
ಹೊಸದುರ್ಗ : ಭಾರತ ಸರ್ಕಾರವು ದೇಶಕ್ಕಾಗಿ ಕೊಡುಗೆ ನೀಡಿದ 9 ಜನರ ಪುತ್ಥಳಿಯನ್ನು ದೆಹಲಿಯಲ್ಲಿ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದೆ. ಅದರಲ್ಲಿ ಕರ್ನಾಟಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಬಸವಣ್ಣ ಅವರ ಪುತ್ಥಳಿಯೂ ಸೇರಿದೆ. ಕಿತ್ತೂರು ರಾಣಿ ಚೆನ್ನಮ್ಮ ಅವರ ಅಂಚೆ ಚೀಟಿಯನ್ನು ಸಹ ಬಿಡುಗಡೆಗೊಳಿಸಿದ್ದಾರೆ. ಭಾರತೀಯರ ಸಾರ್ವಭೌಮತೆಯಲ್ಲಿ ಕನ್ನಡಿಗರ ಔದಾರ್ಯತೆ ಪ್ರದರ್ಶನ ಇದಾಗಿದೆ ಎಂದು ಭಾರತ ಸರ್ಕಾರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಬಯಲು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ 'ಶಿವಸಂಚಾರದ ಕೈಪಿಡಿ' ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರ ಕೃಷಿಯಲ್ಲಿ ತಂತ್ರಜ್ಞಾನ ಆಧಾರಿತ ಬೆಳೆ ಸಂಸ್ಕರಣಾ ಪದ್ಧತಿಗಾಗಿ ಎಲ್ಲಾ ರಾಜ್ಯಗಳಿಂದ 100 ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ರಾಜ್ಯದ ಚಿತ್ರದುರ್ಗ, ತುಮಕೂರು, ಹಾವೇರಿ, ಗದಗ, ಚಿಕ್ಕಬಳ್ಳಾಪುರ ಸೇರಿದಂತೆ 6 ಜಿಲ್ಲೆಗಳು ಸೇರ್ಪಡೆಗೊಂಡಿವೆ ಎಂದು ತಿಳಿಸಿದರು.
ಪಂಡಿತಾರಾಧ್ಯ ಶ್ರೀಗಳ ದೂರದೃಷ್ಟಿ, ಪ್ರತಿಭೆ ಕಂಡರೆ, ಅವರು ರಾಜಕಾರಣದಲ್ಲಿದ್ದರೇ ದೇಶ ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು. ಸಾಣೇಹಳ್ಳಿಯನ್ನು ವಿಶ್ವಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಭಗವಂತನ ಸ್ವರೂಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಚ್ಚಾಶಕ್ತಿ, ಸಂಸ್ಕಾರ ಹಾಗೂ ಶ್ರೀಮಠದ ಆರ್ಶೀವಾದವಿದ್ದಲ್ಲಿ ಏನೂ ಬೇಕಾದರೂ ಸಾಧಿಸಬಹುದು. ಬಸವಣ್ಣನವರು ಹೇಳಿದ ಮಾರ್ಗದಲ್ಲೇ ಶ್ರೀಗಳು ನಡೆಯುತ್ತಿದ್ದಾರೆ.
ದೇಶವಿದ್ದರೇ ಮಾತ್ರ ನಾವು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಬಡವರನ್ನು ಅಭಿವೃದ್ಧಿ ಮಾಡುವ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಎಲ್ಲರಿಗೂ ವಿದ್ಯಾಭ್ಯಾಸ ಕಲ್ಪಿಸುವ ವ್ಯವಸ್ಥೆಯಾಗುತ್ತಿದೆ. ರಾಜಕಾರಣ ಮುಳ್ಳಿನ ಹಾಸಿಗೆ ಇದ್ದಂತೆ, ನಾವು ಸ್ವೀಕಾರ ಮಾಡಿದಂತೆ ಆಗುತ್ತದೆ. ತುಮಕೂರಿನ ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಟ್ಟು, ₹150 ಕೋಟಿ ಅಭಿವೃದ್ಧಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ₹ 49 ಸಾವಿರ ಕೋಟಿ ರೈಲ್ವೆ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ ₹ 11 ಸಾವಿರ ಕೋಟಿ ಯೋಜನೆ ಕೈಗೆತ್ತಿಕೊಂಡಿದ್ದೇನೆ. ಶೀಘ್ರದಲ್ಲೇ ಮುಗಿಸಿ, ಉಳೆದ ಯೋಜನೆಗಳ ಕಾರ್ಯವನ್ನು ಸಹ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಅಕ್ಕನಾಗಾಲಾಂಬಿಕೆಯ ಗದ್ದುಗೆ ಮೇಲೆ ಶಿಲಾಮಂಟಪ ಕಟ್ಟಿಸಿದ್ದು , ಇದೊಂದು ಪ್ರೇಕ್ಷಣೀಯ ಸ್ಥಳವಾಗಬೇಕು. ಯಾವುದಾದರೂಂದು ರೈಲ್ವೆ ನಿಲ್ದಾಣಕ್ಕೆ ಅಕ್ಕ ನಾಗಲಾಂಬಿಕೆ ಹೆಸರಿಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಮನವಿಯೊಂದಕ್ಕೆ ಪ್ರತಿಕ್ರಿಯಿಸಿದರು.
