ADVERTISEMENT

ಅಳಿದ ಮಾವು–ಬೇವು: ಬೆಳೆದ ಮಂಗ

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 13:35 IST
Last Updated 25 ನವೆಂಬರ್ 2019, 13:35 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಸೋಮವಾರ ಆಯೋಜಿಸಿದ್ದ ‘ಮಾನವ – ವನ್ಯಜೀವಿ ಸಂಘರ್ಷ’ ಕಾರ್ಯಾಗಾರದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿದರು.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ  ಸೋಮವಾರ ಆಯೋಜಿಸಿದ್ದ ‘ಮಾನವ – ವನ್ಯಜೀವಿ ಸಂಘರ್ಷ’ ಕಾರ್ಯಾಗಾರದಲ್ಲಿ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿದರು.   

ಚಿತ್ರದುರ್ಗ: ಮಾವು ಮತ್ತು ಬೇವಿನ ಮರಗಳನ್ನು ಕಡಿದು ಅಡಿಕೆಗಳನ್ನು ಹಾಕುತ್ತಿರುವುದರಿಂದ ಮಂಗಗಳ ಹಾವಳಿ ಹೆಚ್ಚಾದಂತೆ ಕಾಣುತ್ತಿದೆ. ಹಣ್ಣುಗಳನ್ನು ಆಶ್ರಯಿಸಿದ್ದ ಕೋತಿ ಅಡಿಕೆ ತಿನ್ನಲು ಪ್ರಾರಂಭಿಸಿದ ಬಳಿಕ ಸಮಸ್ಯೆಯ ಸ್ವರೂಪ ಗೊತ್ತಾಗಿದೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಅರಣ್ಯ ಇಲಾಖೆ ಸಿಬ್ಬಂದಿಗೆ ಸೋಮವಾರ ಆಯೋಜಿಸಿದ್ದ ‘ಮಾನವ – ವನ್ಯಜೀವಿ ಸಂಘರ್ಷ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಂಗಗಳ ಹಾವಳಿ ಹೆಚ್ಚಾಗಿರುವುದಕ್ಕೆ ಸಂಬಂಧಿಸಿದ ಚರ್ಚೆ ಮುನ್ನೆಲೆಗೆ ಬಂದಿದೆ. ಅಡಿಕೆ ಬೆಳೆ ನಾಶ ಮಾಡುತ್ತಿರುವ ಮಂಗಗಳಿಗೆ ಪ್ರತ್ಯೇಕ ಪಾರ್ಕ್‌ ನಿರ್ಮಿಸಲು ಸರ್ಕಾರ ಮುಂದಾಗಿದೆ. ಬಯಲುಸೀಮೆಯಲ್ಲಿದ್ದ ಮಾವು ಮತ್ತು ಬೇವಿನ ಮರಗಳನ್ನು ಕಡಿದು ಹಾಕಲಾಗಿದೆ. ಈ ಮರದ ಹಣ್ಣುಗಳನ್ನು ಆಶ್ರಯಿಸಿದ್ದ ಮಂಗ ಅನಿವಾರ್ಯವಾಗಿ ಅಡಿಕೆ ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ಪ್ರವಾಸಿ ತಾಣಗಳಲ್ಲಿಯೂ ಮಂಗಗಳ ಹಾವಳಿ ಹೆಚ್ಚಾಗಿರುವ ಆತಂಕ ಎದುರಾಗಿದೆ. ಪ್ರವಾಸಿಗರು ತಿಂದು ಎಸೆಯುವ ಪದಾರ್ಥ ಕೋತಿಗಳಿಗೆ ಆಹಾರವಾಗುತ್ತಿದೆ. ಪದಾರ್ಥಗಳನ್ನು ಬಿಸಾಡುವುದನ್ನು ನಿಲ್ಲಿಸಿದರೆ ಮಂಗಗಳ ಹಾವಳಿ ನಿಯಂತ್ರಣಕ್ಕೆ ಬರುತ್ತದೆ. ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರು ಎಲ್ಲೆಂದರಲ್ಲಿ ಪದಾರ್ಥ ಬಿಸಾಡುವುದಕ್ಕೆ ಕಡಿವಾಣ ಹಾಕಲಾಗಿದೆ. ಕೋತಿಗಳ ಹಾವಳಿಯೂ ನಿಯಂತ್ರಣಕ್ಕೆ ಬಂದಿದೆ’ ಎಂದು ವಿವರಿಸಿದರು.

