
ಹೊಸದುರ್ಗ: ಪಟ್ಟಣದಲ್ಲಿ ನೆಲೆಸಿರುವ ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಸೋಮವಾರ ವೀರಭದ್ರೇಶ್ವರ ಸ್ವಾಮಿಗೆ ಧಾರ್ಮಿಕ ವಿಧಿಗಳನ್ವಯ ರುದ್ರಾಭಿಷೇಕ ನಡೆಯಿತು. ವೀರಭದ್ರೇಶ್ವರ ಸ್ವಾಮಿ ಕೆಂಡದಾರ್ಚನೆ ಅಂಗವಾಗಿ ಕಳೆದ ಮೂರು ದಿನಗಳಿಂದ ದೇವಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಭಾನುವಾರ ಸಂಜೆ ವೀರಭದ್ರೇಶ್ವರ ಸ್ವಾಮಿ ಹಾಗೂ ದುರ್ಗಾಂಬಿಕಾ ದೇವಿಯ ಉತ್ಸವವು ಈಶ್ವರಸ್ವಾಮಿ ದೇವಾಲಯದಿಂದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಸೋಮವಾರ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸೋಮವಾರ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ ನಡೆಯಿತು. ಮಂಗಳವಾರ ಧಾರ್ಮಿಕ ವಿಧಿಗಳನ್ವಯ ಅರ್ಚಕ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಲಿಂಗದೀಕ್ಷೆ ನಡೆಯಿತು ಎಂದು ವೀರಶೈವ ಸಮಾಜದ ನಿರ್ದೇಶಕ ಎಚ್.ಸಿ. ಮಲ್ಲೇಶ್ ತಿಳಿಸಿದರು.
‘ಗುರು ಒಪ್ಪತ್ತಿನ ಸ್ವಾಮಿ ವಿರಕ್ತ ಮಠ ಹಾಗೂ ವೀರಶೈವ ಸಮಾಜ ಮತ್ತು ಜಯದೇವ ವಿದ್ಯಾರ್ಥಿ ನಿಲಯದ ವತಿಯಿಂದ ತಾಲ್ಲೂಕಿನ ಜನತೆಗೆ ದೇವರು ಸುಖ ಶಾಂತಿ ನೆಮ್ಮದಿ ಕರುಣಿಸಲಿ, ರೋಗ ರುಜಿನಗಳನ್ನು ದೂರಮಾಡಲಿ ಎಂಬ ಉದ್ದೇಶದಿಂದ ಹಲವಾರು ವರ್ಷಗಳಿಂದ ಈ ಕಾರ್ಯ ನಡೆಯುತ್ತಿದೆ’ ಎಂದು ವೀರಶೈವ ಸಮಾಜದ ನಿರ್ದೇಶಕ ಧನಶಂಕರ್ ಮಾಹಿತಿ ನೀಡಿದರು.
ಮಂಗಳವಾರ ನಸುಕಿನಲ್ಲಿ ಗುರು ಒಪ್ಪತ್ತಿನ ಸ್ವಾಮಿ ಮಠದಿಂದ ಗಂಗಾಪೂಜೆ ನೇರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.