ADVERTISEMENT

ಚಿತ್ರದುರ್ಗ: ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸಿದ ಉಪಗ್ರಹ ಲೋಕ

ಬಾಹ್ಯಾಕಾಶ ಸಪ್ತಾಹ; ಇಸ್ರೊ ವಿಜ್ಞಾನಿಗಳಿಂದ ಪ್ರಾತ್ಯಕ್ಷಿಕೆ, ಸಂವಾದ, ವಿಜ್ಞಾನ ವಸ್ತುಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:29 IST
Last Updated 9 ಅಕ್ಟೋಬರ್ 2025, 6:29 IST
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಯು.ಆರ್‌.ರಾವ್‌ ಸ್ಯಾಟಲೈಟ್‌ ಕೇಂದ್ರದ ವತಿಯಿಂದ ನಡೆದ ಬಾಹ್ಯಾಕಾಶ ಸಪ್ತಾಹ ಸಮಾರಂಭದಲ್ಲಿ ವಿದ್ಯಾರ್ಥಿನಿಯರಾದ ಜಿ.ಸಿ.ಶ್ರಿಯಾ, ಕೆ.ವಿ.ಝಾನ್ಸಿ ಅವರು ಜಿಸ್ಯಾಟ್‌ ಬಗ್ಗೆ ಮಾಹಿತಿ ನೀಡಿದರು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಯು.ಆರ್‌.ರಾವ್‌ ಸ್ಯಾಟಲೈಟ್‌ ಕೇಂದ್ರದ ವತಿಯಿಂದ ನಡೆದ ಬಾಹ್ಯಾಕಾಶ ಸಪ್ತಾಹ ಸಮಾರಂಭದಲ್ಲಿ ವಿದ್ಯಾರ್ಥಿನಿಯರಾದ ಜಿ.ಸಿ.ಶ್ರಿಯಾ, ಕೆ.ವಿ.ಝಾನ್ಸಿ ಅವರು ಜಿಸ್ಯಾಟ್‌ ಬಗ್ಗೆ ಮಾಹಿತಿ ನೀಡಿದರು   

ಚಿತ್ರದುರ್ಗ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ), ಯು.ಆರ್‌.ರಾವ್‌ ಸ್ಯಾಟಲೈಟ್‌ ಕೇಂದ್ರದ (ಯುಆರ್‌ಎಸ್‌ಸಿ) ವತಿಯಿಂದ ಬುಧವಾರ ನಗರದ ವಿದ್ಯಾವಿಕಾಸ ಶಾಲಾ ಆವರಣದಲ್ಲಿ ಬುಧವಾರ ನಡೆದ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮ ಜಿಲ್ಲೆಯಾದ್ಯಂತ ವಿವಿಧ ಶಾಲೆಗಳಿಂದ ಬಂದಿದ್ದ ನೂರಾರು ವಿದ್ಯಾರ್ಥಿಗಳಲ್ಲಿ ಬೆರಗು ಮೂಡಿಸಿತು.

ಇಸ್ರೊ, ಯುಆರ್‌ಎಸ್‌ಸಿ ವಿಜ್ಞಾನಿಗಳು ನೀಡಿದ ಉಪನ್ಯಾಸ, ಪ್ರಾತ್ಯಕ್ಷಿಕೆ, ಉಪಗ್ರಹಗಳ ಮಾದರಿ ಪ್ರದರ್ಶನ ವಿದ್ಯಾರ್ಥಿಗಳಲ್ಲಿ ಕುತೂಹಲ ಮೂಡಿಸಿತು. ಇತ್ತೀಚೆಗೆ ಉಡಾವಣೆಗೊಂಡ ಉಪಗ್ರಹ ಮಾದರಿಗಳ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು. ಉಪಗ್ರಹ ಮಾದರಿ ಬಗ್ಗೆ ವಿದ್ಯಾರ್ಥಿಗಳು ಕೂಡ ಮಾಹಿತಿ ನೀಡಿ ಗಮನ ಸೆಳೆದರು. ವಿದ್ಯಾರ್ಥಿಗಳು ಮಾತ್ರವಲ್ಲದೇ ಪೋಷಕರು, ಸಾರ್ವಜನಿಕರು ಕೂಡ ಪಾಲ್ಗೊಂಡು ಬಾಹ್ಯಾಕಾಶ ಲೋಕದ ಬಗ್ಗೆ ತಿಳಿವಳಿಕೆ ಪಡೆದರು.

ವಿಜ್ಞಾನದ ವಸ್ತುಪ್ರದರ್ಶನದ ಆರಂಭದಲ್ಲೇ ಉಪಗ್ರಹ ಉಡಾವಣಾ ವಾಹನಗಳ ಮಾದರಿ ಪ್ರದರ್ಶನ ಗಮನ ಸೆಳೆಯಿತು. ಉಪಗ್ರಹ ವಾಹಕಗಳ ಮಾಹಿತಿಯನ್ನು ಇಂಗ್ಲಿಷ್‌ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ನೀಡಲಾಗಿತ್ತು. ವೈಜ್ಞಾನಿಕ ಹಾಗೂ ಅಂತರಗ್ರಹ ಪರ್ಯಟನೆ ಕುರಿತಂತೆ ಕಟೌಟ್‌ಗಳನ್ನು ಹಾಕಿ ಮಾಹಿತಿ ನೀಡಲಾಯಿತು.

