ADVERTISEMENT

ಹಿರಿಯೂರು | ನಿರ್ಮಾಣವಾಗದ ಸೇತುವೆ; ‘ಸಂಚಾರ’ದ ಸಮಸ್ಯೆ

ವಾಣಿವಿಲಾಸ ಜಲಾಶಯದ ಕೋಡಿ ಹರಿಯುವ ಜಾಗ; ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಭೀತಿಯಲ್ಲಿ ಸ್ಥಳೀಯರು

ಸುವರ್ಣಾ ಬಸವರಾಜ್
Published 21 ಅಕ್ಟೋಬರ್ 2025, 6:17 IST
Last Updated 21 ಅಕ್ಟೋಬರ್ 2025, 6:17 IST
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ವಾಹನಗಳು ಸಾಗುತ್ತಿರುವುದು
ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಕೋಡಿ ಭಾಗದಲ್ಲಿ ನಿರ್ಮಿಸಿರುವ ರಸ್ತೆಯಲ್ಲಿ ವಾಹನಗಳು ಸಾಗುತ್ತಿರುವುದು   

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯ ಭಾನುವಾರ ಬೆಳಿಗ್ಗೆ 4ನೇ ಬಾರಿಗೆ ಕೋಡಿ ಬಿದ್ದಿರುವುದು ಸ್ಥಳೀಯರಿಗೆ ಒಂದೆಡೆ ಸಂತಸ ತಂದಿದ್ದರೆ, 3 ವರ್ಷ ಕಳೆದರೂ ಕೋಡಿ ಹರಿಯುವ ಜಾಗದಲ್ಲಿ ಸೇತುವೆ ನಿರ್ಮಿಸದಿರುವುದು ಬೇಸರವನ್ನೂ ಮೂಡಿಸಿದೆ. 

2022 ಸೆ.2 ರಂದು ವಾಣಿವಿಲಾಸ ಜಲಾಶಯ 2ನೇ ಬಾರಿಗೆ ಕೋಡಿ ಬಿದ್ದಾಗ ಹೊಸದುರ್ಗ– ಹಿರಿಯೂರು ನಗರಗಳನ್ನು ಸಂಪರ್ಕಿಸುವ ರಸ್ತೆಯು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಈ ಎರಡು ನಗರಗಳ ನಡುವೆ ಸಂಚರಿಸುತ್ತಿದ್ದ ವಾಹನಗಳು ವಾಣಿವಿಲಾಸಪುರಕ್ಕೆ ಬಂದು, ಮರಳಿ ಅತ್ಯಂತ ಕಿರಿದಾದ ಕಕ್ಕಯ್ಯನಹಟ್ಟಿ ರಸ್ತೆ ಮಾರ್ಗವಾಗಿ 8–10 ಕಿ.ಮೀ. ಸುತ್ತಿಕೊಂಡು ಹೊಸದುರ್ಗ ಬೈಪಾಸ್ ರಸ್ತೆಗೆ ತೆರಳುತ್ತಿದ್ದವು. 

ಜನರಿಂದಲೇ ತಾತ್ಕಾಲಿಕ ಸೇತುವೆ: 

ADVERTISEMENT

2023ರ ಜನವರಿಯಲ್ಲಿ ವಾಣಿವಿಲಾಸಪುರದ ಗ್ರಾಮಸ್ಥರು, ಖಾಸಗಿ ಬಸ್ ಮಾಲೀಕರ ಸಂಘದವರು ₹ 80 ಸಾವಿರ ಖರ್ಚು ಮಾಡಿ 8 ಬೃಹತ್ ಗಾತ್ರದ ಸಿಮೆಂಟ್ ಪೈಪ್‌ಗಳನ್ನು ಒಂದಕ್ಕೊಂದು ಹೊಂದಿಸಿ, ಕಿತ್ತು ಹೋಗಿದ್ದ ಕೋಡಿಯ ಜಾಗದಲ್ಲಿ ಜೋಡಿಸಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿದ್ದರು. ಜೆಸಿಬಿ ಹಾಗೂ ಟ್ರ್ಯಾಕ್ಟರ್ ಬಳಸಿ ಗುಂಡಿ ಬಿದ್ದಿದ್ದ ಜಾಗಕ್ಕೆ ಮಣ್ಣುತುಂಬಿ ವಾಹನಗಳು ಓಡಾಡಲು ಅನುವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದರು. 

