ಹಿರಿಯೂರು: ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಪರವಾಗಿದ್ದು, ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಬಗ್ಗೆ ಧ್ವನಿ ಎತ್ತುವಂತೆ ಹಾಗೂ ಸಿಎಂ ಜೊತೆ ಚರ್ಚಿಸುವಂತೆ ಒತ್ತಾಯಿಸಿ ಶನಿವಾರ ದಲಿತಪರ ಸಂಘಟನೆಗಳ ಒಕ್ಕೂಟದಿಂದ ನಗರದ ಟಿ.ಬಿ.ವೃತ್ತದ ಅಂಬೇಡ್ಕರ್ ಪ್ರತಿಮೆಯಿಂದ ಆರಂಭಿಸಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದ9 ಹೋರಾಟಗಾರರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.
‘ಸಚಿವ ಸಂಪುಟದಲ್ಲಿ ಜಿಲ್ಲಾ ಮಾದಿಗ ಸಮುದಾಯದ ಪರವಾಗಿ ಧ್ವನಿ ಎತ್ತುತ್ತೇನೆ. 2000ದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸದಾಶಿವ ಆಯೋಗ ರಚನೆ ಮಾಡಿ ವಸ್ತುಸ್ಥಿತಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದ್ದರು. ಅಲ್ಲದೇ 2008ರಲ್ಲಿ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಭೇಟಿ ಮಾಡಿದಾಗ ಇದಕ್ಕೆ ಸಂಬಂಧಪಟ್ಟಂತೆ ₹ 9 ಕೋಟಿ ಅನುದಾನ ಮಂಜೂರು ಮಾಡಿಕೊಟ್ಟಿದ್ದೆ. ನಿಮ್ಮ ಹೋರಾಟ ನಿರಂತರವಾಗಿದ್ದು, ಯಶಸ್ಸು ಕಾಣುವ ಸಮಯ ಹತ್ತಿರ ಬಂದಿದೆ’ ಎಂದು ಹೇಳಿದರು.
‘ಸುಪ್ರೀಂಕೋರ್ಟ್ ಆದೇಶವನ್ನು ಕೂಡಲೇ ಜಾರಿಗೊಳಿಸುವ ಮೂಲಕ ಅಸ್ಪೃಶ್ಯ ಪರಿಶಿಷ್ಟರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು. ಒಳ ಮೀಸಲಾತಿ ಜಾರಿ ಆಗುವವರೆಗೆ ಸರ್ಕಾರದ ಎಲ್ಲ ನೇಮಕಾತಿಗಳನ್ನು ರದ್ದು ಪಡಿಸಬೇಕು. ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಅನುದಾನದ ಹಂಚಿಕೆಯನ್ನು ಸ್ಥಗಿತಗೊಳಿಸಬೇಕು’ ಎಂದು ಮುಖಂಡರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಮುಖಂಡರಾದ ಬೋರನಕುಂಟೆ ಜೀವೇಶ್, ಕೆ.ಪಿ.ಶ್ರೀನಿವಾಸ್, ಹನುಮಂತರಾಯ, ಹೆಗ್ಗೆರೆ ಮಂಜುನಾಥ್, ಬಬ್ಬೂರು ಪರಮೇಶ್ವರಪ್ಪ, ರಾಘವೇಂದ್ರ, ಘಾಟ್ ರವಿ, ಸಿದ್ದಪ್ಪ, ಗುರುಶಾಮಯ್ಯ, ಕರಿಯಪ್ಪ, ಓಂಕಾರ್, ರಂಗಸ್ವಾಮಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.