ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕಿನ ಪ್ರಸಿದ್ದ ಐತಿಹಾಸಿಕ ಪುಣ್ಯ ಕ್ಷೇತ್ರಗಳಲ್ಲೊಂದಾದ ಚಿಕ್ಕಜಾಜೂರು ಸಮೀಪದ ಕಡೂರು ವೀರಭದ್ರಸ್ವಾಮಿಯ ರಥೋತ್ಸವ ಏ. 2ರಂದು ನಡೆಯಲಿದೆ.
ಶುಕ್ರವಾರ ಸಂಜೆ ಸ್ವಾಮಿಗೆ ಮದುವಣಿಗ ಶಾಸ್ತ್ರ ನಡೆಯಿತು. ಪಲ್ಲಕ್ಕಿಯಲ್ಲಿ ಕೂರಿಸಿ, ನಂದಿ ಕೋಲು ಕುಣಿತ ಹಾಗೂ ವೀರಗಾಸೆ ನೃತ್ಯದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ನಂತರ, ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಕರೆತರಲಾಯಿತು. ರಾತ್ರಿ ಸ್ವಾಮಿಗೆ ಬಿ. ದುರ್ಗದ ನಾಡಿಗರ ವಂಶಸ್ಥರಿಂದ ಮದುವಣಿಗ ಶಾಸ್ತ್ರ ನಡೆಸಿ, ಅಧಿಕೃತವಾಗಿ ಜಾತ್ರೆಗೆ ಚಾಲನೆ ನೀಡಲಾಯಿತು. ನಂತರ, ಸ್ವಾಮಿಯ ಉತ್ಸವ ಮೂರ್ತಿಯನ್ನು ನಂದಿ ಮಾದರಿಯ ಮೇಲೆ ಕೂರಿಸಿ, ಮೆರವಣಿಗೆ ನಡೆಸಲಾಯಿತು.
ಮಾ.30ರಂದು ಸಾಸಲು ಕೆ.ವಿ. ಹಾಲೇಶಪ್ಪ ವಂಶಸ್ಥರು ಹಾಗೂ ಕಡೂರು ಗುಂಡಾ ಭಕ್ತರಿಂದ ಅಶ್ವೋತ್ಸವ ನಡೆಸಲಾಗುವುದು. ಮಾ.31ರಂದು ಗ್ರಾಮದ ಮಠದ ವಂಶಸ್ಥರು ಹಾಗೂ ದೇವಸ್ಥಾನದ ಅರ್ಚಕ ವಂಶಸ್ಥರಿಂದ ಧಾರ್ಮಿಕ ಮಂಗಳ ಕಾರ್ಯಕ್ರಮ, ಏ. 1ರ ಬೆಳಿಗ್ಗೆ ಕೆಂಡಾರ್ಚನೆ, ಜವಳ, ಗುಗ್ಗಳ ಪೂಜೆ ಹಾಗೂ ಆನೆ ಉತ್ಸವ (ಉಚ್ಚಾಯ) ನಡೆಯಲಿದೆ. ರಾತ್ರಿ ಸ್ವಾಮಿಯ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.
ಏ.2ರಂದು ರಥೋತ್ಸವ: ಮಂಗಳವಾರ ಸಂಜೆ 5 ಗಂಟೆಗೆ ಸ್ವಾಮಿಯ ರಥೋತ್ಸವ ನಡೆಯಲಿದೆ. ಏ. 3 ರಂದು ಓಕಳಿಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಏ. 1 ಮತ್ತು ಏ.2 ರಂದು ರಥೋತ್ಸವದ ಅಂಗವಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.