ಹಿರಿಯೂರು: ತಾಲ್ಲೂಕಿನ ಐಮಂಗಲ ಪೊಲೀಸ್ ತರಬೇತಿ ಶಾಲೆಯಲ್ಲಿ ಇಬ್ಬರು ಬೋಧಕರು ಪ್ರಶಿಕ್ಷಣಾರ್ಥಿಗಳಿಂದ ಹಣ ವಸೂಲಿ ಮಾಡಿದ್ದಾರೆಂದು ಆರೋಪಿಸಿ ಶಾಲೆಯ ಪ್ರಾಂಶುಪಾಲರು ಐಮಂಗಲ ಠಾಣೆಗೆ ದೂರು ನೀಡಿದ್ದಾರೆ.
ಬುನಾದಿ ತರಬೇತಿ ನೀಡುತ್ತಿರುವ ಬೋಧಕರಾದ ಈ.ಮಹಲಿಂಗಪ್ಪ, ಎಸ್.ವಿ. ರವಿನಾಯ್ಕ್ ವಿರುದ್ಧ ಪ್ರಾಂಶುಪಾಲ ಎನ್. ಶ್ರೀನಿವಾಸ್ ಆ. 6ರಂದು ದೂರು ನೀಡಿದ್ದಾರೆ.
ಈ. ಮಹಲಿಂಗಪ್ಪ ಅವರು ಪ್ರಶಿಕ್ಷಣಾರ್ಥಿ ಮಂಜುನಾಥ್ ಛಲವಾದಿ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ ಜೂನ್ 26 ಮತ್ತು ವಿವಿಧ ದಿನಾಂಕಗಳಂದು ₹ 62,000, ಎಸ್.ವಿ. ರವಿನಾಯ್ಕ್ ಅವರು ಶಿವನಗೌಡ ಮತ್ತು ಇತರೆ ಪ್ರಶಿಕ್ಷಣಾರ್ಥಿಗಳಿಂದ ಮೇ 20ರಂದು ಸರ್ಕಾರಿ ವಾಹನಕ್ಕೆ ಸೌಂಡ್ ಸಿಸ್ಟಂ ಹಾಕಿಸಬೇಕೆಂದು ₹ 200 ರೂಪಾಯಿ, ಡ್ರೈಫ್ರೂಟ್ಸ್‌ಗಾಗಿ ತಲಾ ₹ 250 ರೂಪಾಯಿ, ಜನ್ಮದಿನ ಆಚರಣೆಗಾಗಿ ತಲಾ ₹ 500 ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಾಂಶುಪಾಲರ ದೂರು ಆಧರಿಸಿ ಮೊ.ನಂ.121/2025 ಕಲಂ 308(2)ಬಿಎನ್ ಎಸ್–23 ರೀತ್ಯ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.