ADVERTISEMENT

ಪ್ರತ್ಯೇಕ ಗ್ರಾಮ ಪಂಚಾಯಿತಿಗೆ ಒತ್ತಾಯ

ಹಲವು ಗ್ರಾಮಗಳ ಗ್ರಾಮಸ್ಥರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 5:44 IST
Last Updated 2 ಡಿಸೆಂಬರ್ 2021, 5:44 IST
ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಗ್ರಾಮಸ್ಥರು ಮನವಿ ಸಲ್ಲಿಸಿದರು
ಚಿತ್ರದುರ್ಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಒತ್ತಾಯಿಸಿ ಬುಧವಾರ ಗ್ರಾಮಸ್ಥರು ಮನವಿ ಸಲ್ಲಿಸಿದರು   

ಚಿತ್ರದುರ್ಗ: ಜಿಲ್ಲೆಯ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿಯಾಗಿ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

ಬೋಸೇದೇವರ ಹಟ್ಟಿ, ಮಾದಯ್ಯನ ಹಟ್ಟಿ, ಜಾಗನೂರಹಟ್ಟಿ, ಕಾವಲುಬಸವೇಶ್ವರ ನಗರ, ಚನ್ನಬಸಯ್ಯನಹಟ್ಟಿ, ಗಂಗಯ್ಯನಹಟ್ಟಿ, ಕೊಂಡಯ್ಯನ ಕಪಿಲೆ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಗ್ರಾಮಗಳಲ್ಲಿ ಸುಮಾರು 15 ಸಾವಿರ ಜನ ವಾಸಿಸುತ್ತಿದ್ದಾರೆ. 6 ಸಾವಿರ ಎಕರೆ ಕೃಷಿ ಜಮೀನು ಇದೆ. 1,800 ಖಾತೆದಾರರು ಇದ್ದಾರೆ. ಕೃಷಿ ಅವಲಂಬಿತರೇ ಹೆಚ್ಚು. ಆದರೆ, ಗ್ರಾಮಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಕಾರಣ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹಾಗೂ ಕೃಷಿ ಇಲಾಖೆಯಿಂದ ಸಿಗುವ ಸರ್ಕಾರಿ ಸೌಲಭ್ಯಗಳಿಂದ ವಂಚಿತವಾಗಿವೆ. ಹೀಗಾಗಿ ಇಲ್ಲಿನ ರೈತರಿಗೆ ತೊಂದರೆ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.

ADVERTISEMENT

ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹೆಚ್ಚಿದ್ದಾರೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಂದಾಯ, ನಲ್ಲಿ ಕಂದಾಯದ ಶುಲ್ಕ ಅತ್ಯಂತ ಹೆಚ್ಚಾಗಿದೆ. ಕೋವಿಡ್ ನಂತರ ಜನ ಜೀವನ ಮಾಡುವುದೇ ದುಸ್ತರವಾಗಿದೆ. ಆದ್ದರಿಂದ ಪ್ರತ್ಯೇಕ ಗ್ರಾಮ ಪಂಚಾಯಿತಿ ಮಾಡುವ ಮೂಲಕ
ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಗ್ರಾಮಸ್ಥರಾದ ಎನ್.ಬಿ. ಬೋರಯ್ಯ, ಎಸ್.ಓಬಯ್ಯ, ಡಿ.ಬಿ. ಬೋರಯ್ಯ, ಪಿ.ನಾಗರಾಜ, ಜಿ.ಡಿ. ಮುದಿಯಪ್ಪ, ಕೆ.ಪಿ. ತಿಪ್ಪೇಸ್ವಾಮಿ, ಪಿ.ಬಿ. ಓಬಯ್ಯ, ಚಂದ್ರಶೇಖರ, ಬಿ.ಬೋರಯ್ಯ, ಪಿ.ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.