ADVERTISEMENT

ಹಿರಿಯೂರು: ಸಕ್ಕರೆ ಕಾರ್ಖಾನೆಗೆ ಸಿಗುವುದೇ ಮರುಜೀವ?

ವಾಣಿವಿಲಾಸಕ್ಕೆ ನೀರು ಬಂತು, ಕಾರ್ಖಾನೆಯೂ ಶುರುವಾಗಲಿ: ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 6:03 IST
Last Updated 21 ಫೆಬ್ರುವರಿ 2022, 6:03 IST
ಮುಳ್ಳುಗಿಡಗಳ ನಡುವೆ ಮುಚ್ಚಿ ಹೋಗುತ್ತಿರುವ ಹಿರಿಯೂರಿನ ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆ
ಮುಳ್ಳುಗಿಡಗಳ ನಡುವೆ ಮುಚ್ಚಿ ಹೋಗುತ್ತಿರುವ ಹಿರಿಯೂರಿನ ವಾಣಿವಿಲಾಸ ಸಹಕಾರ ಸಕ್ಕರೆ ಕಾರ್ಖಾನೆ   

ಹಿರಿಯೂರು: 1971–72ರಲ್ಲಿ ಆರಂಭಗೊಂಡು 2002ರಲ್ಲಿ ಬಾಗಿಲು ಮುಚ್ಚಿದ ಚಿತ್ರದುರ್ಗ ಜಿಲ್ಲೆಯ ಏಕೈಕ ಸಹಕಾರ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆಯ ವಾಣಿವಿಲಾಸ ಸಕ್ಕರೆ ಕಾರ್ಖಾನೆಗೆ ಈ ಸಾಲಿನ ಬಜೆಟ್‌ನಲ್ಲಿ ಮರುಜೀವ ಸಿಗಬಹುದೆ? ಎಂಬ ನಿರೀಕ್ಷೆ ತಾಲ್ಲೂಕಿನ ಜನರದ್ದು.

ವಾಣಿವಿಲಾಸ ಜಲಾಶಯಕ್ಕೆ ಭದ್ರೆಯ ನೀರು ಹರಿದು ಬರುತ್ತಿರುವ ಕಾರಣ, ಬೀದರ್–ಶ್ರೀರಂಗಪಟ್ಟಣ ಹೆದ್ದಾರಿಗೆ ಹೊಂದಿಕೊಂಡು 165 ಎಕರೆ ವಿಸ್ತೀರ್ಣದಲ್ಲಿರುವ ಸಕ್ಕರೆ ಕಾರ್ಖಾನೆ ಪುನರಾರಂಭಗೊಂಡಲ್ಲಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಮತ್ತೆ ಗರಿಗೆದರಲು ಸಹಾಯವಾಗುತ್ತದೆ.

ಕಾರ್ಖಾನೆಯ ಮಾರ್ಗದಲ್ಲೇ ಆಗಾಗ ಸಂಚರಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಳ್ಳುಗಿಡಗಳಿಂದ ಮುಚ್ಚಿಹೋಗಿರುವ ಸಕ್ಕರೆ ಕಾರ್ಖಾನೆಯ ಕಂಪು ಮತ್ತೆ ಪಸರಿಸುವಂತೆ ಮಾಡಬಹುದೇ ಎಂಬ ಕಾತುರ ಜನರದ್ದು.

ADVERTISEMENT

‘400ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳಿಗೆ ಬದುಕು ಕೊಟ್ಟಿದ್ದ ಈ ಕಾರ್ಖಾನೆ ಪ್ರತಿನಿತ್ಯ 1250 ಟನ್ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿತ್ತು. ಕಾರ್ಖಾನೆಯ ಇಂದಿನ ದುಸ್ಥಿತಿಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ, ಆಡಳಿತ ನಡೆಸಿದವರ ದುರಾಡಳಿತ ಕಾರಣ’ ಎಂಬುದು ಸ್ಥಳೀಯರ ಆರೋಪ.

