ಹೊಸದುರ್ಗ: ಈಚೆಗೆ ನಿರಂತರವಾಗಿ ಮಳೆ ಸುರಿದ ಪರಿಣಾಮ ರೈತರು ಸಂತಸದಿಂದ ಹಿಂಗಾರು ಬಿತ್ತನೆಯಲ್ಲಿ ನಿರತರಾಗಿದ್ದಾರೆ.
ಮುಂಗಾರು ಹಂಗಾಮನ ಆರಂಭದಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೆ, ನಂತರ ಭಾರಿ ಪ್ರಮಾಣದ ಮಳೆ ಸುರಿದ ಪರಿಣಾಮ ಬಹುತೇಕ ಬೆಳೆಗಳು ಕೈಕೊಟ್ಟಿದ್ದವು. ರೈತರು ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಪಡೆಯಲು ಆಗಲಿಲ್ಲ. ಇದೀಗ ಭೂಮಿ ಹಸಿಯಾಗಿದ್ದು, ಬಿಸಿಲು ಚುರುಕು ಪಡೆಯುತ್ತಿದ್ದಂತೆಯೇ ಹಿಂಗಾರು ಬಿತ್ತನೆ ವೇಗ ಬಿರುಸಿನಿಂದ ಸಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಬಾಗೂರು , ಹೊನ್ನೆಕೆರೆ, ನಾಗೇನಹಳ್ಳಿ, ಮಂಟೇನಹಳ್ಳಿ, ಶ್ರೀರಂಗಾಪುರ, ಐಲಾಪುರ, ಸಾಣೇಹಳ್ಳಿ, ನೀರಗುಂದ, ಶೆಟ್ಟಿಹಳ್ಳಿ, ಹೊಸಕುಂದೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಆರಂಭವಾಗಿದೆ. ತಾಲ್ಲೂಕಿನಲ್ಲಿ ಕಡಲೆ, ಜೋಳ, ಹುರುಳಿ ಹಿಂಗಾರು ಅವಧಿಯ ಪ್ರಮುಖ ಬೆಳೆಗಳು. ಹಿಂದಿನ ವರ್ಷಗಳ ಬಿತ್ತನೆ ಗುರಿಗೆ ಹೋಲಿಸಿದರೆ ಈ ಬಾರಿ ಕಡಲೆ ಬಿತ್ತನೆ ಗುರಿಯೂ ಸಹ ಅಧಿಕವಾಗಿದೆ. ಕಪ್ಪು ಮಣ್ಣಿನಲ್ಲಿ ಈರುಳ್ಳಿ ಬೆಳೆಯ ನಂತರ ರೈತರು ಕಡಲೆ ಬಿತ್ತನೆಗೆ ಮುಂದಾಗುತ್ತಾರೆ.
ಹಿಂಗಾರು ಬೆಳೆಗಳಿಗೆ ದೊಡ್ಡ ಮಳೆಯ ಅಗತ್ಯವಿಲ್ಲ. ಸಣ್ಣ ಮಳೆಯಾದರೂ ಸಾಕು. ಇಬ್ಬನಿ ವಾತಾವರಣದಲ್ಲಿಯೇ ಈ ಬೆಳೆಗಳು ಬೆಳೆದು ಕೈಗೆಟುಕುತ್ತವೆ.
‘ಕಡಲೆ ಬಿತ್ತನೆಗೆ ಸೂಕ್ತ ಸಮಯವಾಗಿದೆ. ಈಗಾಗಲೇ ನಮ್ಮ ಭಾಗದಲ್ಲಿ ಬಿಳಿಜೋಳ, ಕುಸುಬೆ ಬಿತ್ತನೆಯಾಗಿದೆ . ಬಿಳಿಜೋಳ ಮೇವಿಗಾಗಿ ಮಾತ್ರ. ಬೀಜೋಪಚಾರ ಮಾಡಿ, ಸಂಯುಕ್ತ ತಳಗೊಬ್ಬರ ಹಾಕಿ ಬಿತ್ತನೆ ಮಾಡಲಾಗಿದೆ. ಈರುಳ್ಳಿ ಬೆಳೆದು ಕೈಸುಟ್ಟು ಕೊಂಡಿದ್ದೇವೆ. ಕಡಲೆ ಬೆಳೆಯಾದರೂ ಕೈ ಹಿಡಿದರೆ ಸಾಕು ಎಂಬಂತಾಗಿದೆ’ ಎನ್ನುತ್ತಾರೆ ತಾಲ್ಲೂಕಿನ ಬಾಗೂರು ಗ್ರಾಮದ ರೈತ ಜಿ.ಆರ್. ಮಂಜುನಾಥ್.
