ADVERTISEMENT

ಹಿರಿಯೂರು | ನಾಲೆ, ನದಿ ತಟದಲ್ಲಿ ತ್ಯಾಜ್ಯ: ರೋಗಭೀತಿ

ಕಸ ಎಸೆಯುವವರಿಗೆ ಕಡಿವಾಣ ಇಲ್ಲ, ನಗರಸಭೆ, ನೀರಾವರಿ ನಿಗಮದ ಅಧಿಕಾರಿಗಳ ಮೌನ: ಪರಿಸರ ಪ್ರೇಮಿಗಳ ಆಕ್ರೋಶ

ಸುವರ್ಣಾ ಬಸವರಾಜ್
Published 17 ಜೂನ್ 2025, 6:31 IST
Last Updated 17 ಜೂನ್ 2025, 6:31 IST
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ಹಾದು ಹೋಗಿರುವ ವಾಣಿವಿಲಾಸ ಜಲಾಶಯದ ಬಲನಾಲೆಯ ದಡದಲ್ಲಿ ಬಾರ್ ಮತ್ತು ಕಲ್ಯಾಣ ಮಂಟಪಗಳವರು ಸುರಿದಿರುವ ತ್ಯಾಜ್ಯ.
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿ ಹಾದು ಹೋಗಿರುವ ವಾಣಿವಿಲಾಸ ಜಲಾಶಯದ ಬಲನಾಲೆಯ ದಡದಲ್ಲಿ ಬಾರ್ ಮತ್ತು ಕಲ್ಯಾಣ ಮಂಟಪಗಳವರು ಸುರಿದಿರುವ ತ್ಯಾಜ್ಯ.   

ಹಿರಿಯೂರು: ನಗರದಲ್ಲಿ ಹಾದು ಹೋಗಿರುವ ವಾಣಿವಿಲಾಸ ಜಲಾಶಯದ ಎಡ- ಬಲ ನಾಲೆ, ವೇದಾವತಿ ನದಿಯಲ್ಲಿ ತ್ಯಾಜ್ಯ ಚೆಲ್ಲಾಡುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ರೋಗಭೀತಿ ಎದುರಾಗಿದೆ. ನಾಲೆ, ನದಿಗೆ ನಿತ್ಯ ತ್ಯಾಜ್ಯ ಎಸೆಯುವವರಿಗೆ ಕಡಿವಾಣ ಇಲ್ಲವಾಗಿದ್ದು ಇಡೀ ಪ್ರದೇಶ ಮಲಿನಗೊಂಡಿದೆ.

ನಾಲೆ ಹಾದು ಹೋಗಿರುವ ಭಾಗದ ಬಡಾವಣೆಗಳ ನಿವಾಸಿಗಳೇ ತಮ್ಮ ಮನೆಯ ತ್ಯಾಜ್ಯವನ್ನೆಲ್ಲ ಚರಂಡಿಗಳ ಮೂಲಕ, ಕೆಲವರು ನೇರವಾಗಿ ಮೂಟೆ ಕಟ್ಟಿಕೊಂಡು ಬಿಸಾಡುವ ಮೂಲಕ ನಾಲೆಗಳನ್ನು ಮಲಿನಗೊಳಿಸುತ್ತಿದ್ದಾರೆ. ವೇದಾವತಿ ನದಿಗೆ ಹಿರಿಯೂರು ನಗರದ ಮುಕ್ಕಾಲು ಭಾಗದ ಚರಂಡಿಗಳ ತ್ಯಾಜ್ಯವನ್ನು ನೇರವಾಗಿ ಹರಿಬಿಡುತ್ತಿದ್ದಾರೆ. 

ನಾಲೆಗಳ ಹೊಣೆ ಹೊತ್ತಿರುವ ವಿಶ್ವೇಶ್ವರಯ್ಯ ನೀರಾವರಿ ನಿಗಮದವರಿಗೆ ವಾಸ್ತವ ಸಂಗತಿ ತಿಳಿದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರಸಭೆಗೆ ಯಾವಾಗಲೋ ಒಮ್ಮೆ ನೋಟಿಸ್‌ ನೀಡಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮಕ್ಕೆ ನಿಗಮ ಮುಂದಾಗಿಲ್ಲ.