‘ಕಾರ್ಖಾನೆ ಹೆಚ್ಚಿನ ಲಾಭ ಗಳಿಸಲಿ ಎಂಬ ಕಾರಣಕ್ಕೆ 1979–80ರಲ್ಲಿ ಡಿಸ್ಟಿಲರಿ ಮಂಜೂರು ಮಾಡಲಾಗಿತ್ತು. ಮಳೆಯ ಕೊರತೆ, ವಾಣಿವಿಲಾಸ ಜಲಾಶಯದಲ್ಲಿ ನೀರು ಬರಿದಾಗಿದ್ದು, ಆಡಳಿತದಲ್ಲಿನ ಅವ್ಯವಸ್ಥೆಯಿಂದ ಡಿಸ್ಟಿಲರಿ ಆರಂಭಗೊಂಡ ನಾಲ್ಕೇ ವರ್ಷದಲ್ಲಿ ಕಾರ್ಖಾನೆ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಿತು. 1985ರಲ್ಲಿ ಕಾರ್ಖಾನೆಗೆ ಬೀಗಮುದ್ರೆ ಬಿದ್ದಿತು.1993ರಲ್ಲಿ ವಾಣಿ ವಿಲಾಸ ಜಲಾಶಯಕ್ಕೆ ಅದೃಷ್ಟವೋ ಎಂಬಂತೆ 108 ಅಡಿ ನೀರು ಬಂದಿದ್ದರಿಂದ ರೈತರ ಒತ್ತಾಯದ ಮೇರೆಗೆ ಸಕ್ಕರೆ ಕಾರ್ಖಾನೆ ಪುನಾರಂಭಗೊಂಡಿತು. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗಿ ಜಲಾಶಯದಲ್ಲಿ ನೀರು ಇಲ್ಲವಾಗಿಯಿತು. ಕಬ್ಬು ಬೆಳೆಗಾರರ ನಿರಾಸಕ್ತಿ, ಕಚ್ಚಾವಸ್ತು ಪೂರೈಕೆಯಲ್ಲಿನ ವ್ಯತ್ಯಾಸದಿಂದ 2002ರಲ್ಲಿ ಕಾರ್ಖಾನೆ ಮತ್ತೆ ಸ್ಥಗಿತಗೊಂಡಿತು. ಕಾರ್ಖಾನೆ ನಡೆಸುವುದು ಸಾಧ್ಯವಿಲ್ಲ ಎಂಬ ಕಾರಣ ಮುಂದೆ ಒಡ್ಡಿ 2004ರಲ್ಲಿ ಸಮಾಪನ ಆದೇಶ ಹೊರಬಿದ್ದ ನಂತರ ಕಾರ್ಖಾನೆ ಆರಂಭಿಸಲು ಗಟ್ಟಿ ಹೋರಾಟವೇ ನಡೆಯಲಿಲ್ಲ’ ಎನ್ನುತ್ತಾರೆತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ.

‘ದಶಕಗಳ ಕಾಲ ಸಕ್ಕರೆಯ ಕಂಪು, ನಳನಳಿಸುವ ಮಾವು, ಹುಣಿಸೆ, ತೆಂಗು, ಸಪೋಟ ಗಿಡ–ಮರಗಳಿಂದ ಕೂಡಿದ್ದ ಆವರಣದಲ್ಲಿ, ಫಲ ಕೊಡುತ್ತಿದ್ದ ಮರಗಳು ಕಾಣದಂತೆ ಬಳ್ಳಾರಿ ಜಾಲಿಗಿಡ ಬೆಳೆದಿದೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಕಟ್ಟಡಗಳು, ಕಾರ್ಖಾನೆಯ ಯಂತ್ರಗಳು ಹಾಳಾಗಿ ಹೋಗಿವೆ. ದಿ.ಬಿ.ಎಲ್.ಗೌಡರಂತಹ ಮೇಧಾವಿ ರಾಜಕಾರಣಿಗಳ ಮುಂದಾಲೋಚನೆ ಫಲವಾಗಿ ತಲೆ ಎತ್ತಿದ್ದ ಸಕ್ಕರೆ ಕಾರ್ಖಾನೆ ಈಗಸ್ಮಶಾನದಂತಾಗಿದೆ’ ಎಂದು ಬೇಸರಿಸುತ್ತಾರೆ ಅವರು.

2013ರಲ್ಲಿ ಕಾರ್ಖಾನೆ ಮಾರಾಟಕ್ಕೆ ಸರ್ಕಾರ ಆದೇಶ ನೀಡಿತ್ತು. ಸ್ಥಳೀಯ ರೈತ ಮುಖಂಡರು, ಕಾರ್ಮಿಕರ ವಿರೋಧದ ಫಲವಾಗಿ ಕಾರ್ಖಾನೆ ಮಾರಾಟವಾಗಲಿಲ್ಲ. ಎರಡು ವರ್ಷದಿಂದ ಭದ್ರಾ ಮೇಲ್ದಂಡೆ ಯೋಜನೆಯ ನೀರು ವಾಣಿವಿಲಾಸಕ್ಕೆ ಹರಿದುಬರುತ್ತಿದ್ದು, ಅಧಿಕಾರಸ್ಥರು ಬದ್ಧತೆ ತೋರಿಸಿದಲ್ಲಿ, ಕಾರ್ಖಾನೆ ಅಚ್ಚುಕಟ್ಟು ಪ್ರದೇಶದಲ್ಲಿ ಕಬ್ಬು ಅಭಿವೃದ್ಧಿಪಡಿಸಿ, ಆಧುನಿಕ ಯಂತ್ರಗಳನ್ನು ಅಳವಡಿಸಿ ಕಾರ್ಖಾನೆಯ ಸದ್ದು ಕೇಳಿಸಬೇಕು. ಕೈಗಾರಿಕೆಗೆ ಒತ್ತು ನೀಡಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

