ADVERTISEMENT

ಹಿರಿಯೂರು ಆದಿವಾಲ ಗ್ರಾಮದಲ್ಲಿ ಅಪೂರ್ಣಗೊಂಡ ಜಲಜೀವನ್ ಮಿಷನ್ ಕಾಮಗಾರಿ

ಸುವರ್ಣಾ ಬಸವರಾಜ್
Published 6 ಆಗಸ್ಟ್ 2025, 7:17 IST
Last Updated 6 ಆಗಸ್ಟ್ 2025, 7:17 IST
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ನಲ್ಲಿ ಅಳವಡಿಸಲು ರಸ್ತೆಯಲ್ಲಿ ಗುಂಡಿ ತೋಡಿರುವುದು
ಹಿರಿಯೂರು ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ನಲ್ಲಿ ಅಳವಡಿಸಲು ರಸ್ತೆಯಲ್ಲಿ ಗುಂಡಿ ತೋಡಿರುವುದು   

ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮದಲ್ಲಿ ಮನೆಮನೆಗೆ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯು ಅಪೂರ್ಣಗೊಂಡಿದೆ.

ಪ್ರತಿ ಮನೆಗೂ ನಲ್ಲಿಯ ಮೂಲಕ ನೀರು ಪೂರೈಸುವ ಉದ್ದೇಶಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಿಸಿದ್ದ ಸಿ.ಸಿ. ರಸ್ತೆಗಳನ್ನು ಅಗೆಯಲಾಗಿದೆ. ಕೆಲವು ಕಡೆ ದೊಡ್ಡ ಗುಂಡಿಗಳನ್ನು ತೋಡಿ ಹಾಗೆಯೇ ಬಿಡಲಾಗಿದೆ.

ಗ್ರಾಮದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಯ ರಸ್ತೆ, ಆಸ್ಪತ್ರೆ ರಸ್ತೆ, ತೇರು ಬೀದಿ, ಎಸ್‌ಬಿಐ ಶಾಖೆಗೆ ಹೋಗುವ ರಸ್ತೆಗಳು ಗುಂಡಿಮಯವಾಗಿವೆ ಎಂದು ಸಾಮಾಜಿಕ ಕಾರ್ಯಕರ್ತ ಚಮನ್ ಷರೀಫ್ ದೂರಿದರು.

ADVERTISEMENT

ತಾಲ್ಲೂಕಿನಲ್ಲಿಯೇ ಅತ್ಯಂತ ದೊಡ್ಡ ಗ್ರಾಮವಾದ ಆದಿವಾಲದಲ್ಲಿ ಅಂದಾಜು 4,400 ಜನಸಂಖ್ಯೆ ಇದೆ. ಜಲಜೀವನ್ ಮಿಷನ್ ಯೋಜನೆಗೆ 2022ರಲ್ಲಿ ಕಾರ್ಯಾದೇಶವಾಗಿತ್ತು. 1,314 ನಲ್ಲಿಗಳ ಸಂಪರ್ಕ ಕಲ್ಪಿಸುವ ಅಂದಾಜು ₹ 3.34 ಕೋಟಿ ವೆಚ್ಚದ ಕಾಮಗಾರಿಯು 2025ರ ಏಪ್ರಿಲ್‌ನಲ್ಲಿ ಆರಂಭಗೊಂಡಿತ್ತು.

ಗ್ರಾಮದಲ್ಲಿ ನಲ್ಲಿ ಅಳವಡಿಸಲು ಪೈಪ್‌ಲೈನ್ ಕಾರ್ಯಕ್ಕೆ ರಸ್ತೆಗಳ ಮಧ್ಯಭಾಗದಲ್ಲಿ ಬೇಕಾಬಿಟ್ಟಿ ಅಗೆಯಲಾಗಿದೆ. ರಸ್ತೆಯ ಕಾಂಕ್ರೀಟ್ ತುಂಡುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಣ್ಣು, ಕಾಂಕ್ರೀಟ್ ಚರಂಡಿಯಲ್ಲಿ ಬಿದ್ದಿದ್ದು, ಮಳೆಯ ನೀರು ಸರಾಗವಾಗಿ ಹರಿಯದಂತಾಗಿದೆ. ರಸ್ತೆ ಅಗೆಸಿರುವ ಗುತ್ತಿಗೆದಾರ ಒಂದು ತಿಂಗಳಿಂದ ಕಣ್ಣಿಗೆ ಬಿದ್ದಿಲ್ಲ.

ಜಲಜೀವನ್ ಮಿಷನ್ ಕಾಮಗಾರಿ ಅವ್ಯವಸ್ಥೆ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಕೇಳಿದರೆ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಂಜಿನಿಯರ್‌ರನ್ನು ಸಂಪರ್ಕಿಸುವಂತೆ ಹೇಳುತ್ತಾರೆ. ನಲ್ಲಿ ಅಳವಡಿಸುವಾಗಲೂ ತಾರತಮ್ಯ ಮಾಡಿದ್ದು, ಒಂದೇ ಬೀದಿಯಲ್ಲಿ ಕೆಲವರ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿದ್ದು, ಇನ್ನೂ ಕೆಲವು ಮನೆಗಳನ್ನು ಕೈಬಿಡಲಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ನೀರಿನ ಫಿಲ್ಟರ್ ಪಕ್ಕದಲ್ಲಿ ವಾಲ್ವ್ ಅಳವಡಿಸಲು ತೋಡಿರುವ ದೊಡ್ಡ ಗಾತ್ರದ ಗುಂಡಿಯನ್ನು ಮುಚ್ಚಿಲ್ಲ. ಇದರ ಪರಿಣಾಮ ಮಣ್ಣು ಜರುಗಿ ಅರ್ಧ ರಸ್ತೆಯನ್ನು ಗುಂಡಿ ಆವರಿಸಿದೆ. ಸರ್ಕಾರಿ ಆಸ್ಪತ್ರೆ, ತೇರು ಬೀದಿ ಸೇರಿದಂತೆ ಬಹುತೇಕ ಬೀದಿಗಳಲ್ಲಿ ಓಡಾಡಲು ಆಗದ ಪರಿಸ್ಥಿತಿ ಉಂಟಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಮಗಾರಿ ಪೂರ್ಣಗೊಳಿಸುವ ಭರವಸೆ  ‘ತಾಲ್ಲೂಕಿನಲ್ಲಿ 328 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ನಡೆಯುತ್ತಿದ್ದು ಶೇ. 80ರಷ್ಟು ಪೂರ್ಣಗೊಂಡಿದೆ. ಉಳಿದೆಡೆ ಮುಕ್ತಾಯದ ಹಂತದಲ್ಲಿದೆ. ಆದಿವಾಲ ಒಳಗೊಂಡು 30 ಗ್ರಾಮಗಳ ಕಾಮಗಾರಿಗೆ ಈಚೆಗೆ ಟೆಂಡರ್ ಕರೆದಿದ್ದು ಒಂದೆರಡು ದಿನದಲ್ಲಿ ಕೆಲಸ ಆರಂಭಿಸಲಾಗುತ್ತದೆ. ನಲ್ಲಿ ಅಳವಡಿಸಿದ ನಂತರ ಮತ್ತೆ ಸಿ.ಸಿ. ರಸ್ತೆ ನಿರ್ಮಿಸಿಕೊಡುತ್ತೇವೆ’ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಸನ್ ಭಾಷಾ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.