‘ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕರಡಿ ಹಾಗೂ ಚಿರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹರಪನಹಳ್ಳಿ, ಹೊಸದುರ್ಗ ಹಾಗೂ ಹೊಳಲ್ಕೆರೆ ಭಾಗದಲ್ಲಿ ಚಿರತೆ–ಮಾನವ ಸಂಘರ್ಷ ಕಂಡುಬಂದಿದೆ. ಮಲೆನಾಡಿಗೆ ಸೀಮಿತವಾಗಿದ್ದ ಈ ಸಂಘರ್ಷ ಬಯಲುಸೀಮೆಗೂ ವಿಸ್ತರಣೆಯಾಗಿರುವುದು ವಿಪರ್ಯಾಸ. ಮಾನವ ಕೇಂದ್ರಿತ ಅಭಿವೃದ್ಧಿ ಪರಿಕಲ್ಪನೆಗಳೇ ಇದಕ್ಕೆ ಕಾರಣ’ ಎಂದು ವಿಶ್ಲೇಷಣೆ ಮಾಡಿದರು.

‘ಮೈಸೂರಿನ ಕಾರಂಜಿ ಕೆರೆಯಲ್ಲಿದ್ದ ಮೊಸಳೆಗಳು ಒಮ್ಮೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡವು. ಕೆರೆಯಲ್ಲಿದ್ದ ಮರಳು ಕಡಿಮೆಯಾಗಿದ್ದರ ಪರಿಣಾಮವಾಗಿ ಮೊಸಳೆ ನೀರುಬಿಟ್ಟು ಹೊರಬಂದ ಸತ್ಯ ಆನಂತರ ಗೊತ್ತಾಯಿತು. ನದಿಪಾತ್ರದ ಗ್ರಾಮಗಳಿಗೂ ಮೊಸಳೆ ನುಗ್ಗಿದ ನಿದರ್ಶನ ಸಾಕಷ್ಟಿವೆ. ಮರಳು ಮೊಸಳೆಯ ಆವಾತ ತಾಣ. ಮೊಸಳೆ ಮರಳಿನಲ್ಲಿ ಮೊಟ್ಟೆ ಇಡುತ್ತದೆ. ಗಣಿಗಾರಿಕೆ ನಡೆಸಿ ಮರಳು ದೋಚಿದರೆ ಮೊಸಳೆ ಮನೆಗಳಿಗೆ ನುಗ್ಗುತ್ತದೆ’ ಎಂದು ಹೇಳಿದರು.

‘ಶ್ರೀಗಂಧ ವರ್ಷಕ್ಕೆ ಎರಡು ಬಾರಿ ಹಣ್ಣು ಬಿಡುತ್ತದೆ. ನೇರಳೆ, ಬೇವು, ಮಾವು, ಆಲ ಸೇರಿ ಬಹುತೇಕ ಮರಗಳು ಒಂದೊಂದು ಅವಧಿಯಲ್ಲಿ ಹಣ್ಣು ಬಿಡುತ್ತವೆ. ಈ ಎಲ್ಲ ಮರಗಳನ್ನು ಇದ್ದಾಗ ಮಾತ್ರ ಪಕ್ಷಿಸಂಕುಲ ಉಳಿಯುತ್ತದೆ. ಇಲಿಗಳು ಹೆಚ್ಚಾಗಿರುವ ಸ್ಥಳದಲ್ಲಿ ಕೇರೆಹಾವು ಕಾಣಿಸಿಕೊಳ್ಳುತ್ತದೆ. ಕೇರೆಹಾವು ಹೊಡೆದರೆ ಅಥವಾ ಸೆರೆಹಿಡಿದರೆ ವಿಷಜಂತು ಹೆಚ್ಚಾಗುತ್ತವೆ. ಹೀಗಾಗಿ ಕೇರೆಹಾವು ರಕ್ಷಸುವ ಅಗತ್ಯವಿದೆ’ ಎಂದು ಹೇಳಿದರು.

‘ವನ್ಯಜೀವಿಗಳ ವರ್ತನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಿಯಬೇಕು. ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ವನ್ಯಜೀವಿ ಒತ್ತಡಕ್ಕೆ ಒಳಗಾಗುತ್ತದೆ. ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸುವ ಜಾಣ್ಮೆಯನ್ನು ಅರಿಯಬೇಕು’ ಎಂದು ಸಲಹೆ ನೀಡಿದರು.ಚಿತ್ರದುರ್ಗ ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ರಾಘವೇಂದ್ರ, ಹಿರಿಯೂರು ವಿಭಾಗದ ಸಹಾಯಕ ಸಂರಕ್ಷಣಾಧಿಕಾರಿ ನೀಲಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.