
ಹಿರಿಯೂರು: ‘ನವಜಾತ ಶಿಶು, ಬಾಣಂತಿಯರು ಹಾಗೂ ಋತುಚಕ್ರವಾದವರನ್ನು ಸೂತಕದ ಹೆಸರಿನಲ್ಲಿ ಊರಿಂದ ಹೊರಗೆ ಗುಡಿಸಲುಗಳಲ್ಲಿ ಇಡುವುದು ಅಮಾನವೀಯ ಕ್ರಮ. ಇಂತಹ ಕಂದಾಚಾರಗಳನ್ನು ಬಿಡದೇ ಹೋದರೆ ಮಾನವ ಹಕ್ಕುಗಳ ಉಲ್ಲಂಘನೆಯಡಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಎಚ್ಚರಿಸಿದರು.
ತಾಲ್ಲೂಕಿನ ದಿಂಡಾವರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ಬುಧವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಮನೆಯಲ್ಲಿ ಮಗು ಜನಿಸಿದರೆ ಅದು ಖುಷಿಪಡುವ ವಿಚಾರ. ಹೆಣ್ಣು ತಾಯಿಯಾಗುವುದು ಪ್ರಕೃತಿಯ ನಿಯಮ. ತಪ್ಪು ಆಚರಣೆಗಳಿಂದ ಮನುಷ್ಯತ್ವ ಮರೆಯಾಗುತ್ತದೆ. ದಿಂಡಾವರ ಭಾಗದಲ್ಲಿ ಇಂತಹ ಮೌಢ್ಯಾಚರಣೆ ಹೆಚ್ಚು ಎಂಬ ಕಾರಣಕ್ಕೆ ವಿಶ್ವ ಮಾನವ ಹಕ್ಕುಗಳ ದಿನವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ’ ಎಂದರು.
‘ಶಿಶು ಹಾಗೂ ಬಾಣಂತಿಯನ್ನು ಇಂತಹ ಚಳಿ ಅಥವಾ ಮಳೆಗಾಲದಲ್ಲಿ ಊರಿನಿಂದ ಹೊರಗೆ ಇಟ್ಟರೆ ಅವರ ದೈಹಿಕ ಸ್ಥಿತಿ ಏನಾಗಬಹುದು ಎಂಬ ಕಲ್ಪನೆ ಇರಬೇಕಲ್ಲವೇ? ಸ್ನಾನಕ್ಕೆ ಬಿಸಿನೀರು, ಬೆಚ್ಚನೆ ಹಾಸಿಗೆ–ಹೊದಿಕೆ ಕೊಡಬೇಕಾದ ಸಮಯದಲ್ಲಿ, ಊರ ಹೊರಗೆ ಇಡುವುದು ಮಾನವೀಯತೆಯ ಉಲ್ಲಂಘನೆ. ಇಂತಹ ಕಂದಾಚಾರಗಳನ್ನು ಬಿಡಬೇಕು. ಹೆಣ್ಣುಮಕ್ಕಳನ್ನು ಓದಿಸುವ ಬದಲು ಬಲವಂತದಿಂದ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬಾರದು. ಬಯಲು ಶೌಚ ಪದ್ಧತಿಗೆ ಇತಿಶ್ರೀ ಹಾಡಬೇಕು’ ಎಂದು ಸೂಚಿಸಿದರು.
‘ಬೇವಿನ ಸೀರೆ ತೊಟ್ಟು ದೇವರ ಸೇವೆಗೆ ಬಾ ಎಂದು ಯಾವ ಮಾರಮ್ಮ, ಚೌಡಮ್ಮ ಹೇಳುವುದಿಲ್ಲ. ದೈವ ಇರುವುದು ಕಾಯಲು. ಅದಕ್ಕೆ ತೊಂದರೆ ನೀಡಲು ಬರುವುದಿಲ್ಲ, ಅದನ್ನು ಮಾಡುವುದು ಪೂಜಾರಿ. ಮನೆಯಲ್ಲಿಯೇ ಹೆರಿಗೆ ಮಾಡಿಸಿ, ಋತುಮತಿಯಾದವರನ್ನು ಮನೆಯಲ್ಲಿ ಇಟ್ಟುಕೊಂಡವರಿಗೆ ಯಾವುದೇ ತೊಂದರೆ ಆಗಿರುವ, ಮೃತಪಟ್ಟಿರುವ ನಿದರ್ಶನಗಳಿಲ್ಲ. ಹಿಂದಿನಿಂದ ನಡೆದು ಬಂದಿರುವ ಆಚರಣೆ ಬಿಡಲಾಗುತ್ತದೆಯೇ, ಪೂಜಾರಪ್ಪನ ಮಾತು ಮೀರಿದರೆ ಊರು ಉಳಿಯುತ್ತದೆಯೇ ಎಂಬ ಭ್ರಮೆಯಿಂದ ಹೊರಬರಬೇಕು. ಶಿಕ್ಷಣದ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್. ವಿಜಯಕುಮಾರ್ ಸಲಹೆ ನೀಡಿದರು.
ಚಿತ್ರದುರ್ಗದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ವಿಜಯ್, ಹಿರಿಯೂರಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ಸುಜಾತಾ ಸುವರ್ಣ, ಉಪ ವಿಭಾಗಾಧಿಕಾರಿ ಮಹಬೂಬ್ ಜೀಲಾನಿ ಖುರೇಷಿ ಮಾತನಾಡಿದರು.
ಹಿರಿಯೂರಿನ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಧೀಶರಾದ ಎಚ್.ಡಿ. ಶ್ರೀಧರ, ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ, ತಹಶೀಲ್ದಾರ್ ಎಂ. ಸಿದ್ದೇಶ್, ತಾಲ್ಲೂಕು ಪಂಚಾಯಿತಿ ಇಒ ಪ್ರಮೋದ್, ಬಿಇಒ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿ ನವೀನ್ ಮಸ್ಕಲ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ. ಪ್ರೇಮಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಇಲಾಖೆ ಅಧಿಕಾರಿ ಗಂಗಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.