ADVERTISEMENT

ವಸತಿ ಯೋಜನೆ ವಿಳಂಬ: ‘ವಿಜಿಲ್‌’ ಆ್ಯಪ್‌ ಹಿಂಪಡೆದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 12:06 IST
Last Updated 31 ಜನವರಿ 2021, 12:06 IST
ವಿ.ಸೋಮಣ್ಣ
ವಿ.ಸೋಮಣ್ಣ   

ಚಿತ್ರದುರ್ಗ: ವಸತಿ ಯೋಜನೆ ವಿಳಂಬಕ್ಕೆ ಕಾರಣವಾಗಿರುವ ‘ವಿಜಿಲ್‌’ ಆ್ಯಪ್‌ ಅನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಜಿಪಿಎಸ್ ಮೂಲಕವೇ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸರ್ವರ್‌ ಸಮಸ್ಯೆ ಬಗ್ಗೆ ಫಲಾನುಭವಿಗಳಿಂದ ಹೆಚ್ಚು ದೂರು ಬರುತ್ತಿದ್ದವು. ಸಕಾಲಕ್ಕೆ ಹಣ ಬಿಡುಗಡೆ ಆಗದಿರುವುದು ಯೋಜನೆ ಅನುಷ್ಠಾನಕ್ಕೆ ತೊಡಕಾಗಿತ್ತು. ಈವರೆಗೆ ಶೇ 62ರಷ್ಟು ಅನುದಾನ ಮಾತ್ರ ಖರ್ಚಾಗಿದೆ. ಇನ್ನೂ ಶೇ 38 ಅನುದಾನ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೂರು ತಿಂಗಳು ಆ್ಯಪ್‌ ಹಿಂಪಡೆಯಲಾಗಿದೆ’ ಎಂದರು.

‘ಹತ್ತು ವರ್ಷದಲ್ಲಿ ಕಲ್ಪಿಸಿದ ವಸತಿ ಸೌಲಭ್ಯವನ್ನು ಬಿಜೆಪಿ ಸರ್ಕಾರ ಒಂದೂವರೆ ವರ್ಷದಲ್ಲಿ ಸಾಧಿಸಿದೆ. ಘೋಷಣೆ ಮಾಡಿದಂತೆ ಆರು ಲಕ್ಷ ಮನೆಗಳನ್ನು ನೀಡುತ್ತೇವೆ. ಅಲೆಮಾರಿ ಹಾಗೂ ಸುಡಗಾಡು ಸಿದ್ಧರಿಗೆ ಕಲ್ಪಿಸಿದ ವಸತಿ ಸೌಲಭ್ಯ ಫಲಾನುಭವಿಗಳನ್ನು ತಲುಪಲಿವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ADVERTISEMENT

‘ಉದ್ದಟತನದ ಪರಮಾವಧಿ’

ಕರ್ನಾಟಕ ಗಡಿ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೀಡಿದ ಹೇಳಿಕೆ ಉದ್ದಟತನದ ಪರಮಾವಧಿ ಎಂದು ವಸತಿ ಸಚಿವ ವಿ.ಸೋಮಣ್ಣ ಕಿಡಿಕಾರಿದರು.

‘ನಮ್ಮ ರಾಜ್ಯದ ಅಭಿವೃದ್ಧಿಗೆ ಮತ್ತೊಬ್ಬರನ್ನು ಕೇಳುವ ಅಗತ್ಯವಿಲ್ಲ. ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳದೇ ಜನರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಇವರಂಥ ದಡ್ಡರು ಮತ್ತೊಬ್ಬರು ಇರಲಿಕ್ಕಿಲ್ಲ’ ಎಂದು ಹೇಳಿದರು.

***

ಬಿ.ಎಸ್.ಯಡಿಯೂರಪ್ಪ ಅವರೇ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಪಕ್ಷದ ವರಿಷ್ಠರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಸವನಗೌಡ ಪಾಟೀಲ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ.

–ವಿ.ಸೋಮಣ್ಣ, ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.