ADVERTISEMENT

ರೋಗಿಗಳಿಗೆ ಸೊಳ್ಳೆ ಪರದೆ ನೀಡಿ

ಜಿಲ್ಲಾ ಆಸ್ಪತ್ರೆಗೆ ನ್ಯಾಯಾಧೀಶ ಗಿರೀಶ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 4:05 IST
Last Updated 2 ಡಿಸೆಂಬರ್ 2022, 4:05 IST
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಗಿರೀಶ್‌ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಗುರುವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಗಿರೀಶ್‌ ಭೇಟಿ ನೀಡಿ ಪರಿಶೀಲಿಸಿದರು.   

ಚಿತ್ರದುರ್ಗ: ಆಸ್ಪತ್ರೆಗೆ ದಾಖಲಾಗುವ ಒಳ ರೋಗಿಗಳ ಚಿಕಿತ್ಸಾ ವರದಿ ಆಯಾ ವಾರ್ಡ್‌ಗಳಲ್ಲಿ ಲಭ್ಯವಿರಬೇಕು. ಇದರಿಂದ ತುರ್ತು ಸಮಯದಲ್ಲಿ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶ ಗಿರೀಶ್‌ ಸೂಚಿಸಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ರೋಗಿಗಳ ಬೆಡ್‌ ಬಳಿ ಹಾಗೂ ವಾರ್ಡ್‌ನಲ್ಲಿ ಮಾಹಿತಿ ಹಾಕದಿರುವುದನ್ನು ಗಮನಿಸಿ ಗರಂ ಆದರು. ‘ಯಾವ ವಿಭಾಗದಲ್ಲಿ ಯಾವ ವೈದ್ಯರಿದ್ದಾರೆ ಎಂಬ ಬಗ್ಗೆ ನಾಮಫಲಕ ಹಾಕಬೇಕು. ಜತೆಗೆ ಎಲ್ಲಾ ರೋಗಿಗಳಿಗೆ ಸೊಳ್ಳೆಪರದೆ, ಬೆಡ್‌ಶೀಟ್‌ ವಿತರಿಸಬೇಕು’ ಎಂದು ತಿಳಿಸಿದರು.

‘ಆಸ್ಪತ್ರೆಯಲ್ಲಿ ರೋಗಿಗಳಗೆ ಹೊರಗಡೆಯಿಂದ ಔಷಧ ತರುವಂತೆ ಚೀಟಿ ಬರೆದುಕೊಡುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿವೆ. ಹೊರಗಡೆ ಔಷಧ ಖರೀದಿಸಿದರೆ ಅದರ ಹಣವನ್ನು ಸರ್ಕಾರಿ ಆಸ್ಪತ್ರೆಯೇ ಭರಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಆ ಕೆಲಸವನ್ನು‌ ನೀವುಗಳು ಮಾಡುತ್ತಿಲ್ಲ. ಇನ್ನು ಮುಂದೆ ಹೊರಗಡೆಯಿಂದ ತರುವ ಔಷಧದ ಹಣ ಮರು ಪಾವತಿಯನ್ನು ಆಸ್ಪತ್ರೆಯಿಂದಲೇ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

ಎಂಆರ್‌ಐ ಸ್ಕ್ಯಾನ್‌ ಸೆಂಟರ್‌ನಲ್ಲಿ ಒಂದು ದಿನಕ್ಕೆ 48 ಸ್ಕ್ಯಾನ್‌ ಮಾಡಬಹುದಾಗಿದೆ. ಆದರೂ ನೀವು ಏಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು‌. ಹೊರ ಜಿಲ್ಲೆಗಳಿಂದ ರೋಗಿಗಳು ಹೆಚ್ಚಾಗಿ ಬರುತ್ತಿರುವ ಕಾರಣ ಸಮಸ್ಯೆ ಆಗುತ್ತಿದೆ ಎಂದು ಸಿಬ್ಬಂದಿ ಪರಿಸ್ಥಿತಿ ವಿವರಿಸಿದರು.

‘ಜನರ ಆರೋಗ್ಯದ ರಕ್ಷಣೆಗೆ ಸರ್ಕಾರ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. ಆದರೆ ನಿಮ್ಮ ನಿರ್ಲಕ್ಷ್ಯದಿಂದಾಗಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಮುಂದಿನ ಭೇಟಿ ವೇಳೆಗೆ ಸೂಚಿಸಿದ ಎಲ್ಲ ಕೆಲಸಗಳು ಅಚ್ಚಕಟ್ಟಾಗಿ ಆಗಬೇಕು’ ಎಂದು ತಿಳಿಸಿದರು.

ಜಿಲ್ಲಾ ಸರ್ಜನ್‌ ಡಾ.ಬಸವರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.