ಶೇಗುಣಸಿ ವಿರಕ್ತಮಠದ ಮಹಾಂತ ಪ್ರಭು ಸ್ವಾಮೀಜಿ ಮಾತನಾಡಿ, ಜಗತ್ತಿನಲ್ಲಿ 7000 ಕ್ಕೂ ಅಧಿಕ ಭಾಷೆಗಳಲ್ಲಿ, ಮುಂದಿನ 50 ವರ್ಷಗಳಲ್ಲಿ ಕೇವಲ 80 ಭಾಷೆ ಉಳಿಯುತ್ತವೆ. ಅದರಲ್ಲಿ ಕನ್ನಡವೂ ಒಂದು ಎಂದು ಭಾಷೆ ವಿಜ್ಞಾನಿಗಳು ತಿಳಿಸಿದ್ದಾರೆ. ವಚನ ಸಾಹಿತ್ಯದಿಂದಾಗಿ ಕನ್ನಡ ಉಳಿಯುತ್ತದೆ. ಅರಮನೆಗಿಂತ ಗುರುಮನೆ ದೊಡ್ಡದು. ನಾಟಕಗಳ ಮೂಲಕ ಬದುಕಿನ ಪಾಠ ಕಲಿಸುತ್ತಿದ್ದಾರೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ಬಹಳ ಬೆಂಬಲ ದೊರೆಯಿತು. ರಂಗ ಜಂಗಮ ಪರಮಪೂಜ್ಯರು ಪಂಡಿತಾರಾಧ್ಯ ಶ್ರೀಗಳು. ಸಾಣೇಹಳ್ಳಿ ಕರ್ತಾರನ ಕಮ್ಮಟ ಆಗಿದೆ ಎಂದು ಶ್ಲಾಘಿಸಿದರು.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸನಾತನ ಪರಂಪರೆ ಟೀಕೆ ಮಾಡುತ್ತಾ, ನಾವು ಹೋಗಬೇಕಾಗಿರುವ ಪರಂಪರೆ ತಿಳಿಸಿರುವ ಅಲ್ಲಮಪ್ರಭು ವಚನದ ಸಾಲು ಯುಗದ ಉತ್ಸಾಹ ನೋಡಿರೇ. ರಂಗಭೂಮಿ, ಸಾಹಿತ್ಯ, ಶರಣ ಸಮ್ಮೇಳನ, ಬಸವ ಸಂಸ್ಕೃತಿ ಅಭಿಯಾನದ ಮೂಲಕ ಆಶಯವೇ ಮನುಷ್ಯ ಮನುಷ್ಯನಾಗಬೇಕು. ಮನಸ್ಸು ಸ್ವಚ್ಛವಾಗಿದ್ದು, ನಡೆ ನುಡಿಯಲ್ಲಿ ಅಂತರವಿಲ್ಲದಿದ್ದರೆ, ಬದಲಾವಣೆ ಕಷ್ಟವೇ ಅಲ್ಲ. ರಂಗಭೂಮಿಯಲ್ಲಿ ಸಮಾಜಕ್ಕೆ ನಿಜವಾದ ದಾರಿ ತೋರಿಸುತ್ತಾರೆ. ಮಾನವ ಗಿಡಕ್ಕೆ ನೀರು ಹಾಕುವ ಕಾರ್ಯವಾಗಬೇಕು. ನಿಜವಾದ ಸಂಸ್ಕೃತಿ, ಸಂಸ್ಕಾರ ಬೇಕಾಗಿದೆ. ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆಯ, ಜಗತ್ತನ್ನೇ ದಿಕ್ಕು ತಪ್ಪಿಸುತ್ತದೆ. ಮೌಲ್ಯಗಳು ಕುಸಿಯುತ್ತಿವೆ. ಕನಸುಗಳನ್ನು ಕಟ್ಟಬೇಕು. ನನಸು ಮಾಡಬೇಕು. ಶರಣರ ತತ್ವಗಳನ್ನು ಜನರಿಗೆ ಸಾಹಿತ್ಯ ಮತ್ತು ರಂಗಭೂಮಿ ಮೂಲಕ ನೀಡಬೇಕಾಗಿದೆ ಎಂದರು.
