ADVERTISEMENT

ಶೇ 64ರಷ್ಟು ಜನರಲ್ಲಿ ಕೋವಿಡ್‌ ಪ್ರತಿಕಾಯ

ಜಿಲ್ಲೆಯಲ್ಲಿ ನಡೆದ ಐಸಿಎಂಆರ್‌ ಸೆರೊ ಸಮೀಕ್ಷೆಯಲ್ಲಿ ದೃಢ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 15:32 IST
Last Updated 29 ಜುಲೈ 2021, 15:32 IST
ಡಾ. ರಂಗನಾಥ್
ಡಾ. ರಂಗನಾಥ್   

ಚಿತ್ರದುರ್ಗ: ಜಿಲ್ಲೆಯ ಶೇ 64.86ಜನರಲ್ಲಿ ಕೋವಿಡ್‌ ಪ್ರತಿಕಾಯ ರೂಪುಗೊಂಡಿದೆ ಎಂಬುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ನಡೆಸಿದ ನಾಲ್ಕನೇ ಸುತ್ತಿನ ಸೆರೊ ಸಮೀಕ್ಷೆಯ ವರದಿ ದೃಢಪಡಿಸಿದೆ.

ಕೊರೊನಾ ಸೋಂಕು ಸಮುದಾಯಕ್ಕೆ ವಿಸ್ತರಣೆಯಾಗಿರುವುದನ್ನು ಅರಿಯುವ ಉದ್ದೇಶದಿಂದ ಐಸಿಎಂಆರ್‌ ಈ ಸಮೀಕ್ಷೆ ನಡೆಸಿದೆ. ಜಿಲ್ಲೆಯ 11 ಸ್ಥಳಗಳಿಂದ 568 ಜನರ ರಕ್ತದ ಮಾದರಿಗಳನ್ನು ಜೂನ್‌ 30ರಂದು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ಪ್ರತಿಕಾಯ ಹೊಂದಿದವರ ಸಂಖ್ಯೆ ಹೆಚ್ಚಾಗಿರುವುದ ಗೊತ್ತಾಗಿದೆ. ಈ ಪ್ರತಿಕಾಯದ ಪ್ರಮಾಣ ಆರೋಗ್ಯ ಇಲಾಖೆಯ ಶೇ 82.8ರಷ್ಟು ಸಿಬ್ಬಂದಿಯಲ್ಲಿದೆ.

ಚಿತ್ರದುರ್ಗ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆದಿತ್ತು. ಒಂದೂವರೆ ವರ್ಷದಿಂದಲೂ ರಾಜ್ಯದ ಇದೇ ನಾಲ್ಕು ಜಿಲ್ಲೆಯಲ್ಲಿ ನಿರಂತರವಾಗಿ ಸಮೀಕ್ಷೆ ನಡೆಯುತ್ತಿದೆ. ಪ್ರತಿಕಾಯ ಹೊಂದಿದವರ ಪ್ರಮಾಣ ದಿನಕಳೆದಂತೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಭಿಪ್ರಾಯಪಟ್ಟಿದೆ.

ADVERTISEMENT

ಚಿತ್ರದುರ್ಗ ನಗರದ ವಾರ್ಡ್ ನಂ.11, ಜಿಲ್ಲಾಸ್ಪತ್ರೆ, ತಾಲ್ಲೂಕಿನ ತೊರೆಬೈಲು, ಗೊಲ್ಲರಹಳ್ಳಿ, ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ, ಮರಡಿಹಳ್ಳಿ, ಹಿರಿಯೂರಿನ ವಾರ್ಡ್ ನಂ.2. ಚಳ್ಳಕೆರೆ ತಾಲ್ಲೂಕಿನ ದೊಡ್ಡಬಾದಿಹಳ್ಳಿ, ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ, ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿ ಹಾಗೂ ಹೊಸದುರ್ಗ ತಾಲ್ಲೂಕಿನ ಚನ್ನಸಮುದ್ರದಲ್ಲಿ ಸಮೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ರಾಷ್ಟ್ರೀಯ ಕ್ಷಯ ರೋಗ ಸಂಶೋಧನಾ ಸಂಸ್ಥೆಯ 30 ತಜ್ಞರ ತಂಡ ಸಮೀಕ್ಷೆಯಲ್ಲಿ ಪಾಲ್ಗೊಂಡಿತ್ತು.

452 ಸಾರ್ವಜನಿಕರ ಪೈಕಿ 293 ಜನರಲ್ಲಿ ಕೋವಿಡ್‌ ಪ್ರತಿಕಾಯ ಬೆಳವಣಿಗೆ ಆಗಿದೆ. ಆರೋಗ್ಯ ಇಲಾಖೆಯ 116 ಸಿಬ್ಬಂದಿಯ ಪೈಕಿ 96 ಜನರಲ್ಲಿ ಪ್ರತಿಕಾಯವಿದೆ. ಬೆಂಗಳೂರು ಹಾಗೂ ಕಲಬುರ್ಗಿ ಜಿಲ್ಲೆಗೆ ಹೋಲಿಕೆ ಮಾಡಿದರೆ ಚಿತ್ರದುರ್ಗದಲ್ಲಿ ಪ್ರತಿಕಾಯ ಹೊಂದಿದವರ ಪ್ರಮಾಣ ಕೊಂಚ ಕಡಿಮೆ ಇದೆ.

***

ಪ್ರತಿಕಾಯ ಹೊಂದಿದವರ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಕೊರೊನಾ ಸೋಂಕಿನ ಸಂಪರ್ಕ ಅಥವಾ ಲಸಿಕೆಯಿಂದಲೂ ರೂಪುಗೊಂಡಿರುವ ಸಾಧ್ಯತೆ ಇದೆ.

ಡಾ.ಆರ್‌.ರಂಗನಾಥ್‌
ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.