ADVERTISEMENT

ಹಿರಿಯೂರು:ಲಂಚ ಪಡೆಯುತ್ತಿದ್ದಾಗ ಪ್ರಭಾರಿ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

ಪ್ರತ್ಯೇಕ ಪಹಣಿ ಮಾಡಿಕೊಡಲು ಲಂಚ ಪಡೆಯುತ್ತಿದ್ದಾಗ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 14:24 IST
Last Updated 17 ಸೆಪ್ಟೆಂಬರ್ 2024, 14:24 IST
ನಾಗಪ್ಪ ಲಮಾಣಿ
ನಾಗಪ್ಪ ಲಮಾಣಿ   

ಹಿರಿಯೂರು: ಪ್ರತ್ಯೇಕ ಪಹಣಿ ಮಾಡಿಕೊಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಪ್ರಭಾರಿ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ನಡೆದಿದೆ.

ತಾಲ್ಲೂಕಿನ ಹಲಗಲದ್ದಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ನಾಗಪ್ಪ ಲಮಾಣಿ ಬಂಧಿತರು.

ರೈತ ಎನ್. ತಿಪ್ಪೇಸ್ವಾಮಿ ಅವರು ಖರೀದಿಸಿದ್ದ ಒಂದು ಎಕರೆ ಜಮೀನಿನ ಪಹಣಿಯನ್ನು ತನ್ನ ಹೆಸರಿಗೆ ಪ್ರತ್ಯೇಕವಾಗಿ ಮಾಡಿಕೊಡುವಂತೆ ಆನ್‌ಲೈನ್ ಮೂಲಕ ತತ್ಕಾಲ್ ಪೋಡಿಗಾಗಿ ಮೇ 23 ರಂದು ಅರ್ಜಿ ಸಲ್ಲಿಸಿದ್ದರು. ಹಲವು ಬಾರಿ ಗ್ರಾಮ ಲೆಕ್ಕಾಧಿಕಾರಿಯನ್ನು ಭೇಟಿ ಮಾಡಿದ್ದರೂ ಕ್ರಮ ಕೈಗೊಳ್ಳದ ಕಾರಣ, ಅವರು ಚಿತ್ರದುರ್ಗದ ಲೋಕಾಯುಕ್ತ ಕಚೇರಿಯ ಪೊಲೀಸ್ ನಿರೀಕ್ಷಕಿ ವೈ.ಎಸ್. ಶಿಲ್ಪಾ ಅವರನ್ನು ಭೇಟಿಯಾಗಿದ್ದರು.

ADVERTISEMENT

ಡಿಜಿಟಲ್ ವಾಯ್ಸ್ ರೆಕಾರ್ಡ್‌ರ್‌ನೊಂದಿಗೆ ಧರ್ಮಪುರದ ನಾಡಕಚೇರಿಯಲ್ಲಿ ಲಮಾಣಿ ಅವರನ್ನು ಭೇಟಿ ಮಾಡಿದ್ದರು. ₹10,000ಕ್ಕೆ ಬೇಡಿಕೆ ಇಟ್ಟು, ಅಂತಿಮವಾಗಿ ₹9,000 ಪಡೆಯಲು ಒಪ್ಪಿದ್ದರು. ಈ ಬಗ್ಗೆ ಸೆ. 9 ರಂದು ಲೋಕಾಯುಕ್ತ ಕಚೇರಿಯಲ್ಲಿ ತಿಪ್ಪೇಸ್ವಾಮಿ ದೂರು ದಾಖಲಿಸಿದ್ದರು. 

ಲೋಕಾಯುಕ್ತ ಕಚೇರಿಯ ಪೊಲೀಸ್ ಅಧೀಕ್ಷಕ ಎನ್.ವಾಸುದೇವರಾಮ ಮಾರ್ಗದರ್ಶನದಲ್ಲಿ ಶಿಲ್ಪಾ ಅವರು ಮಂಗಳವಾರ ಕಾರ್ಯಾಚರಣೆ ನಡೆಸಿದರು. ಹಿರಿಯೂರಿನ ತಾಲ್ಲೂಕು ಕಚೇರಿ ಆವರಣದಲ್ಲಿ ದೂರುದಾರರಿಂದ ₹9,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.