ADVERTISEMENT

ಹೊಸದುರ್ಗ | ಆರಂಭವಾಗದ ಖರೀದಿ; ಮನೆಯಲ್ಲೇ ಉಳಿದ ರಾಗಿ!

ಗೋಣಿ ಚೀಲಗಳ ಕೊರತೆಯಿಂದ ಮಾರಾಟ ಪ್ರಕ್ರಿಯೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:16 IST
Last Updated 7 ಫೆಬ್ರುವರಿ 2026, 6:16 IST
ಹೊಸದುರ್ಗದ ಕೊರಟಿಕೆರೆ ಗ್ರಾಮದಲ್ಲಿ ರೈತರೊಬ್ಬರು ಸಂಗ್ಹಿಸಿರುವ ರಾಗಿ
ಹೊಸದುರ್ಗದ ಕೊರಟಿಕೆರೆ ಗ್ರಾಮದಲ್ಲಿ ರೈತರೊಬ್ಬರು ಸಂಗ್ಹಿಸಿರುವ ರಾಗಿ   

ಹೊಸದುರ್ಗ: ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ರೈತರ ಮನೆಯಲ್ಲೇ ರಾಗಿ ಉಳಿದಿದ್ದು, ಖರೀದಿ ಪ್ರಕ್ರಿಯೆಗಾಗಿ ಅವರು ನಿತ್ಯ ಎದುರು ನೋಡುತ್ತಿದ್ದಾರೆ. ಜನವರಿ ತಿಂಗಳಲ್ಲೇ ಖರೀದಿ ಆರಂಭಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಫೆಬ್ರುವರಿ ಆರಂಭವಾದರೂ ಖರೀದಿ ಕೇಂದ್ರ ತೆರೆಯಲಾಗಿಲ್ಲ.

‘ನಿಗದಿಯಂತೆ ಜನವರಿ 1ರಿಂದ ಖರೀದಿ ಪ್ರಕ್ರಿಯೆ ಆರಂಭವಾಗಿ ಮಾರ್ಚ್ ಕೊನೆಗೆ ಮುಕ್ತಾಯವಾಗಬೇಕಿತ್ತು. ಈಗಿನ ಸ್ಥಿತಿ ಗಮನಿಸಿದರೆ ರಾಗಿ ಖರೀದಿಸುವ ಸೂಚನೆಗಳೇ ಕಾಣುತ್ತಿಲ್ಲ. ಇದರಿಂದಾಗಿ ಖರೀದಿ ಕೇಂದ್ರ ಆರಂಭ ಆಗುವುದೋ ಇಲ್ಲವೋ’ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಗೋಣಿ ಚೀಲಗಳ ಕೊರತೆ ಎದುರಾಗಿರುವುದರಿಂದ ಖರೀದಿ ವಿಳಂಬವಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸುತ್ತಿದ್ದಾರೆ. ನವೆಂಬರ್ 10ರಿಂದ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ನೋಂದಣಿ ನಂತರ ಖರೀದಿಗೆ ಮೂರು ತಿಂಗಳ ಕಾಲಾವಕಾಶವಿತ್ತು. ಆ ಸಮಯದಲ್ಲಿ ಗೋಣಿ ಚೀಲಗಳನ್ನು ತರಿಸಿಕೊಳ್ಳಬಹುದಿತ್ತು. ಆದರೆ, ಖರೀದಿಸುವ ಸಮಯದಲ್ಲಿ ಗೋಣಿ ಚೀಲಗಳಿಗೆ ಪರದಾಡುವಂತಾಗಿದೆ. ಮೊದಲೇ ಗೋಣಿ ಚೀಲ ಖರೀದಿಸಿದ್ದರೆ ಇಷ್ಟರಲ್ಲಾಗಲೇ ಖರೀದಿ ಆರಂಭಿಸಬಹುದಾಗಿತ್ತು ಎನ್ನುತ್ತಾರೆ ನೀರಗುಂದದ ರೈತ ರಘು.

ADVERTISEMENT

ತಾಲ್ಲೂಕಿನಲ್ಲಿ 10,418 ನೋಂದಣಿ:

