ಹೊಸದುರ್ಗ: ಯೂರಿಯಾ ಗೊಬ್ಬರದ ಅಭಾವ ತಪ್ಪಿಸಲು ಅಧಿಕೃತ ಲೈಸೆನ್ಸ್ ಹೊಂದಿರುವ ಎಲ್ಲಾ ಸೊಸೈಟಿಗಳಿಗೂ ಗೊಬ್ಬರ ನೀಡಬೇಕು. ಯಾರಾದರೂ ಸೊಸೈಟಿಯವರು ಹಿಂದೇಟು ಹಾಕಿದರೆ ಇನ್ನೆರಡು ದಿನಗಳಲ್ಲಿ ನೋಟಿಸ್ ಜಾರಿಗೊಳಿಸಿ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಹಕಾರ ಸಂಘಗಳ ಉಪನಿಬಂಧಕ ದಿಲೀಪ್ ಕುಮಾರ್ ಅವರಿಗೆ ದೂರವಾಣಿ ಮೂಲಕ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀರಾಂಪುರ ಸೇರಿದಂತೆ ಹಲವು ಸೊಸೈಟಿಗಳಲ್ಲಿ ಯೂರಿಯಾ ಗೊಬ್ಬರ ಇಳಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ರೈತರಿಗೆ ಸ್ಥಳೀಯ ಸೊಸೈಟಿಗಳಲ್ಲಿಯೇ ಗೊಬ್ಬರ ದೊರೆಯುವಂತಾಗಬೇಕು. ಇದರಿಂದ ಅವರಿಗೆ ಸಮಯ ಹಾಗೂ ಬಾಡಿಗೆ ಹಣ ಉಳಿಯುತ್ತದೆ ಎಂದರು.
ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಪೌಷ್ಟಿಕಾಂಶಯುಕ್ತ ಆಹಾರ ಸೇವನೆ, ಜಂತು ಮಾತ್ರೆ ವಿತರಣೆ, ಕಳಪೆ ಆಹಾರದ ಬಗ್ಗೆ ಪರಿಶೀಲನೆ ನಡೆಸಿ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ನಾಯಿ ಕಡಿತ ಪ್ರಕರಣಗಳು ಜಾಸ್ತಿ ಆಗುತ್ತಿವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕೋಳಿ ಫಾರಂಗಳಲ್ಲಿ ಸತ್ತ ಕೋಳಿಗಳನ್ನು ಸರಿಯಾದ ರೀತಿಯಲ್ಲಿ ಮಣ್ಣು ತೆಗೆದು ಮುಚ್ಚಬೇಕು. ತಪ್ಪಿದರೆ ನೋಟಿಸ್ ಜಾರಿ ಮಾಡಲಾಗುತ್ತದೆ. ಪಶು ಇಲಾಖೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಯವರು ಈ ಬಗ್ಗೆ ಗಮನಹರಿಸಬೇಕು ಎಂದು ಶಾಸಕರು ಸೂಚಿಸಿದರು.
ತಾಲ್ಲೂಕಿನಾದ್ಯಂತ ತೆಂಗಿಗೆ ರೋಗ ಬಾಧೆ ಜಾಸ್ತಿಯಾಗಿದೆ. ನೀವು ಕಚೇರಿಯಲ್ಲಿ ಕೂರುವುದನ್ನು ಬಿಟ್ಟು ರೈತರ ಬಳಿ ಹೋಗಿ ಸಮಸ್ಯೆ ಬಗೆಹರಿಸಿ ಎಂದು ತೋಟಗಾರಿಕೆ ಇಲಾಖೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ವೇಳೆ ತಹಶೀಲ್ದಾರ್ ತಿರುಪತಿ ಪಾಟೀಲ್, ತಾಲ್ಲೂಕು ಪಂಚಾಯಿತಿ ಇಒ ಸುನೀಲ್ ಕುಮಾರ್, ಗ್ಯಾರಂಟಿ ಸಮಿತಿ ಸದಸ್ಯ ಮಹಮ್ಮದ್ ಇಸ್ಮಾಯಿಲ್, ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳಿದ್ದರು.
‘ಪ್ರಜಾವಾಣಿ’ ವರದಿ ಪ್ರಸ್ತಾಪ:
ಹೊಸದುರ್ಗದ ಶಾಲೆಯೊಂದರಲ್ಲಿ ಅಡುಗೆ ಕೋಣೆ ಕಿರಿದಾಗಿರುವ ಬಗ್ಗೆ ಸೆ.1ರಂದು ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ‘ಈ ಬಗ್ಗೆ ಬಿಇಒ ಸೂಕ್ತ ಕ್ರಮ ಕೈಗೊಂಡು ಕಿರಿದಾದ ಅಡುಗೆ ಕೋಣೆಗಳನ್ನು ಗುರುತಿಸಿ ವರದಿ ಕೊಡಿ’ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ಸಭೆಯಲ್ಲಿ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.