ADVERTISEMENT

ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವವನ್ನು ಬೆರಗುಗೊಳಿಸಿದ ಚಂದ್ರಯಾನ– 3 ಸಾಧನೆಯ ಸಂಪೂರ್ಣ ವಿವರ ವಸ್ತುಪ್ರದರ್ಶನದಲ್ಲಿ ಅನಾವರಣಗೊಂಡಿತು. ನಮ್ಮ ದೇಶದ ವಿಜ್ಞಾನಿಗಳ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು. ದೂರ ಸಂವೇದಿ ಉಪಗ್ರಹಗಳ ಉಡಾವಣೆ, ಅವುಗಳು ನಿರ್ವಹಿಸುವ ಕಾರ್ಯ, ಅವುಗಳಿರುವ ಕಕ್ಷೆಯ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದರು.

ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ‘ಸಂಪರ್ಕ ಉಪಗ್ರಹ’ (ಕಮ್ಯುನಿಕೇಷನ್‌ ಸ್ಯಾಟಲೈಟ್‌)ಗಳು ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ವಿಜ್ಞಾನಿಗಳು ಮಕ್ಕಳಿಗೆ ತಿಳಿಸಿಕೊಟ್ಟರು. ಜಿಯೊ ಸ್ಟೇಷನರಿ ಸ್ಯಾಟಲೈಟ್‌ (ಜಿಸ್ಯಾಟ್‌) ಬಗ್ಗೆ ವಿದ್ಯಾರ್ಥಿನಿಯರಾದ ಜಿ.ಸಿ.ಶ್ರಿಯಾ ಹಾಗೂ ಕೆ.ವಿ.ಝಾನ್ಸಿ ಮನಮುಟ್ಟುವ ರೀತಿಯಲ್ಲಿ ವಿವರಣೆ ನೀಡಿದರು.

ಬೃಹತ್‌ ಉಪಗ್ರಹಗಳು ಮಾತ್ರವಲ್ಲದೇ ಸಣ್ಣ ಸಣ್ಣ ಉಪಗ್ರಹಗಳು ಮಾನವನ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ವಿಜ್ಞಾನಿಗಳು, ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶದ ಸಾಧನೆಗಳ ಶಾಂತಿಯುತ ಬಳಕೆ, ಯುವಜನರಲ್ಲಿ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಮೇಲೆ ಆಸಕ್ತಿ, ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಈ ಸಪ್ತಾಹ ಯಶಸ್ವಿಯಾಯಿತು. ಅ. 10ರವರೆಗೂ ರಾಜ್ಯದ ವಿವಿಧೆಡೆ ಈ ಕಾರ್ಯಕ್ರಮ ನಡೆಯಲಿದೆ.

ಉಪಗ್ರಹಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿರುವ ವಿಜ್ಞಾನಿ

ಬದುಕು ಸುಧಾರಣೆಗೆ ಬಾಹ್ಯಾಕಾಶ ಸಂಶೋಧನೆ

ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಇಸ್ರೊ ವಿಜ್ಞಾನಿ ಶಿವಾನಂದ್.ಎಂ.ಕಾಮತ್ ‘ಬಾಹ್ಯಾಕಾಶ ಸಂಶೋಧನೆಯು ನಮ್ಮ ಜೀವನವನ್ನು ಸುಧಾರಿಸಲು ಹಾಗೂ ಅವಕಾಶಗಳನ್ನು ಸೃಷ್ಟಿಸಲು ಸಹಾಯಕವಾಗುತ್ತವೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಯುವಕರ ಆಸಕ್ತಿಯನ್ನು ಉತ್ತೇಜಿಸಲು ವಿಶ್ವ ಬಾಹ್ಯಾಕಾಶ ಸಪ್ತಾಹ ಒಂದು ವೇದಿಕೆಯಾಗಿದೆ. ಯುವಪ್ರತಿಭೆಗಳನ್ನು ಬಾಹ್ಯಾಕಾಶ ಕ್ಷೇತ್ರಕ್ಕೆ ಆಕರ್ಷಿಸುವ ಒಂದು ಆಚರಣೆಯೂ ಆಗಿದೆ’ ಎಂದರು.

ವಿಜ್ಞಾನಿ ಸುಮಾ ಹಿರೇಮಠ್ ಅವರು ಇಸ್ರೋ ಸಾಧನೆಗಳ ಬಗ್ಗೆ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು. ಟಿ.ಎಸ್‌.ಗೋವಿಂದರಾಜು ಸುಮಾ ಲೊಂಕಡೆ ಸೇರಿ 18 ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಿತ್ರದುರ್ಗ ಸೈನ್ಸ್‌ ಫೌಂಡೇಷನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ ಪೃಥ್ವಿಶ್ ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.