ADVERTISEMENT

ನೋಟಿಸ್ ಪಡೆದ ನಗರಸಭೆ ಆಡಳಿತವು ‘ನಾಲೆಗಳನ್ನು ಸ್ವಚ್ಛಗೊಳಿಸುವ ಕೆಲಸ ತನಗೆ ಸಂಬಂಧಿಸಿಯೇ ಇಲ್ಲ’ ಎಂಬಂತೆ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ನಾಲೆಯ ದಂಡೆಗೆ ಹೊದಿಸಿರುವ ಕಲ್ಲುಗಳು ಒಂದೊಂದೆ ಮಾಯವಾಗುತ್ತಿದ್ದು, ಬದಲಿಗೆ ನಾಲೆಯ ತುಂಬ ಕಸದ ರಾಶಿ ತುಂಬಿಕೊಳ್ಳುತ್ತಿದೆ. ಎಲ್ಲೆಡೆ ದುರ್ನಾತ ಮೂಗಿಗೆ ಬಡಿಯುತ್ತಿದೆ.

ನಾಲೆಯ ದಡಲ್ಲಿಯೂ ತ್ಯಾಜ್ಯ: ವಾಣಿವಿಲಾಸ ಬಲನಾಲೆಯ 12ನೇ ಕಿ.ಮೀ. ಕಲ್ಲಿನ ಹತ್ತಿರ ಬಾರ್ ಮತ್ತು ರೆಸ್ಟೋರೆಂಟ್‌, ಕಲ್ಯಾಣ ಮಂಟಪಗಳಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲ್, ಮದ್ಯದ ಪೌಚ್‌ಗಳನ್ನು ರಾಶಿರಾಶಿಯಾಗಿ ಬಿಸಾಡಲಾಗಿದೆ. ಕೆಲವು ವರ್ತಕರೂ ತ್ಯಾಜ್ಯ ವಸ್ತುಗಳನ್ನು ದೊಡ್ಡದೊಡ್ಡ ಚೀಲಗಳಲ್ಲಿ ತುಂಬಿ ನಾಲೆಯ ಪಕ್ಕದಲ್ಲಿರುವ ರಸ್ತೆ ಬದಿಯಲ್ಲಿ  ಬಿಸಾಡಿದ್ದಾರೆ. ಬಾಟಲ್‌ಗಳಲ್ಲಿ, ಮದ್ಯದ ಪೌಚ್‌ಗಳಲ್ಲಿ ಮಳೆ ಬಂದಾಗ ನೀರು ತುಂಬಿಕೊಂಡು ನಿಧಾನಕ್ಕೆ ಸೊಳ್ಳೆಗಳ ಉತ್ಪಾದನೆಗೆ ದಾರಿಮಾಡಿಕೊಡುತ್ತಿದೆ.

ರಾಷ್ಟ್ರೀಯ ಹೆದ್ದಾರಿ– 48ರ ಸರ್ವೀಸ್‌ ರಸ್ತೆಯಲ್ಲಿ ವೇದಾವತಿ ಸೇತುವೆ ಮೇಲ್ಭಾಗದ ಖಾಲಿ ಜಾಗದಲ್ಲೂ ತ್ಯಾಜ್ಯ ಬಿಸಾಡಲಾಗಿದೆ. ಸರ್ವೀಸ್‌ ರಸ್ತೆಯಲ್ಲಿ ಸಂಚರಿಸುವವರು ಸಹಿಸಲಾಗದಷ್ಟು ದುರ್ವಾಸನೆ ರಾಚುತ್ತದೆ. ಮಾಂಸ ಮಾರುಕಟ್ಟೆಯ ತ್ಯಾಜ್ಯ, ಖಾಸಗಿ ಆಸ್ಪತ್ರೆಗಳ ತ್ಯಾಜ್ಯವನ್ನು ನದಿಗೆ ಎಸೆಯುವುದೂ ಮುಂದುವರಿದಿದೆ.

