ADVERTISEMENT

ಹಿರಿಯೂರು | ಕಾಮಗಾರಿ ಅವ್ಯವಸ್ಥೆ; ಸಂಚಾರ ಸಂಕಟ

ಸುವರ್ಣಾ ಬಸವರಾಜ್
Published 19 ಡಿಸೆಂಬರ್ 2025, 7:22 IST
Last Updated 19 ಡಿಸೆಂಬರ್ 2025, 7:22 IST
<div class="paragraphs"><p>ಹಿರಿಯೂರಿನ ತಾಲ್ಲೂಕು ಕಚೇರಿಗೆ ಹೊಂದಿಕೊಂಡಿರುವ ಎಸ್‌ಬಿಐ ಮುಂಭಾಗದಲ್ಲಿ ರಸ್ತೆ ವಿಸ್ತರಣೆಗೆಂದು ನಿರ್ಮಿಸಿರುವ ಬಾಕ್ಸ್ ಚರಂಡಿ</p></div>

ಹಿರಿಯೂರಿನ ತಾಲ್ಲೂಕು ಕಚೇರಿಗೆ ಹೊಂದಿಕೊಂಡಿರುವ ಎಸ್‌ಬಿಐ ಮುಂಭಾಗದಲ್ಲಿ ರಸ್ತೆ ವಿಸ್ತರಣೆಗೆಂದು ನಿರ್ಮಿಸಿರುವ ಬಾಕ್ಸ್ ಚರಂಡಿ

   

ಹಿರಿಯೂರು: ನಗರದ ಪ್ರವಾಸಿ ಮಂದಿರ ವೃತ್ತದಿಂದ ಹುಳಿಯಾರು ರಸ್ತೆಯ ವಾಣಿವಿಲಾಸ ಬಲನಾಲೆಯವರೆಗಿನ ರಸ್ತೆ ವಿಸ್ತರಣೆಯಲ್ಲಿನ ಅವ್ಯವಸ್ಥೆಯಿಂದ ನಾಗರಿಕರು ಹೈರಾಣಾಗಿದ್ದಾರೆ.

ವೇದಾವತಿ ಸೇತುವೆವರೆಗೆ ಒಂದೂವರೆ ವರ್ಷದಿಂದ ರಸ್ತೆ ವಿಸ್ತರಣೆ ನಡೆಯುತ್ತಿದ್ದು, ರಿಲಯನ್ಸ್ ಪೆಟ್ರೋಲ್ ಬಂಕ್‌ಗೆ ಅರ್ಧದಷ್ಟು ಭಾಗದ ರಸ್ತೆಗೆ ಮಾತ್ರ ಡಾಂಬರ್‌ ಹಾಕಲಾಗಿದೆ. ಕಟ್ಟಡ ತೆರವುಗೊಳಿಸುವಲ್ಲಿ ತೋರಿದ ಆತುರವನ್ನು ರಸ್ತೆ ಅಭಿವೃದ್ಧಿಗೆ ತೋರಿಸುತ್ತಿಲ್ಲ ಎಂಬುದಕ್ಕೆ ನಿತ್ಯ ನಡೆಯುತ್ತಿರುವ ಕಾಮಗಾರಿ ಕನ್ನಡಿ ಹಿಡಿದಂತಿದೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ನಂತರವೂ ಉಳಿದರ್ಧ ಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ADVERTISEMENT

ವೇದಾವತಿ ಸೇತುವೆಯಿಂದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ವರೆಗೆ ರಸ್ತೆಯುದ್ದಕ್ಕೂ ಗುಂಡಿಗಳೇ ಕಾಣ ಸಿಗುತ್ತಿದ್ದರೂ ಗುಂಡಿ ಮುಚ್ಚುವ ಅಥವಾ ತಾತ್ಕಾಲಿಕವಾಗಿ ಡಾಂಬರ್‌ ಹಾಕುವ ಕೆಲಸ ನಡೆಯದ ಕಾರಣ ವಾಹನ ಸವಾರರು, ಪಾದಚಾರಿಗಳು ನಿತ್ಯ ದೂಳಿನಲ್ಲಿ ಮಿಂದೇಳಬೇಕಾಗಿದೆ. ಬ್ಯಾಂಕ್‌ ಪಕ್ಕದಲ್ಲಿ ಹಾದುಹೋಗಿರುವ ಹಳ್ಳಕ್ಕೆ ನಿರ್ಮಿಸುತ್ತಿರುವ ಸೇತುವೆ ಬಗ್ಗೆಯೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