‘ಹಿಂಗಾರು ಬಿತ್ತನೆಗೆ ನ. 18ರವರೆಗೂ ಅವಕಾಶವಿದೆ. 750 ಕ್ವಿಂಟಾಲ್ ಕಡಲೆ ಬಿತ್ತನೆಬೀಜ ವಿತರಣೆಯಾಗಿದೆ. ಕಳೆದ ವಾರ 800 ಹೆಕ್ಟೆರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಬಿಡುವು ನೀಡಿರುವುದರಿಂದ ಈ ವಾರ ಬಿತ್ತನೆ ಕಾರ್ಯ ಇನ್ನೂ ಅಧಿಕವಾಗಲಿದೆ. ಕಳೆದ ಬಾರಿಯ ಹಿಂಗಾರಿನಲ್ಲಿ 4,300 ಹೆಕ್ಟೆರ್ ಬಿತ್ತನೆಯಾಗಿತ್ತು. ಅದರಲ್ಲಿ 3,300 ಹೆಕ್ಟೆರ್ ಕಡಲೆ ಇತ್ತು. ಈ ಬಾರಿ 3,300 ಹೆಕ್ಟೆರ್ ಕಡಲೆ, 260 ಹೆಕ್ಟೆರ್ ಬಿಳಿಜೋಳ ಹಾಗೂ 1,300 ಹೆಕ್ಟೆರ್ ಹುರುಳಿ ಬಿತ್ತನೆ ಗುರಿಯಿದೆ. ನೀರಾವರಿ ಸೌಲಭ್ಯ ಇರುವವರು ಮಾತ್ರ ಹಿಂಗಾರು ರಾಗಿ ಬಿತ್ತನೆ ಮಾಡುತ್ತಾರೆ. ಈ ಬಾರಿ ಕಡಲೆ ಬಿತ್ತನೆ ಅಧಿಕವಾಗಿರಬಹುದು’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸಿ. ಎಸ್ ಈಶ.
- ಕಡಲೆಯಾದರೂ ಕೈಹಿಡಿಯಲಿ: ನಿರೀಕ್ಷೆ
ಎಕರೆಗೆ 20ರಿಂದ 25 ಸೇರು ಕಡಲೆಯನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಡಿಬೇಕು. ಭೂಮಿಯಲ್ಲಿ ತೇವಾಂಶ ಕಡಿಮೆ ಇರುವ ಕಾರಣ ಬೇಗ ಮೊಳಕೆ ಬಂದು ಸಸಿಯಾಗಲಿ ಎಂಬ ಉದ್ದೇಶದಿಂದ ನೆನೆಸಲಾಗುತ್ತದೆ. ನಂತರ ಸಿದ್ಧತೆಗೊಂಡಿದ್ದ ಭೂಮಿಗೆ ಟ್ರ್ಯಾಕ್ಟರ್ ಸಹಾಯದಿಂದ ಬಿತ್ತನೆ ಮಾಡಲಾಗಿದೆ. 90 ದಿನದ ಬೆಳೆ ಇದಾಗಿದೆ. ಈರುಳ್ಳಿ ಬೆಳೆದು ₹ 70000ದಿಂದ ₹ 80000 ನಷ್ಟವಾಗಿದೆ. ಕಡಲೆ ಕೈ ಹಿಡಿಯುವ ನಿರೀಕ್ಷೆ ಇದೆ ಎಂದು ಶ್ರೀರಂಗಪುರದ ರೈತ ಜೆ. ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.