‘ಮಾಲಿನ್ಯಕ್ಕೆ ಸಂಬಂಧಿಸಿದ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಸಂಬಂಧಿಸಿದವರಿಗೆ ನಗರಸಭೆ ಆಡಳಿತ ನೋಟಿಸ್ ಕೊಟ್ಟು ಮೌನಕ್ಕೆ ಶರಣಾಗುತ್ತದೆ. ಹಂದಿ, ಬೀದಿ ನಾಯಿಗಳ ಹಾವಳಿ ಬಗ್ಗೆ ಲೆಕ್ಕವಿಲ್ಲದಷ್ಟು ಬಾರಿ ದೂರು ನೀಡಿದ್ದರೂ ಕ್ರಮ ಮಾತ್ರ ಶೂನ್ಯ’ ಎಂದು ನಿವೃತ್ತ ಪ್ರಾಂಶುಪಾಲ, ಸಿಎಂ ಬಡಾವಣೆಯ ನಿವಾಸಿ ಎಂ.ಜಿ.ರಂಗಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ನಗರಸಭೆ ಆಡಳಿತ ನಗರದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಜಿಲ್ಲೆಯ ಜವಾಬ್ದಾರಿಯ ಹೊಣೆ ಹೊತ್ತಿರುವ ಸಚಿವರು ತಮ್ಮ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬೇಕಿದ್ದಲ್ಲಿ ನಿಗದಿತವಾಗಿ ಜನಸಂಪರ್ಕ ಸಭೆಗಳನ್ನು ನಡೆಸಬೇಕಿದೆ ಎಂದು ಸಾರ್ವಜನಿಕರು ಕೋರುತ್ತಾರೆ.

'ನಗರದಲ್ಲಿ ಹಾದು ಹೋಗಿರುವ ವಾಣಿವಿಲಾಸ ಜಲಾಶಯದ ಎರಡೂ ನಾಲೆಗಳು ತ್ಯಾಜ್ಯ ಹಾಕದ ರೀತಿ ರಕ್ಷಣಾ ಬೇಲಿ ನಿರ್ಮಿಸಬೇಕು. ವೇದಾವತಿ ನದಿ ಶುದ್ಧೀಕರಣ ಯೋಜನೆಗೆ ಚಾಲನೆ ನೀಡಬೇಕು. ನೀರಿನ ಮೂಲಗಳಿಗೆ ತ್ಯಾಜ್ಯ ಸೇರಿಸುವವರ ವಿರುದ್ಧ ಪರಿಸರ ಮಾಲಿನ್ಯ ಮಂಡಳಿಯವರು ಕ್ರಮ ಜರುಗಿಸಬೇಕು' ಎಂದು ಸ್ಥಳೀಯರು ಒತ್ತಾಯಿಸಿದರು.

ತ್ಯಾಜ್ಯ ವಸ್ತುಗಳನ್ನು ಚೀಲಗಳಲ್ಲಿ ತುಂಬಿ ರಸ್ತೆಯಂಚಿಗೆ ಬಿಸಾಡಿರುವುದು.
ವಾಣಿವಿಲಾಸ ನಾಲೆಯ ಅಕ್ಕಪಕ್ಕದಲ್ಲಿ ತ್ಯಾಜ್ಯ ಸುರಿಯುತ್ತಿರುವವರಿಗೆ ನೋಟಿಸ್ ಜಾರಿ ಮಾಡಿ ಕಸವನ್ನು ತಮ್ಮಲ್ಲಿಯೇ ಸಂಗ್ರಹಿಸಿ ನಗರಸಭೆಯ ವಾಹನ ಬಂದಾಗ ಅದಕ್ಕೆ ಕೊಡುವಂತೆ ಸೂಚಿಸುತ್ತೇವೆ
ಎಂ.ವಾಸಿಂ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.