ADVERTISEMENT

ಹಾಸ್ಟೆಲ್‌ ಬಂದ್‌: ವಿದ್ಯಾರ್ಥಿಗಳು ಅತಂತ್ರ

ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ ಪದವಿಗೆ ನಡೆಯುತ್ತಿದೆ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 13:30 IST
Last Updated 22 ಏಪ್ರಿಲ್ 2021, 13:30 IST

ಚಿತ್ರದುರ್ಗ: ದಾವಣಗೆರೆ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಕೋವಿಡ್‌ ನೆಪ ಮುಂದಿಟ್ಟು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಹಾಸ್ಟೆಲ್‌ಗಳನ್ನು ಗುರುವಾರ ಬಂದ್‌ ಮಾಡಲಾಗಿದೆ. ಪರೀಕ್ಷೆಗೆ ಸಜ್ಜಾಗಿರುವ ವಿದ್ಯಾರ್ಥಿಗಳು ಊರಿಗೆ ಮರಳಲು ಸಾಧ್ಯವಾಗದೇ ಅತಂತ್ರರಾಗಿದ್ದಾರೆ.

ಇತ್ತ ವಿಶ್ವೇಶ್ವರಯ್ಯ ತಾಂchitraತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಪದವಿ ಪರೀಕ್ಷೆಗಳು ಪ್ರಾರಂಭವಾಗಿವೆ. ಏಕಾಏಕಿ ಕೈಗೊಂಡ ಈ ನಿರ್ಧಾರ ವಿದ್ಯಾರ್ಥಿ ಸಮೂಹವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆಶ್ರಯಕ್ಕಾಗಿ ಸ್ನೇಹಿತರು, ಪರಿಚಯಸ್ಥರು ಹಾಗೂ ಸಂಬಂಧಿಕರ ನೆರವು ಪಡೆಯಲು ಮುಂದಾಗಿದ್ದಾರೆ.

ಕೊರೊನಾ ಸೋಂಕಿನ ಎರಡನೇ ಅಲೆಯ ಆತಂಕ ಆವರಿಸಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ. ಹಾಸ್ಟೆಲ್‌ಗಳಿಗೆ ದಿಢೀರ್‌ ಭೇಟಿ ನೀಡಿದ ಅಧಿಕಾರಿಗಳು ಬಾಗಿಲು ಮುಚ್ಚುವ ನಿರ್ಧಾರವನ್ನು ಪ್ರಕಟಿಸಿದರು. ಇದನ್ನು ಪ್ರಶ್ನಿಸಲು ಮುಂದಾದ ವಿದ್ಯಾರ್ಥಿಗಳಿಗೆ ಕೋವಿಡ್‌ ನೆಪ ಹೇಳಲಾಗಿದೆ. ಚಳ್ಳಕೆರೆ ಗೇಟ್‌ ಸಮೀಪವಿರುವ ಹಾಸ್ಟೆಲ್‌ನ ವಿದ್ಯಾರ್ಥಿಗಳು ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದರು. ಆದರೂ, ಸಮಸ್ಯೆ ಬಗೆಹರಿಯಲಿಲ್ಲ.

ADVERTISEMENT

‘ಪರೀಕ್ಷೆ ನಡೆಸುತ್ತಿರುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ದಾಖಲೆ ಕೇಳಿದರು. ಪ್ರಾಂಶುಪಾಲರಿಂದ ಪ್ರಮಾಣ ಪತ್ರ ತರುವಂತೆ ತಾಕೀತು ಮಾಡಿದರು. ಪ್ರಮಾಣ ಪತ್ರ ಪಡೆದು ಕಾಲೇಜಿನಿಂದ ಮರಳುವ ಹೊತ್ತಿಗೆ ಹಾಸ್ಟೆಲ್ ಬಾಗಿಲು ಹಾಕಿದರು. ಊರಿಗೆ ಮರಳಿದರೆ ಪರೀಕ್ಷೆಗೆ ಹಾಜರಾಗುವುದು ಕಷ್ಟ’ ಎಂದು ಪ್ರಥಮ ವರ್ಷದ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ತರಳಬಾಳು ನಗರದಲ್ಲಿರುವ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳದ್ದೂ ಇದೇ ಸಮಸ್ಯೆ. ವಿಟಿಯು ಸೆಮಿಸ್ಟರ್ ಪರೀಕ್ಷೆಗಳು ಪ್ರಾರಂಭವಾಗಿವೆ. ಪರೀಕ್ಷೆ ಬರೆದು ಮರಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಮುಚ್ಚುವುದಾಗಿ ಅಧಿಕಾರಿಗಳು ಸೂಚನೆ ನೀಡಿದರು. ಸಮೀಪದ ಹಳ್ಳಿಯ ವಿದ್ಯಾರ್ಥಿಗಳು ಊರಿಗೆ ಮರಳಿದರು. ಉಳಿದ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಸಂಜೆ ಬಳಿಕ ಅವಕಾಶ ಕಲ್ಪಿಸಲಾಯಿತು.

ವಿಟಿಯು ವಿದ್ಯಾರ್ಥಿಗಳಿಗೆ ಅವಕಾಶ

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೀಸಲಿರುವ ಹಾಸ್ಟೆಲ್‌ ಹೊರತುಪಡಿಸಿ ಉಳಿದ ವಿದ್ಯಾರ್ಥಿನಿಲಯಗಳನ್ನು ಮುಚ್ಚಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಅವಿನ್‌ ಮಾಹಿತಿ ನೀಡಿದರು.

ಇಲಾಖೆಯ ವ್ಯಾಪ್ತಿಯಲ್ಲಿ ಜಿಲ್ಲೆಯಲ್ಲಿ 100 ಹಾಸ್ಟೆಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲ ಹಾಸ್ಟೆಲ್‌ ಮುಚ್ಚಲಾಗಿದೆ. ದಾವಣಗೆರೆ ವಿಶ್ವವಿದ್ಯಾಲಯ ಉನ್ನತ ಶಿಕ್ಷಣ ಇಲಾಖೆಯ ಮೂಲಕ ಮಾಹಿತಿ ನೀಡಿಲ್ಲ. ಹೀಗಾಗಿ, ಹಾಸ್ಟೆಲ್‌ಗಳನ್ನು ಬಂದ್‌ ಮಾಡಲಾಗಿದೆ. ನಿರ್ದೇಶನ ಬಂದರೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.