ADVERTISEMENT

ತುಂಗಭದ್ರಾ ಹಿನ್ನೀರು ಯೋಜನೆ ಪೂರ್ಣಗೊಳಿಸಲು ತಾಕೀತು

ಯೋಜನೆ ಕಾಮಗಾರಿ ವೀಕ್ಷಿಸಿದ ಸಚಿವ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2023, 16:07 IST
Last Updated 24 ಆಗಸ್ಟ್ 2023, 16:07 IST
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಗೆ ಗುರುವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆ ಕಾಮಗಾರಿ ವೀಕ್ಷಿಸಿದರು
ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆಗೆ ಗುರುವಾರ ಭೇಟಿ ನೀಡಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆ ಕಾಮಗಾರಿ ವೀಕ್ಷಿಸಿದರು   

ಮೊಳಕಾಲ್ಮುರು: ಬಹು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಜಾರಿಗೊಳಿಸಿರುವ ತುಂಗಭದ್ರಾ ಹಿನ್ನೀರು ಕುಡಿಯುವ ನೀರಿನ ಯೋಜನೆಯನ್ನು ಡಿಸೆಂಬರ್ ಒಳಗಾಗಿ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ತಾಕೀತು ಮಾಡಿದರು.

ತಾಲ್ಲೂಕಿನ ಬಿ.ಜಿ.ಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುರುವಾರ ಯೋಜನೆ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ವೀಕ್ಷಿಸಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸತತವಾಗಿ ಫ್ಲೋರೈಡ್ ಮತ್ತು ನೀರಿನ ಸಮಸ್ಯೆ ಎದುರಿಸುತ್ತಿರುವ ಕೂಡ್ಲಿಗಿ, ಚಿತ್ರದುರ್ಗ. ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಪಾವಗಡ ತಾಲ್ಲೂಕಿನ ಜನರಿಗೆ ಶುದ್ಧ ನೀರು ನೀಡುವ ಸದುದ್ದೇಶದಿಂದ ₹ 2,300 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಲಾಗಿದೆ. ಹಿಂದೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಾಮಗಾರಿ ಆರಂಭವಾಗಿ 5 ವರ್ಷಗಳು ಪೂರ್ಣವಾಗಿದ್ದರೂ ಇನ್ನೂ ಮುಗಿಯದಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಂತ್ರಿಕ ಕಾರಣದಿಂದಾಗಿ ಕೆಲವೆಡೆ ಪೈಪ್ ಹಾಕಲು ವಿಳಂಬವಾಗಿರುವುದಕ್ಕೆ ಈ ವರ್ಷದ ಡಿಸೆಂಬರ್‌ವರೆಗೆ ಯೋಜನೆ ಪೂರ್ಣಕ್ಕೆ ಅವಕಾಶ ನೀಡಲಾಗಿದೆ. ಸಬೂಬು ಹೇಳದೇ ಕಾಮಗಾರಿ ಪೂರ್ಣಗೊಳಿಸಬೇಕು. ಈ ಯೋಜನೆಗೆ ಪೂರಕವಾಗಿ ಜಲ್ ಜೀವನ್ ಮಿಷನ್ ಯೋಜನೆ ಅನುಷ್ಠಾನ ಮಾಡಲಾಗಿದೆ. ಹಳ್ಳಿಗಳಲ್ಲಿ ಮನೆಗಳಿಗೆ ಪೈಪ್ ಹಾಕಲಾಗಿದ್ದು, ಯೋಜನೆ ಪೂರ್ಣವಾದಲ್ಲಿ ಇದೇ ನೀರನ್ನು ಜಲ್ ಜೀವನ್ ಮೂಲಕ ವಿತರಣೆ ಮಾಡಲಾಗುವುದು. ಯೋಜನೆ ಪ್ರಗತಿ ಬಗ್ಗೆ ಚರ್ಚೆ ನಡೆಸಲು ಹೊಸಪೇಟೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ ಎಂದರು.

ಇದಕ್ಕೂ ಮೊದಲು ತಳಕು ಸಮೀಪದ ಹೊಸಹಳ್ಳಿಯಲ್ಲಿ ಇದೇ ಯೋಜನೆ ಪೈಪ್‌ಲೈನ್‌ ಕಾಮಗಾರಿಯನ್ನು ಸಚಿವರು ವೀಕ್ಷಿಸಿದರು. ತಹಶೀಲ್ದಾರ್ ಎಂ.ವಿ. ರೂಪಾ, ಅಧೀಕ್ಷಕ ಎಂಜಿನಿಯರ್‌ಗಳಾದ ಚಂದ್ರಹಾಸ್, ಷಣ್ಮುಖ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ದಯಾನಂದ ಸಾಗರ್, ಹರೀಶ್ ಚಂದ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಪಾಲಯ್ಯ, ರಾಮದಾಸ್, ಮಂಡಲಾಧ್ಯಕ್ಷ  ಪಿ.ಎಂ.ಮಂಜುನಾಥ್, ಎಸ್‌ಸಿ ಮೋರ್ಚಾ ಅಧ್ಯಕ್ಷ ಮೊಗಲಹಳ್ಳಿ ಸಿದ್ಧಾರ್ಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.