
ಹಿರಿಯೂರು: ‘ನಗರದ ಪ್ರಮುಖ ಬೀದಿಗಳು ತೇರುಮಲ್ಲೇಶ್ವರಸ್ವಾಮಿ ಜಾತ್ರೆಯ ಪ್ರಯುಕ್ತ ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸುತ್ತಿದ್ದರೆ, ಮತ್ತೊಂದೆಡೆ ಇಡೀ ನೆಹರೂ ಕ್ರೀಡಾಂಗಣ ರಾಜ್ಯಮಟ್ಟದ ಹೊನಲು– ಬೆಳಕಿನ ಕಬಡ್ಡಿ ಟೂರ್ನಿ ಪ್ರಯುಕ್ತ ವಿದ್ಯುತ್ ದೀಪಾಲಂಕಾರ, ಬೃಹತ್ ಎಲ್‌ಇಡಿ ಪರದೆಗಳೊಂದಿಗೆ ಝಗಮಗಿಸುತ್ತಿದೆ. ಈ ಎರಡನ್ನೂ ಒಟ್ಟೊಟ್ಟಿಗೆ ಕಣ್ತುಂಬಿಕೊಳ್ಳುವ ಸುವರ್ಣಾವಕಾಶ ತಾಲ್ಲೂಕಿನ ಜನರಿಗೆ ಒದಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾದಿ ರಮೇಶ್ ಸಂತಸ ವ್ಯಕ್ತಪಡಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ ನ್ಯೂ ಡೈಮಂಡ್ ಸ್ಫೋರ್ಟ್ಸ್ ಕ್ಲಬ್ ಸಂಸ್ಥೆಯ 40ನೇ ವಾರ್ಷಿಕೋತ್ಸವದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಹೊನಲು–ಬೆಳಕಿನ ಕಬಡ್ಡಿ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.
‘ನ್ಯೂ ಡೈಮಂಡ್ ಕ್ರೀಡಾ ಸಂಸ್ಥೆ ರಾಜ್ಯ, ಅಂತರರಾಜ್ಯ, ರಾಷ್ಟ್ರೀಯ ಮಟ್ಟದ ಕೊಕ್ಕೊ, ಕಬಡ್ಡಿ ಟೂರ್ನಿಗಳನ್ನು ಆಯೋಜಿಸುವ ಮೂಲಕ ರಾಜ್ಯದ ಕ್ರೀಡಾ ನಕ್ಷೆಯಲ್ಲಿ ತನ್ನ ಹೆಸರು ದಾಖಲಿಸಿದೆ. ಬೇರೆ ಬೇರೆ ಕಾರಣಗಳಿಂದ ಐದಾರು ವರ್ಷ ದೊಡ್ಡಮಟ್ಟದ ಟೂರ್ನಿಗಳನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಕ್ರೀಡಾ ಪ್ರೇಮಿಯಾಗಿರುವ ಡಿ. ಸುಧಾಕರ್ ನೇತೃತ್ವದಲ್ಲಿ ಪ್ರತಿವರ್ಷ ತೇರುಮಲ್ಲೇಶ್ವರ ಜಾತ್ರೆ ಸಂದರ್ಭದಲ್ಲಿ ರಾಜ್ಯ–ರಾಷ್ಟ್ರಮಟ್ಟದ ಕೊಕ್ಕೊ, ಕಬಡ್ಡಿ ಟೂರ್ನಿಗಳನ್ನು ಆಯೋಜಿಸಲು ನೆರವು ನೀಡುತ್ತೇವೆ’ ಎಂದು ಅವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಎಚ್.ಬಿ. ಯೋಗಾನಂದ್ ಮಾತನಾಡಿ, ‘ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯಮಟ್ಟದ ಟೂರ್ನಿ ಆಯೋಜಿಸಿದ್ದೇವೆ. ಹಿರಿಯೂರು ತಾಲ್ಲೂಕಿನಲ್ಲಿ ಕ್ರೀಡಾಪ್ರೇಮಿಗಳಿಗೆ, ಕ್ರೀಡೆಗೆ ಪ್ರೋತ್ಸಾಹ ನೀಡುವವರಿಗೆ ಕೊರತೆ ಇಲ್ಲ. ಸಚಿವ ಸುಧಾಕರ್ ಅವರಂತಹವರು ನಮ್ಮ ಬೆನ್ನಿಗೆ ನಿಂತಿದ್ದಾರೆ. ದಾನಿಗಳ ನೆರವು ದೊರೆತಿದೆ. ಲೀಗ್ ಕಂ ನಾಕ್ ಔಟ್ ಮಾದರಿಯಲ್ಲಿ ನಡೆಯುವ ಟೂರ್ನಿಗೆ ಶುಕ್ರವಾರ ಸಂಜೆವರೆಗೆ 18 ತಂಡಗಳು ಆಗಮಿಸಿವೆ. ಶನಿವಾರ ಬೆಳಿಗ್ಗೆಯಿಂದ ನಿರಂತರವಾಗಿ ಪಂದ್ಯಗಳನ್ನು ನಡೆಸುತ್ತೇವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾನಸಾ ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷೆ ಮಂಜುಳಾ, ಮಾಜಿ ಸದಸ್ಯರಾದ ಜಗದೀಶ್, ಸುರೇಖಾಮಣಿ, ಗುರುಪ್ರಸಾದ್, ಲಿಂಗರಾಜು ಮಾತನಾಡಿದರು. ಮುಖಂಡರಾದ ಗುರುಪ್ರಸಾದ್, ರವಿ, ಮಧು, ಆರೋಗ್ಯಸ್ವಾಮಿ, ಎಚ್.ಎನ್.ವೆಂಕಟೇಶ್, ದಿವಾಕರ್, ನರಸಿಂಹಮೂರ್ತಿ, ಜ್ಞಾನೇಶ್, ಸಾದಿಕ್, ಅಸ್ಗರ್ ಅಹಮದ್, ಹರೀಶ್, ಹುಲಗಿ ಮಿಲ್ ಸುರೇಶ್, ಎಂಜಿನಿಯರ್ ಮಂಜುನಾಥ್ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.