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾಟಕ ಪ್ರಾಚೀನವಾದ, ಪುರಾತಾನವಾದ ಭವ್ಯ ಕಲೆ. ಎಲ್ಲಾ ಕಲೆಗಳಿಗೂ ತಾಯಿ ರಂಗಭೂಮಿ. ಹಳ್ಳಿಗಾಡಿನಲ್ಲಿ ಯುವಕರು ಇಂತಹ ಕೆಲಸ ಮಾಡುವುದು ಕಷ್ಠ. ಆದರೆ ಶ್ರೀಗಳ ಈ ಕಾರ್ಯ ಮೆಚ್ಚುವಂಥದ್ದು. ಕನ್ನಡ ಬಳಸುವುದರಿಂದ ಮಾತ್ರ ಬೆಳೆಯುತ್ತದೆ ಎಂದು ಹೇಳಿದರು.
ಶಿವಸಂಚಾರ ನಾಟಕಗಳ ಉದ್ಘಾಟನೆ ನೇರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ಸಮಾಜ ತಿದ್ದೋಕೆ ನಾಟಕಗಳು ಇಂದಿಗೂ ಜೀವಂತ ಕಲೆಗಳಾಗಿವೆ. ಈ ಮಾಧ್ಯಮದ ಮೂಲಕ ಸಮಾಜ ಜಾಗೃತಿಗೊಳಿಸುತ್ತಿರುವ ಸಾಣೇಹಳ್ಳಿ ಶ್ರೀಗಳ ಕಾರ್ಯ ಮೆಚ್ಚುವಂಥದ್ದು. ನಾಟಕಗಳನ್ನು ತುಚ್ಛವಾಗಿ ನೋಡುವಂತಿದ್ದ, ಕಾಲದಲ್ಲಿ ನಾಟಕಗಳ ಶ್ರೇಷ್ಠತೆ ಎತ್ತಿಹಿಡಿದು, ರಾಷ್ಟ್ರಮಟ್ಟದಲ್ಲಿ ಹೆಸರು ಪಡೆದಿದೆ ಸಾಣೇಹಳ್ಳಿ ಹಾಗೂ ಶಿವುಸಂಚಾರದ ತಂಡ. ನಾಟಕಗಳ ಮೂಲಕ ತಾನು ಶಾಶ್ವತ ಮುಖ್ಯಮಂತ್ರಿಯಾಗಿದ್ದೇನೆ. ಅಷ್ಟು ಜನಪ್ರಿಯತೆ ಪಡೆದಿದೆ. ನಾಟಕಗಳು ಮನಃಪರಿವರ್ತನೆಗೆ ಸಹಕಾರ ನೀಡುತ್ತವೆ ಎಂದರು.
ಸಂಸದ ಗೋವಿಂದ ಎಂ ಕಾರಜೋಳ ಮಾತನಾಡಿ, ಮನುಷ್ಯನಿಂದ ಮನುಷ್ಯನ ಶೋಷಣೆ ತಪ್ಪಿಸಲು, ಕಾಯಕದೊಂದಿಗೆ ಬದುಕಲು. ಲಿಂಗ, ವರ್ಗ, ವರ್ಣ, ಬೇಧವಿಲ್ಲದೆ, ಸುಂದರ ಸಮಾಜದ ನಿರ್ಮಾಣಕ್ಕಾಗಿ ಕಾರ್ಯಕ್ರಮ ರೂಪಿಸಿದರು. ಬಸವಣ್ಣನವರ ತತ್ವಾದರ್ಶಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಕಾರ್ಯವನ್ನು ಶ್ರೀಮಠ ಮಾಡುತ್ತಿದೆ. ಶ್ರೀಮಠದ ಕಾರ್ಯಕ್ರಮಕ್ಕೆ ಸಮಾಜದವರು, ರಾಜಕಾರಣಿಗಳು ಬೆಂಬಲ ಸೂಚಿಸಬೇಕು ಎಂದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ, ಜಗದೀಶ್ ಆರ್ ನಿರ್ದೇಶನದ 'ಜಂಗಮದೆಡೆಗೆ' ನಾಟಕವನ್ನು ಶಿವಸಂಚಾರ -25 ತಂಡದವರು ಅಭಿನಯಿಸಿದರು .
ಶಿವ ಸಂಚಾರ ನಾಟಕಗಳನ್ನು ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಉದ್ಘಾಟಿಸಿದರು. ಈ ವೇಳೆ ತರಿಕೆರೆ ಶಾಸಕ ಶ್ರೀನಿವಾಸ್ , ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ಶಿವಪುರ ಶರತ್ ಪಾಟೀಲ್, ಶಿವ ಸಂಚಾರ ಕಲಾವಿದರು ವಚನ ಗೀತೆಗಳನ್ನು ಹಾಡಿದರು. ಸ್ಥಳೀಯ ಮುಖಂಡರು, ರಾಜಕೀಯ ಮುಖಂಡರು, ಗ್ರಾಮಸ್ಥರು ಹಾಗೂ ಶ್ರೀಮಠದ ಭಕ್ತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.