ತಾಲ್ಲೂಕಿನಾದ್ಯಂತ ಒಟ್ಟು 35,000 ಹೆಕ್ಟೆರ್ ಪ್ರದೇಶಗಳಲ್ಲಿ ರಾಗಿ ಬೆಳೆಯಲಾಗಿದೆ. ಎರಡು ಕಡೆಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆದಿದ್ದು, ಹೊಸದುರ್ಗ ಪಟ್ಟಣ ಹಾಗೂ ಶ್ರೀರಾಂಪುರದಲ್ಲಿ ನೋಂದಣಿ ಕಾರ್ಯ ನಡೆದಿದೆ. ಈ ಬಾರಿ 10,418 ರೈತರು ನೋಂದಣಿ ಮಾಡಿದ್ದು, 2.26 ಲಕ್ಷ ಕ್ವಿಂಟಾಲ್ ರಾಗಿ ಮಾರಾಟವಾಗುವ ನಿರೀಕ್ಷೆ ಇದೆ. ಪ್ರತಿ ಕ್ವಿಂಟಾಲ್‌ ರಾಗಿಗೆ ₹ 4,886  ಬೆಂಬಲಬೆಲೆ ಇದೆ. 2025ರಲ್ಲಿ ಕ್ವಿಂಟಾಲ್‌ಗೆ ₹ 4,290 ರಂತೆ ಖರೀದಿ ಮಾಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಕ್ವಿಂಟಲ್‌ಗೆ ₹ 596 ಏರಿಕೆಯಾದಂತಿದೆ. ಉತ್ತಮ ಬೆಲೆ ನಿಗದಿ ಆಗಿರುವುದರಿಂದ ಅಧಿಕ ಸಂಖ್ಯೆಯ ರೈತರು ಬೆಂಬಲಬೆಲೆ ಯೋಜನೆಯಡಿ ಮಾರಾಟಕ್ಕೆ ಕಾದಿದ್ದಾರೆ. 

ಅಧಿಕಾರಿಗಳು ಖರೀದಿ ಆರಂಭಿಸಬೇಕು. ಅದಕ್ಕೂ ಮೊದಲು ಗೋಣಿ ಚೀಲಗಳ ಕೊರತೆ ನೀಗಿಸಬೇಕು. ಪಶ್ಚಿಮ ಬಂಗಾಳದಲ್ಲಿ ಗೋಣಿ ಚೀಲಗಳನ್ನು ಬುಕ್ ಮಾಡಲಾಗಿದೆ. ಗೋಣೀ ಚೀಲಗಳು ಬರುವವರೆಗೂ ಖರೀದಿ ವಿಳಂಬವಾಗಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಗೋಣಿ ಚೀಲಗಳು ಬಂದಕೂಡಲೇ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ಅವರಿಂದ ಉದ್ಘಾಟನೆ ಮಾಡಿಸಿ, ಖರೀದಿ ಆರಂಭಿಸಲಾಗುವುದು ಎನ್ನುತ್ತಾರೆ ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಕೆ. ಮಲ್ಲಿಕಾರ್ಜುನ.

ಈ ವಾರದಲ್ಲಿಯೇ ಗೋಣಿ ಚೀಲಗಳು ಬರಲಿದ್ದು ಮುಂದಿನ ವಾರ ಖರೀದಿ ಆರಂಭಿಸಲಾಗುವುದು. ಸರ್ಕಾರ ಬೆಂಬಲಬೆಲೆಯನ್ನು ಹೆಚ್ಚಿಸಿದ್ದು ರೈತರು ರಾಗಿಯನ್ನು ಖರೀದಿ ಕೇಂದ್ರದಲ್ಲೇ ನೀಡಬೇಕು
ಬಿ‌.ಜಿ ಗೋವಿಂದಪ್ಪ, ಅಧ್ಯಕ್ಷರು, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ

ಬೇಗ ಖರೀದಿ ಕೇಂದ್ರ ತೆರೆಯಲಿ

ಇಷ್ಟರೊಳಗೆ ಖರೀದಿ ಆರಂಭವಾಗಿದ್ದರೆ ಜೂನ್ ತಿಂಗಳಲ್ಲಿ ಖಾತೆಗೆ ಹಣ ಜಮಾ ಆಗುತ್ತಿತ್ತು. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದಂತಿಲ್ಲ. ಇನ್ನು ಶಾಲೆ– ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಲಿದ್ದು ಅವರ ವಿದ್ಯಾಭ್ಯಾಸಕ್ಕೆ ಹಾಗೂ ಮುಂಗಾರು ಬಿತ್ತನೆ ಚಟುವಟಿಕೆಗೆ ಹಣದ ಅವಶ್ಯಕತೆಯಿದೆ. ಮನೆಯಲ್ಲಿ 40 ಕ್ವಿಂಟಲ್ ರಾಗಿ ಇಟ್ಟುಕೊಂಡು ಒಂದೂವರೆ ತಿಂಗಳಾಗಿದೆ. ದಲ್ಲಾಳಿಗಳಿಗೆ ಹಮಾಲರಿಗೆ ಹಣ ನೀಡಬೇಕು. ಸಾಲು ಸಾಲು ಹಬ್ಬಗಳಿರುವ ಪರಿಣಾಮ ವೆಚ್ಚ ಹೆಚ್ಚಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ ರಾಗಿ ಪ್ರತಿ ಕ್ವಿಂಟಲ್‌ಗೆ ₹ 4200 ಇದ್ದು ಕೆಲ ರೈತರು ಸಿಕ್ಕ ಬೆಲೆಗೆ ರಾಗಿ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಕೂಡಲೇ ಖರೀದಿಗೆ ಮುಂದಾಗಬೇಕು ಎಂದು ರೈತ ಮಹೇಶ್ವರಪ್ಪ ಕೊರಟಿಕೆರೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.