಂಡಳದವರು ನೀಡಿದ ₹ 65 ಲಕ್ಷ ವೆಚ್ಚದಲ್ಲಿ 12 ಮಳಿಗೆ ನಿರ್ಮಿಸಿದ್ದು, ಶೀಘ್ರದಲ್ಲಿಯೇ ₹ 50 ಲಕ್ಷ ವೆಚ್ಚದಲ್ಲಿ ಮೊದಲ ಮಹಡಿ ನಿರ್ಮಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಎಸ್.ಜೆ. ಹನುಮಂತರಾಯ ಮಾಹಿತಿ ನೀಡಿದರು.
ಮಾರಾಟ ಮಹಾಮಂಡಳದ ಉಪಾಧ್ಯಕ್ಷ ಶಿವಕುಮಾರಗೌಡ ಪಾಟೀಲ್, ನಿರ್ದೇಶಕರಾದ ಹೊಸಕೋಟೆ ಸುರೇಶ್, ಶಿಕಾರಿಪುರ ಅಗಡಿ ಅಶೋಕ್, ವಿಜಾಪುರದ ಭೀಮರಾಯ ಗುಡದ್, ಹೊನ್ನಾಳಿ ಶಾಸಕ ಶಾಂತನಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ. ಮಂಜುನಾಥ್, ಟಿ.ಎ.ಪಿ.ಸಿ.ಎಂ.ಎಸ್ ಉಪಾಧ್ಯಕ್ಷೆ ಅನಿತಾ ಮಹೇಶ್, ನಿರ್ದೇಶಕರಾದ ಎನ್.ಆರ್. ಲಕ್ಷ್ಮೀಕಾಂತ್, ವಿ. ವೀರಣ್ಣ, ಟಿ. ಗಿರಿಸ್ವಾಮಿ, ವಿ. ರಾಮಚಂದ್ರಪ್ಪ, ಎಸ್. ದೇವರಾಜು, ಆರ್. ಶ್ರೀಧರ, ಭಾಗ್ಯಮ್ಮ ಹನುಮಂತರಾಯಪ್ಪ, ಕಾರ್ಯದರ್ಶಿ ಗುರುಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಖಾದಿರಮೇಶ್, ಎಂ.ಯು. ಶಿವರಾಂ, ಎಸ್.ಎಸ್. ರಂಗಪ್ಪ, ದಿಂಡಾವರ ಮಹೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.