ADVERTISEMENT

ಚಿತ್ರದುರ್ಗ: ಹಕ್ಕುಪತ್ರ ವಿತರಿಸಲು ಒತ್ತಾಯ

ನ್ಯಾಯ ದೊರಕಿಸಿಕೊಡುವಂತೆ ಸರ್ಕಾರಕ್ಕೆ ಬಸವನಾಗಿದೇವ ಸ್ವಾಮೀಜಿ ಮನವಿ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 4:13 IST
Last Updated 13 ಆಗಸ್ಟ್ 2021, 4:13 IST
ಬಸವನಾಗಿದೇವ ಸ್ವಾಮೀಜಿ
ಬಸವನಾಗಿದೇವ ಸ್ವಾಮೀಜಿ   

ಚಿತ್ರದುರ್ಗ: ಶತಮಾನಗಳಿಂದಲೂ ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡು ಬಂದಿರುವ ಭೂರಹಿತ ಬಗರ್‌ಹುಕುಂ ಹಾಗೂ ಅರಣ್ಯ ಅವಲಂಬಿತ ರೈತರಿಗೆ ಸಾಗುವಳಿ ಪತ್ರ, ಅರಣ್ಯ ಹಕ್ಕುಪತ್ರ ನೀಡಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಒತ್ತಾಯಿಸಿದೆ.

‘ಹಕ್ಕಿಗಾಗಿ ಸಲ್ಲಿಕೆಯಾದ ಅರ್ಜಿಗಳನ್ನು ಮರು ಪರಿಶೀಲಿಸುವಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ನೋಡಲ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ ಬಂದು 75 ವರ್ಷ ಪೂರೈಸುತ್ತಿದೆ. ಆದರೆ, ಅರ್ಹರಿಗೆ ಹಕ್ಕುಪತ್ರ ವಿತರಿಸುವಲ್ಲಿ ಸರ್ಕಾರ ಕಾಳಜಿ ತೋರುತ್ತಿಲ್ಲ. ಭೂಮಿಯ ಹಕ್ಕುಪತ್ರ ನೀಡಬೇಕಾದ ಜವಾಬ್ದಾರಿ ಸರ್ಕಾರಿ ಅಧಿಕಾರಿಗಳದ್ದಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆಸಕ್ತಿ ವಹಿಸಿ ಹಕ್ಕುಪತ್ರ ವಿತರಿಸದಿದ್ದರೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

ವೇದಿಕೆ ರಾಜ್ಯ ಘಟಕದ ಸಂಚಾಲಕ ಕೆ.ಬಿ. ರೂಪನಾಯ್ಕ, ‘ಅರಣ್ಯ ಭೂಮಿ ಹಕ್ಕು ಕಾಯ್ದೆ ಅನ್ವಯ ಅರ್ಹ ರೈತರಿಗೆ ಹಕ್ಕುಪತ್ರ ನೀಡಬೇಕು. ಆದರೆ, ಈ ವಿಚಾರದಲ್ಲಿ ಅರಣ್ಯ, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ದೂರಿದರು.

ಕರ್ನಾಟಕ ಶಾಂತಿ ಮತ್ತು ಸೌಹಾರ್ದವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್‌ಕುಮಾರ್, ‘ಸರ್ಕಾರ ಇದಕ್ಕೆ ಸ್ಪಂದಿಸುವ ಮೂಲಕ ಅರ್ಹರಿಗೆ ಹಕ್ಕುಪತ್ರ ನೀಡಿ ನೆರವಿಗೆ ಧಾವಿಸಬೇಕು’ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ್ ಐಹೊಳೆ, ಶಶಿಕುಮಾರ್, ಚಂದ್ರಣ್ಣ, ಜಗದೀಶ್, ಬಾಳೆಕಾಯಿ ಶ್ರೀನಿವಾಸ್, ವೈ. ಕುಮಾರ್, ಗಣೇಶ್‌ನಾಯ್ಕ ಇದ್ದರು.

ಬಳಿಕ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.