
ಹೊಸದುರ್ಗ: ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಕಾಡಿಗೆ ಹೋಗಿ ಮೊಲ ಬೇಟೆಯಾಡಿ, ಆ ಮೊಲಕ್ಕೆ ಓಲೆ ಧರಿಸಿ ಪುನಃ ಕಾಡಿಗೆ ಬಿಡುವ ಮೂಲಕ ಶುಕ್ರವಾರ ವಿಶೇಷವಾಗಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಸಂಕ್ರಾಂತಿ ಎಂದರೆ ಮನೆಯಲ್ಲಿ ಸಿಹಿ ಪದಾರ್ಥ ಸೇವಿಸಿ, ಪೂಜೆ, ಬಂಧು ಬಳಗದೊಟ್ಟಿಗೆ ಪುಣ್ಯ ಸ್ಥಳಗಳಿಗೆ ತೆರಳುವುದು, ಎಳ್ಳು– ಬೆಲ್ಲ ವಿನಿಮಯ ಸರ್ವೇ ಸಾಮಾನ್ಯ. ಆದರೆ, ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಮೊಲ ಭೇಟಿಯಾಡಿ, ನಂತರ ಕಂಚಿವರದರಾಜ ಸ್ವಾಮಿಯ ಉತ್ಸವ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಸಂಕ್ರಾಂತಿ ಆಚರಿಸಲಾಗುವುದು.
ಸಂಕ್ರಾಂತಿ ಹಬ್ಬದ ಅಂಗವಾಗಿ ಗುರುವಾರ ಕಂಚೀವರದರಾಜ ಸ್ವಾಮಿ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಗ್ರಾಮದ ಯುವಕರು, ಹಿರಿಯರ ಮಾರ್ಗದರ್ಶನದಲ್ಲಿ ಅಂದಾಜು 200 ಜನ ಮೊಲದ ಹುಡುಕಾಟಕ್ಕಾಗಿ ಕಾಡಿಗೆ ಹೊರಟರು. ರಾತ್ರಿವರೆಗೂ ಹುಡುಕಿದರೂ ಮೊಲ ಸಿಗದ ಕಾರಣ, ಸಂಕ್ರಾಂತಿ ಆಚರಣೆ ಶುಕ್ರವಾರಕ್ಕೆ ಮುಂದೂಡಲಾಯಿತು. ಶುಕ್ರವಾರವೂ ಅದೇ ಉತ್ಸಾಹದಿಂದ ಗ್ರಾಮಸ್ಥರು ಮೊಲದ ಬೇಟೆಗೆ ಹೊರಟರು. ಸಂಜೆ 4.30 ಹೊತ್ತಿಗೆ ಮೊಲ ಸಿಕ್ಕಿತು. ಜನರ ಉತ್ಸಾಹ ಇಮ್ಮಡಿಯಾಯಿತು.
‘ಇಲ್ಲಿ ಬೇಟೆ ಎಂದರೆ ಪ್ರಾಣಿ ಕೊಲ್ಲುವುದಲ್ಲ. ಜೀವಂತ ಮೊಲವವನ್ನು ಹಿಡಿದು ತಂದು ಬಂಗಾರದ ಓಲೆ ಹಾಕಿ, ರಾತ್ರಿ ಕಂಚೀವರದರಾಜ ಸ್ವಾಮಿಯ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡಲಾಗುತ್ತದೆ. ನಂತರ ಸ್ವಾಮಿ ಉತ್ಸವ ನಡೆಯುತ್ತದೆ. ಹೀಗೆ ಮಾಡುವುದರಿಂದ ಶೂನ್ಯ ಮಾಸದಲ್ಲಿನ ಅಶುಭ ದೂರವಾಗಿ, ಶುಭ ದಿನ ಆರಂಭವಾಗುತ್ತದೆ ಎಂಬುದು ನಮ್ಮ ನಂಬಿಕೆ’ ಎನ್ನುತ್ತಾರೆ ಗ್ರಾಮಸ್ಥ ಸಿದ್ಧರಾಮಣ್ಣ.
‘ಈಗ ಎಲ್ಲ ಊರುಗಳಂತೆ ನಮ್ಮೂರಲ್ಲೂ ವಲಸೆ ಹೋಗಿ ದುಡಿಮೆ ಮಾಡೋ ಜನರೇ ಹೆಚ್ಚು. ಬಹುತೇಕ ಸ್ನೇಹಿತರು, ಬಂಧು– ಬಳಗ ಹಬ್ಬಗಳಿಗೆ ಬರುತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ಹರಟೆ, ಕಷ್ಟ– ಸುಖ ಹಂಚಿಕೊಳ್ಳಲು ಬೇಟೆಯಂತಹ ಕಾರ್ಯದಲ್ಲಿ ಭಾಗಿಯಾಗುವುದು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಯುವಕರೇ ಹೆಚ್ಚು ಬೇಟೆ ಹೋಗುವುದರಿಂದ ಮೊಲ ಯಾರು ಹಿಡಿಯಬಹುದು ಎಂಬ ಕೂತೂಹಲ ಎಲ್ಲರಲ್ಲೂ ಇರುತ್ತದೆ’ ಎನ್ನುತ್ತಾರೆ ಗ್ರಾಮದ ಕುಮಾರ್.
ಮೊಲದ ಬೇಟೆಯಾದ ನಂತರ ಮೊಲವನ್ನು ಸುರಕ್ಷಿತವಾಗಿ ಪುಟ್ಟಿಯಲ್ಲಿ ತಂದು ಕಂಚೀವರದರಾಜ ಸ್ವಾಮಿ ಸಮ್ಮುಖದಲ್ಲಿ, ಗ್ರಾಮಸ್ಥರು ಹಾಗೂ ಭಕ್ತರು ಧಾರ್ಮಿಕ ವಿಧಿ– ವಿಧಾನಗಳನ್ನು ನೆರವೇರಿಸಿ, ಸ್ವಾಮಿಯ ಉತ್ಸವ ನಡೆಸುವ ಮೂಲಕ, ಸ್ವಾಮಿಯ ಅಪ್ಪಣೆ ಮೇರೆಗೆ ಮೊಲವನ್ನು ಪುನಃ ಕಾಡಿಗೆ ಬಿಡುವ ಮೂಲಕ ಸಂಕ್ರಮಣ ಆಚರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.