***

ಸಕ್ಕರೆ ಕಾರ್ಖಾನೆ ಜಿಲ್ಲೆಯ ಬಹುದೊಡ್ಡ ಕಾರ್ಖಾನೆ. ಸರ್ಕಾರ ಆರಂಭಿಸುತ್ತದೋ, ಖಾಸಗಿಯವರಿಗೆ ಕೊಡುತ್ತಾರೆಯೋ ಗೊತ್ತಿಲ್ಲ. ರೈತರ ಹಿತ ಕಾಪಾಡುವ ಷರತ್ತುಗಳೊಂದಿಗೆ ಕಾರ್ಖಾನೆ ಆರಂಭಿಸಬೇಕು.

–ನಟರಾಜ್, ಪ್ರಗತಿಪರ ರೈತ

***

ಕಾರ್ಖಾನೆ ಆರಂಭಿಸಲು ಕಬ್ಬು ಬೆಳೆಯಲು ರೈತರನ್ನು ಸಜ್ಜುಗೊಳಿಸಬೇಕು. ಬಂಡವಾಳ ಹಾಕಿ ಕಬ್ಬು ಬೆಳೆಯುವ ಸ್ಥಿತಿಯಲ್ಲಿ ನಾವಿಲ್ಲ. ಬ್ಯಾಂಕುಗಳ ಮೂಲಕ ದೀರ್ಘಾವಧಿಯ ಬಡ್ಡಿ ರಹಿತ ಸಾಲ ಕೊಡಿಸಬೇಕು.</p>

–ರಾಜು, ಕಬ್ಬು ಬೆಳೆಗಾರ, ಕಸವನಹಳ್ಳಿ

***

ಕಾರ್ಖಾನೆ ಆರಂಭಗೊಂಡಲ್ಲಿ ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ಕೆಲವು ತಾಲ್ಲೂಕುಗಳ ರೈತರಿಗೆ ಅನುಕೂಲ ಆಗಲಿದೆ. ಇಡೀ ರಾಜ್ಯದಲ್ಲಿ ಕಾರ್ಖಾನೆಗೆ 165 ಎಕರೆ ಜಾಗವಿರುವ ಮತ್ತೊಂದು ಸ್ಥಳ ಸಿಗದು.

–ಎಚ್.ಆರ್. ತಿಮ್ಮಯ್ಯ, ಅಧ್ಯಕ್ಷ, ತಾಲ್ಲೂಕು ಕೃಷಿಕ ಸಮಾಜ

***

ತೋಟಗಾರಿಕೆ ಬೆಳೆಗಳತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಹಿರಿಯೂರಿನಲ್ಲೂ ಹಣ್ಣು–ತರಕಾರಿ ಮಾರುಕಟ್ಟೆ ಆದಲ್ಲಿ ಮಾತ್ರ ರೈತರು ಉಳಿಯಲು ಸಾಧ್ಯ. ವಿಸ್ತೃತ ಮಾರುಕಟ್ಟೆ ನಿರ್ಮಿಸಬೇಕು.

–ಕೆ.ಟಿ. ತಿಪ್ಪೇಸ್ವಾಮಿ, ಅಧ್ಯಕ್ಷ, ರೈತ ಸಂಘ ತಾಲ್ಲೂಕು ಘಟಕ

***

ಈಗ ಶೇ 18ರಷ್ಟು ಜಿಎಸ್ ಟಿ ಇದೆ. ಇಷ್ಟೊಂದು ತೆರಿಗೆ ಪಾವತಿಸಿ ಸಣ್ಣ ಉದ್ಯಮ ನಡೆಸುವುದು ಕಷ್ಟ. ತೆರಿಗೆ ಕಡಿತ ಆಗಬೇಕು. ಹಿಂದಿನ ಮೂರು ವರ್ಷದ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು.

–ವೈ.ಪಿ.ಡಿ. ದಾದಾಪೀರ್, ವೈಪಿಡಿ ರೂಫಿಂಗ್ ಷೀಟ್ ಇಂಡಸ್ಟ್ರಿ ಮಾಲೀಕ

***

ತಾಲ್ಲೂಕಿನಲ್ಲಿ, ಸರ್ಕಾರ ಕೈಗಾರಿಕೆ ಪ್ರದೇಶ ಆರಂಭಿಸಿದಲ್ಲಿ, ಉದ್ಯೋಗ ಹುಡುಕಿ ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಹೋಗುವ ಯುವಕರು ಸ್ಥಳೀಯವಾಗಿ ಬದುಕು ಕಟ್ಟಿಕೊಳ್ಳಬಹುದು.

- ಆಲೂರು ಸಿದ್ದರಾಮಣ್ಣ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.