‘ಸೇತುವೆಯನ್ನು ತಾಲ್ಲೂಕು ಕಚೇರಿ ಹಾಗೂ ಆಂಜನೇಯಸ್ವಾಮಿ ದೇವಸ್ಥಾನದ ಸಮೀಪದಲ್ಲಿ ರಸ್ತೆಯ ಎತ್ತರದ ಭಾಗದಲ್ಲಿ ನಿರ್ಮಿಸಬೇಕಿತ್ತು. ಆದರೆ ಎಂಜಿನಿಯರ್‌ಗಳು ಆ ಕೆಲಸ ಮಾಡದ ಕಾರಣ ಭವಿಷ್ಯದಲ್ಲಿ ಮತ್ತೆ ರಸ್ತೆ ಸಂಚಾರದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಎಸ್‌ಬಿಐ ಮುಂದೆ ಮತ್ತೊಂದು ಅಧ್ವಾನ: ರಸ್ತೆ ವಿಸ್ತರಣೆಗೆ ಮುಂದಾಗಿರುವ ನಗರಸಭೆ ಆಡಳಿತ ತಾಲ್ಲೂಕು ಕಚೇರಿಗೆ ಹೊಂದಿಕೊಂಡಿರುವ ಎಸ್‌ಬಿಐ ಮುಂದೆ ಒಂದೂವರೆ ವರ್ಷದ ಹಿಂದೆ ಬಾಕ್ಸ್ ಚರಂಡಿ ನಿರ್ಮಿಸಿ, ಅದಕ್ಕೆ ಸ್ಲ್ಯಾಬ್ ಹಾಕದೆ ಹಾಗೆಯೇ ಬಿಟ್ಟಿದೆ. 

‘ಹಿರಿಯ ನಾಗರಿಕರು ಜೀವ ಕೈಯಲ್ಲಿ ಹಿಡಿದು ಚರಂಡಿ ದಾಟಬೇಕಿದೆ. ಎಡಭಾಗದಲ್ಲಿ ರಸ್ತೆ ವಿಸ್ತರಣೆ ಕೈಗೆತ್ತಿಕೊಳ್ಳದಿದ್ದರೆ ಈ ಭಾಗದಲ್ಲಿ ತುರ್ತಾಗಿ ಚರಂಡಿ ನಿರ್ಮಿಸುವ ಅಗತ್ಯ ಏನಿತ್ತು? ವಿಶಾಲವಾದ ರಸ್ತೆಯ ಅಗತ್ಯ ನಗರಕ್ಕೆ ಇದೆ. ಆದರೆ ವಿಸ್ತರಣೆ ಹೆಸರಿನಲ್ಲಿ ಸಾರ್ವಜನಿಕರಿಗೆ ಹಿಂಸೆ ನೀಡುವುದು ಎಷ್ಟು ಸರಿ’ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. 

‘ಎಸ್‌ಬಿಐ ಮುಂದೆ ನಿರ್ಮಿಸಿರುವ ಬಾಕ್ಸ್ ಚರಂಡಿಯನ್ನು ಚಪ್ಪಡಿ ಅಥವಾ ಸಿಮೆಂಟ್ ಸ್ಲ್ಯಾಬ್‌ನಿಂದ ಮುಚ್ಚಬೇಕು. ವೇದಾವತಿ ಸೇತುವೆಯಿಂದ ಗ್ರಾಮೀಣ ಬ್ಯಾಂಕ್‌ವರೆಗಿನ ರಸ್ತೆಗೆ ಡಾಂಬರ್‌ ಹಾಕಬೇಕು. ಪ್ರವಾಸಿ ಮಂದಿರ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು’ ಎಂದು ಛಾಯಾಗ್ರಾಹಕರ ಸಂಘದ ಸದಸ್ಯ ವಹೀದ್ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.