ADVERTISEMENT

ಮೊಳಕಾಲ್ಮುರು: ಚಿಕ್ಕೇರಹಳ್ಳಿಯಲ್ಲಿ ಜಾನಪದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:36 IST
Last Updated 26 ಜನವರಿ 2023, 5:36 IST
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೇರಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಕಲಾವಿದರು ಜನಪದ ಗೀತೆಗಳನ್ನು ಹಾಡಿದರು.
ಮೊಳಕಾಲ್ಮುರು ತಾಲ್ಲೂಕಿನ ಚಿಕ್ಕೇರಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಸಂಭ್ರಮದಲ್ಲಿ ಕಲಾವಿದರು ಜನಪದ ಗೀತೆಗಳನ್ನು ಹಾಡಿದರು.   

ಮೊಳಕಾಲ್ಮುರು: ‘ಗ್ರಾಮೀಣ ಜನರ ಜೀವನದಲ್ಲಿ ನೂರಾರು ವರ್ಷಗಳಿಂದ ಹಾಸುಹೊಕ್ಕಾಗಿರುವ ಜಾನಪದ ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ’ ಎಂದು ಕಲಾವಿದರ ಮಾಸಾಶನ ಸಮಿತಿ ಸದಸ್ಯ ಡಿ.ಒ.ಮೊರಾರ್ಜಿ ಹೇಳಿದರು.

ತಾಲ್ಲೂಕಿನ ಚಿಕ್ಕೇರಹಳ್ಳಿಯಲ್ಲಿ ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿಕ್ಕೋಬನಹಳ್ಳಿಯ ಮಾಯವತಿ ಮಹಿಳಾ ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ‘ಜಾನಪದ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ದೇಶದ ಸಂಸ್ಕೃತಿಗೆ ಜಾನಪದ ಕಲೆಯು ಬುನಾದಿಯಾಗಿದೆ. ಇದು ಶ್ರಮಿಜೀವಿಗಳ ಕಲೆಯಾಗಿದ್ದು, ಕೆಲಸ ಮಾಡುವಾಗಿನ ಶ್ರಮವನ್ನು ಮರೆಸುವ ಶಕ್ತಿಯನ್ನು ಹೊಂದಿದೆ. ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಕಾರ್ಮಿಕರು ಜಾನಪದ ಗೀತೆಗಳನ್ನು ಹಾಡುತ್ತ ಕಾಯಕ ಮಾಡುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ’ ಎಂದರು.

ADVERTISEMENT

ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ನಾಗಸಮುದ್ರ ಮರಿಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಮಾರಣ್ಣ, ಚಿಕ್ಕನಹಳ್ಳಿ ಅಂಜಿನಪ್ಪ, ಮುಖಂಡ ಭಟ್ರಹಳ್ಳಿ ಧನಂಜಯ, ಚಂದ್ರಣ್ಣ ಹಾಜರಿದ್ದರು. ಸೋಬಾನೆ, ಭಜನೆ, ತತ್ವ ಪದ, ಚೌಡಿಕೆ ಮೇಳ, ತಮಟೆ, ಜನಪದ ನೃತ್ಯ ಕಲಾವಿದರು ಕಲಾ ಪ್ರದರ್ಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.