ಭಾನುವಾರ ರಾತ್ರಿ ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವ ಕಾರಣ ಈ ವರ್ಷದ ದಾಖಲೆ ಎಂಬಂತೆ 14,910 ಕ್ಯುಸೆಕ್‌ಗೆ ಒಳಹರಿವು ಹೆಚ್ಚಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಿದ ಕಾರಣಕ್ಕೆ ಕೋಡಿಗೆ ಅಳವಡಿಸಿದ್ದ ಪೈಪುಗಳು ಕಾಣದ ರೀತಿಯಲ್ಲಿ ಸೋಮವಾರ ಕೋಡಿಯ ನೀರು ಹರಿಯುತ್ತಿದೆ. ಒಂದೇ ರಾತ್ರಿಗೆ ಜಲಾಶಯಕ್ಕೆ ಮುಕ್ಕಾಲು ಅಡಿ ನೀರು ಬಂದಿದೆ. ಒಳಹರಿವಿನಷ್ಟೇ ಪ್ರಮಾಣದ ನೀರು ಕೋಡಿಯಲ್ಲಿ ಹರಿದರೆ ಪೈಪುಗಳಿಂದ ನಿರ್ಮಿಸಿರುವ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವ ಜೊತೆಗೆ ರಸ್ತೆ ಕಿತ್ತು ಹೋಗುವುದು ಖಚಿತ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. 

‘ಇದೇ ಜನವರಿಯಲ್ಲಿ ಬಾಗಿನ ಅರ್ಪಣೆಗೆ ಬಂದಿದ್ದ ಮುಖ್ಯಮಂತ್ರಿಗಳಿಗೆ ಕೋಡಿ ಭಾಗದಲ್ಲಿ ಸೇತುವೆ ನಿರ್ಮಿಸಿಕೊಡುವಂತೆ ಸಾರ್ವಜನಿಕರು ಮಾಡಿದ್ದ ಮನವಿಗೆ ಸರ್ಕಾರದ ಸ್ಪಂದನೆ ದೊರೆತಿಲ್ಲ. ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರಿಗೆ ನೀರಾವರಿ ವಿಚಾರದಲ್ಲಿ ಇರುವ ಬದ್ಧತೆ ಶೂನ್ಯ ಎಂದರೆ ತಪ್ಪಾಗದು. ಅಣೆಕಟ್ಟೆಯ ನಿರ್ವಹಣೆ, ಸಂರಕ್ಷಣೆ ವಿಚಾರದಲ್ಲೂ ಅಸಡ್ಡೆ ಎದ್ದು ಕಾಣುತ್ತದೆ. ಕೋಡಿ ಭಾಗದಲ್ಲಿ ಸೇತುವೆ ನಿರ್ಮಿಸಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅರ್ಥವಾಗದ ಸಂಗತಿಯಲ್ಲ. ಹೊಸ ಸೇತುವೆ ನಿರ್ಮಿಸದಿದ್ದರೆ, ಹೊಸದುರ್ಗ–ಹಿರಿಯೂರು ನಡುವಿನ ಬಸ್ ಸಂಚಾರದ ಅವಧಿ ಅರ್ಧಗಂಟೆ ಹೆಚ್ಚಾಗುತ್ತದೆ. ರಸ್ತೆ ಎಡವಟ್ಟಿನಿಂದ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗುತ್ತದೆ. ಹೀಗಾಗಿ ಅಣೆಕಟ್ಟೆಯ ಕೋಡಿಗೆ ಸಂಬಂಧಿಸಿರುವ ಎರಡೂ ಕ್ಷೇತ್ರಗಳ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ನೂತನ ಸೇತುವೆ ನಿರ್ಮಿಸಬೇಕು’ ಎಂದು ತಾಲ್ಲೂಕು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಬೀವುಲ್ಲಾ ಒತ್ತಾಯಿಸಿದ್ದಾರೆ. 

ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡು ವಾಣಿವಿಲಾಸಪುರ ಗ್ರಾಮದ ಕಡೆ ಹೋಗುವ ರಸ್ತೆಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಕೋಡಿಯ ಕೆಳಭಾಗದಲ್ಲಿಯೂ ಸೇತುವೆ ನಿರ್ಮಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ
ಡಿ. ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.