ಹಿರಿಯೂರು: ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಲು ಉಪ ಕಸುಬಾಗಿ ಮೀನು ಕೃಷಿಯನ್ನು ಅಳವಡಿಸಿಕೊಂಡಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದು ಶಿವಮೊಗ್ಗದ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ. ಜಗದೀಶ್ ಹೇಳಿದರು.
ತಾಲ್ಲೂಕಿನ ಬಬ್ಬೂರು ಫಾರಂನಲ್ಲಿ ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಮೀನುಕೃಷಿ–ಭಾರತೀಯ ಗೆಂಡೆ ಮೀನು ಮರಿಗಳ ಉತ್ಪಾದನೆ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದರೂ ಪೌಷ್ಠಿಕ ಆಹಾರದ ಕೊರತೆ ನೀಗಿಸುವಲ್ಲಿ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಮನುಷ್ಯನ ದೇಹದ ಹಲವು ಕಾಯಿಲೆಗಳಿಗೆ ವಿಶೇಷವಾಗಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಮೀನಿನ ಆಹಾರ ಅತ್ಯಂತ ಸೂಕ್ತ. ಸರಳ, ಕಡಿಮೆ ಶ್ರಮ ಹಾಗೂ ಖರ್ಚು ತಗುಲುವ ಮೀನು ಕೃಷಿಯನ್ನು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನಡೆಸಬಹುದಾಗಿದೆ. ವಿವಿಧ ತಳಿಯ ಮೀನುಗಳನ್ನು ಉತ್ಪಾದಿಸುವ ಮೂಲಕ ನಿರಂತರ ಆದಾಯ ಪಡೆದು ಕುಟುಂಬದ ಆರ್ಥಿಕ ಸ್ಥಿತಿಯನ್ನು ಚೇತರಿಸುವಂತೆ ಮಾಡಿಕೊಳ್ಳಬಹುದು. ಮೀನು ಕೃಷಿ ಉತ್ತೇಜಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಗೆ ತಂದಿದ್ದು, ರೈತರು ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಅವರು ತಿಳಿಸಿದರು.
ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಸುರೇಶ್ ಏಕಬೋಟೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಓ.ಕುಮಾರ್ ಮಾತನಾಡಿದರು. ಸುಮನ, ಶೃತಿಶ್ರೀ, ಶಿವಲೀಲ ಎಸ್. ಕುಕನೂರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.