ADVERTISEMENT

ಹಿರಿಯೂರು: ಅಸಲು ಕಟ್ಟಿಸಿಕೊಂಡು ಸಾಲ ತೀರುವಳಿ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 3:29 IST
Last Updated 3 ಫೆಬ್ರುವರಿ 2022, 3:29 IST
ಹಿರಿಯೂರಿನಲ್ಲಿ ಬುಧವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಹಿರಿಯೂರಿನಲ್ಲಿ ಬುಧವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.   

ಹಿರಿಯೂರು:‘ಪ್ರಗತಿ ಗ್ರಾಮೀಣ ಬ್ಯಾಂಕ್ ಒಳಗೊಂಡಂತೆ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು ಬಡ್ಡಿ ಪಾವತಿಗೆ ಒತ್ತಾಯಿಸದೆ ಸಾಲದ ಅಸಲು ಕಟ್ಟಿಸಿಕೊಂಡು ರೈತರ ಸಾಲ ತೀರುವಳಿ ಮಾಡಬೇಕು’ ಎಂದು ಒತ್ತಾಯಿಸಿ ಬುಧವಾರ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಹಿಂದಿನ ಮೂರು ವರ್ಷ ಕೋವಿಡ್ ಕಾರಣಕ್ಕೆ ಬೆಳೆ ಇಲ್ಲದೆ, ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಲ ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳಿಸಿದಲ್ಲಿ ರೈತ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಸಾಲದ ಬಡ್ಡಿ ಮನ್ನಾ ಮಾಡಿ ‘ಒನ್ ಟೈಮ್ ಸೆಟ್ಲ್‌ಮೆಂಟ್’ ಯೋಜನೆಯಡಿ ಅಸಲು ಪಾವತಿಸಿಕೊಂಡು ಸಾಲ ತೀರುವಳಿ ಮಾಡಬೇಕು ಎಂದು ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಬೆಳೆ ವಿಮೆ ಬಿಡುಗಡೆ ಮಾಡುವಲ್ಲಿ ವಿಮಾ ಕಂಪನಿಯವರು ತಾರತಮ್ಯ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ವಿಮಾ ಪರಿಹಾರ ಹಣ ಕೊಡಿಸುವಲ್ಲಿ ಗಂಭೀರ ಪ್ರಯತ್ನ ನಡೆಸಿಲ್ಲ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಶೇಂಗಾ, ಈರುಳ್ಳಿ, ರಾಗಿ, ಮೆಕ್ಕೆಜೋಳ ಮತ್ತಿತರೆ ಬೆಳೆಗಳು ಕೊಳೆತುಹೋಗಿದ್ದು, ಸರ್ಕಾರ ಘೋಷಿಸಿದ್ದ ಬೆಳೆ ನಷ್ಟ ಪರಿಹಾರದಿಂದ ತಾಲ್ಲೂಕಿನ ಬಹಳಷ್ಟು ರೈತರು ವಂಚಿತರಾಗಿದ್ದಾರೆ. 2021–22ನೇ ಸಾಲಿನ ಫಸಲ್ ಭಿಮಾ ಯೋಜನೆಯಡಿ ತೋಟಗಾರಿಕೆ ಮತ್ತು ಕೃಷಿ ಇಲಾಖೆಗೆ ಸಂಬಂಧಿಸಿದ ಬೆಳೆಗಳಿಗೂ ಪರಿಹಾರ ಬಂದಿಲ್ಲ. ಬೆಳೆ ಹಾಳಾಗಿರುವ ಎಲ್ಲಾ ರೈತರಿಗೆ ವಿಮಾ ಕಂಪನಿಯವರು ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಆಲೂರು ಸಿದ್ದರಾಮಣ್ಣ, ವೈ. ಶಿವಣ್ಣ, ಕೆ.ಕೆ. ರಾಜಣ್ಣ, ನಾಗಭೂಷಣ್, ರಂಗಸ್ವಾಮಿ, ತಿಮ್ಮಾರೆಡ್ಡಿ, ರಾಮಣ್ಣ, ರಾಜಪ್ಪ, ವೆಂಕಟಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.