
ಹೊಸದುರ್ಗ: ‘ಅಧಿಕ ಅಂಕ ಗಳಿಕೆಯೊಂದೇ ಜ್ಞಾನವಲ್ಲ. ವಿದ್ಯಾರ್ಥಿಗಳು ಪಠ್ಯಕ್ಕೆ ಸೀಮಿತರಾಗದೇ, ಪ್ರಾಪಂಚಿಕ ಜ್ಞಾನವನ್ನೂ ಪಡೆಯಬೇಕು’ ಎಂದು ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಪುತ್ರ ಕಿರಣ್ ಶಂಕರ್ ಎಸ್.ಎನ್. ಕಿವಿಮಾತು ಹೇಳಿದರು.
ಎಸ್. ನಿಜಲಿಂಗಪ್ಪ ಎಜುಕೇಷನಲ್ ಆ್ಯಂಡ್ ರೂರಲ್ ಡೆವಲಂಪ್‌ಮೆಂಟ್ ಟ್ರಸ್ಟ್ ವತಿಯಿಂದ ಸಂಸ್ಥೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಎಸ್. ನಿಜಲಿಂಗಪ್ಪ ಅವರ ಜನ್ಮದಿನಾಚರಣೆ ಹಾಗೂ ನಿಜಲಿಂಗಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಹಬ್ಬ ಉದ್ಘಾಟನೆ ಕಾರ್ಯಕ್ರಮದಲ್ಲಿ ಎಸ್. ನಿಜಲಿಂಗಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ಪರೀಕ್ಷಾ ದಿನಗಳಲ್ಲಿ ನಿದ್ದೆ ಬಿಟ್ಟು ಓದುವ ಅವಶ್ಯಕತೆಯಿಲ್ಲ. ನಿದ್ದೆಗೂ ಪ್ರಾಮುಖ್ಯತೆ ನೀಡಬೇಕು. ದಿನನಿತ್ಯದ ಬದುಕಿನಲ್ಲಿ ಎಲ್ಲವೂ ಅವಶ್ಯಕ. ಕಂಪ್ಯೂಟರ್ ಮಾನವ ನಿರ್ಮಿತ ಯಂತ್ರ. ಅದನ್ನು ಬಳಸುವವರೂ ಮನುಷ್ಯರೇ. ಹಾಗಾಗಿ ಕಂಪ್ಯೂಟರ್‌ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಎಸ್. ನಿಜಲಿಂಗಪ್ಪ ಅವರನ್ನು ಸ್ಮರಿಸುವ ಕೆಲಸ ನಿತ್ಯ ಆಗಬೇಕು. ತಾಲ್ಲೂಕಿನ ಅಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗೆ ಎಸ್. ನಿಜಲಿಂಗಪ್ಪ ಅವರ ಹೆಸರು ಇಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಶಿವಲಿಂಗಪ್ಪ ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್ ಉಪನ್ಯಾಸ ನೀಡಿ, ‘ಎಸ್. ನಿಜಲಿಂಗಪ್ಪ ಅವರ ಪ್ರಾಮಾಣಿಕತೆ ಎಂದಿಗೂ ಮಾದರಿ. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಅಗತ್ಯ ಅರಿತು ಬಳಸಬೇಕು. ಶಿಕ್ಷಣವು ವ್ಯಕ್ತಿಗಳನ್ನು ಚಾರಿತ್ರ್ಯವಂತರನ್ನಾಗಿ ಮಾಡುತ್ತದೆ. ಬೌದ್ಧಿಕ ವಿಕಾಸಕ್ಕೆ ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ವೀರಶೈವ ಸಮಾಜದ ಮುಖಂಡ ಷಣ್ಮುಖಪ್ಪ, ಸೀತಾರಾಘವ ಬ್ಯಾಂಕ್ ಉಪಾಧ್ಯಕ್ಷ ಡಿ. ಆದಿರಾಜಯ್ಯ, ಮುಖಂಡರಾದ ಶ್ರೀನಿವಾಸಯ್ಯ, ಕಾರೇಹಳ್ಳಿ ಜಯಣ್ಣ ಹಾಗೂ ಮರಿದಿಮ್ಮಪ್ಪ ಅವರನ್ನು ಅಭಿನಂದಿಸಲಾಯಿತು.
ಸಾಹಿತಿ ಜಿ.ಎನ್. ಮಲ್ಲಿಕಾರ್ಜುನಪ್ಪ, ಎಸ್. ನಿಜಲಿಂಗಪ್ಪ ಎಜುಕೇಷನಲ್ ಆ್ಯಂಡ್ ರೂರಲ್ ಡೆವಲಂಪ್‌ಮೆಂಟ್ ಟ್ರಸ್ಟ್ ಕಾರ್ಯದರ್ಶಿ ಕೆ.ಎಸ್. ಕಲ್ಮಠ್, ಉಪಾಧ್ಯಕ್ಷ ಪುಟ್ಟರಾಜು, ಅಕಾಡೆಮಿಕ್ ನಿರ್ದೇಶಕ ತಿಪ್ಪೇಸ್ವಾಮಿ, ಧರ್ಮದರ್ಶಿಗಳಾದ ಪ್ರಕಾಶ್ ಮೂರ್ತಿ, ವೇದಮೂರ್ತಿ ಪಾರ್ವತಮ್ಮ ಹಾಲಪ್ಪ, ಮಂಜುಳಾ ಕಲ್ಲೇಶ್, ಕೆ. ಲೀಲಾ ಏಕಾಂತರಾಜು, ವಿಜಯ ಶಿವಲಿಂಗಪ್ಪ, ಜಿ. ವೀಣಾ ನಟರಾಜ್, ಮುಖಂಡರಾದ ಕೆ.ಎಂ. ವೀರೇಶ್, ನರೇಂದ್ರ ಬಾಬು, ಸುಬೋಧ್ ಕುಮಾರ್, ಫಾಲನೇತ್ರ ಸೇರಿದಂತೆ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.