ADVERTISEMENT

ಶಿಕ್ಷಣ ನೀಡುವುದು ಪುಣ್ಯದ ಕೆಲಸ: ಸಚಿವ ಡಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:47 IST
Last Updated 19 ಜನವರಿ 2026, 6:47 IST
ಹಿರಿಯೂರಿನಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಚಿವ ಡಿ. ಸುಧಾಕರ್ ಉದ್ಘಾಟಿಸಿದರು
ಹಿರಿಯೂರಿನಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಸಚಿವ ಡಿ. ಸುಧಾಕರ್ ಉದ್ಘಾಟಿಸಿದರು   

ಹಿರಿಯೂರು: ‘ಶಿಕ್ಷಣ ಸಂಸ್ಥೆಗಳನ್ನು ತೆರೆದು ವಿದ್ಯಾದಾನ ಮಾಡುವುದು ಪುಣ್ಯದ ಕೆಲಸ. ಅದೇ ರೀತಿ ಶಿಕ್ಷಣ ಪಡೆಯುವುದು ಎಲ್ಲರ ಆದ್ಯ ಕರ್ತವ್ಯ. ಹೆತ್ತವರು ಮಕ್ಕಳಿಗೆ ಆಸ್ತಿ ಮಾಡುವ ಚಿಂತನೆ ಬದಿಗಿಟ್ಟು ಗುಣಮಟ್ಟದ ಶಿಕ್ಷಣ ಕೊಡಿಸಬೇಕು’ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.  

ನಗರದ ಹುಳಿಯಾರು ರಸ್ತೆಯಲ್ಲಿರುವ ತಾಹಾ ಪ್ಯಾಲೇಸ್‌ನಲ್ಲಿ ಶನಿವಾರ ತಾಹಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

‘ಕೆಲವೇ ವರ್ಷಗಳ ಹಿಂದೆ ಅಲ್ಪಸಂಖ್ಯಾತ ಸಮುದಾಯದ ಬಹಳಷ್ಟು ಪೋಷಕರು ಮಕ್ಕಳ ಓದು ಬಿಡಿಸಿ ದುಡಿಮೆಗೆ ಹಚ್ಚುತ್ತಿದ್ದರು. ಈಗ ನಿಮ್ಮಲ್ಲಿಯೂ ಶಿಕ್ಷಣದ ಅರಿವು ಮೂಡಿರುವ ಕಾರಣ ಹೆಣ್ಣುಮಕ್ಕಳನ್ನು ಕೂಡ ಹಿಂಜರಿಕೆ ಇಲ್ಲದೆ ಶಾಲೆ– ಕಾಲೇಜುಗಳಿಗೆ, ವೈದ್ಯಕೀಯ, ತಾಂತ್ರಿಕ ಶಿಕ್ಷಣಕ್ಕೆ, ಐಎಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳಿಸುತ್ತಿರುವುದು ಸಂತಸದ ಸಂಗತಿ. ಶಿಕ್ಷಣ ಮನುಷ್ಯನಿಗೆ ಸಂಸ್ಕಾರವನ್ನು ಕಲಿಸುತ್ತದೆ. ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರಕ್ಕೆ ಸದಾ ಸ್ಪಂದಿಸುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು. 

ADVERTISEMENT

‘ಬೋಧನೆಗೆ ಅರ್ಹ, ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. ವಿಜ್ಞಾನ ಪ್ರಯೋಗಾಲಯ, ಆಟದ ಮೈದಾನವಿದ್ದು, ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿದ್ದೇವೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಶಾಲೆಯನ್ನು ನಡೆಸುತ್ತಿದ್ದೇವೆ’ ಎಂದು ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಸ್. ನವಾಬ್ ಸಾಬ್‌ ತಿಳಿಸಿದರು. 

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್. ಸಾದತ್ ಉಲ್ಲಾ ಮಾತನಾಡಿದರು. ನಗರಸಭೆ ಪೌರಾಯುಕ್ತ ಎ. ವಾಸಿಂ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರೀಫ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾದಿ ರಮೇಶ್, ಕಾಂಗ್ರೆಸ್ ಮುಖಂಡರಾದ ಶಿವಕುಮಾರ್, ಜ್ಞಾನೇಶ್,‌ ‌‌ಗುರುಪ್ರಸಾದ್, ಮಹಮ್ಮದ್ ನಾಜೀಮ್, ಮೊಹಮ್ಮದ್ ನಯಾಜ್, ಜಿ. ದಾದಾಪೀರ್, ಇಸಿಒ ಜಾಫರ್, ಮಹಮದ್ ನಿಜಾಮ್, ಮುಖ್ಯ ಶಿಕ್ಷಕ ಉಮೇಶ್, ಸಲಹೆಗಾರ ಶಬ್ಬೀರ್ ಹಾಜರಿದ್ದರು.