ADVERTISEMENT

ಜೆಡಿಎಸ್‌ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 17:03 IST
Last Updated 16 ಸೆಪ್ಟೆಂಬರ್ 2021, 17:03 IST
ಚಿತ್ರದುರ್ಗದ ನೀಲಕಂಠೇಶ್ವರ ದೇಗುಲ ಸಮೀಪದ ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿದರು.
ಚಿತ್ರದುರ್ಗದ ನೀಲಕಂಠೇಶ್ವರ ದೇಗುಲ ಸಮೀಪದ ಜೆಡಿಎಸ್‌ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಜ್ಯ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿದರು.   

ಚಿತ್ರದುರ್ಗ: ಮುಂಬರುವ ಚುನಾವಣೆ ಎದುರಿಸಲು ಪಕ್ಷದ ಬಲವರ್ದನೆಗೆ ಒಲವು ತೋರಿದ ಜೆಡಿಎಸ್‌, ಸದಸ್ಯತ್ವ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿತು.

ಇಲ್ಲಿನ ನೀಲಕಂಠೇಶ್ವರ ದೇಗುಲ ಸಮೀಪದ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಯಶೋಧರ ಅಭಿಯಾನಕ್ಕೆ ಚಾಲನೆ ನೀಡಿದರು. ಮುಂದಿನ ಹತ್ತು ತಿಂಗಳು ಸದಸ್ಯತ್ವ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಪ್ರತಿ ತಾಲ್ಲೂಕಿನಿಂದ ಕನಿಷ್ಠ ಐದು ಸಾವಿರ ಹೊಸ ಸದಸ್ಯರನ್ನು ನೋಂದಣಿ ಮಾಡಲು ಸೂಚಿಸಲಾಯಿತು.

‘ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ. ಪಕ್ಷದ ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷಕ್ಕೆ ಕೆಲಸ ಮಾಡಬೇಕು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಪಕ್ಷ ಸಂಘಟನೆ ಇದರಿಂದ ಹೊಸ ರೂಪ ಪಡೆಯಲಿದೆ’ ಎಂದು ಡಿ.ಯಶೋಧರ ಹೇಳಿದರು.

ADVERTISEMENT

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಿ.ಕಾಂತರಾಜ್, ‘ತಾಲ್ಲೂಕು ಹಂತದ ಸಮಸ್ಯೆಗಳಿಗೆ ತಾಲ್ಲೂಕು ಘಟಕದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಜಿಲ್ಲಾ ಮಟ್ಟದ ಸಭೆಯಲ್ಲಿ ಇಂತಹ ಸಮಸ್ಯೆಗಳನ್ನು ದೊಡ್ಡದು ಮಾಡುವುದು ಬೇಡ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಮಾತ್ರ ಚರ್ಚೆ ನಡೆಯಬೇಕು. ಭಿನ್ನಾಭಿಪ್ರಾಯ ಇದ್ದಷ್ಟು ಪಕ್ಷ ಸಬಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪಕ್ಷದಿಂದ ಹೊರ ಹೋದವರು ಇಚ್ಛಿಸಿದರೆ ಪಕ್ಷಕ್ಕೆ ಸ್ವಾಗತ ಮಾಡಿಕೊಳ್ಳೋಣ. ಪಕ್ಷ ಬಲವರ್ದನೆ ಆದಾಗ ಮಾತ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬಹುದು. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಮಾಡುವವರಿಗೆ ಮಾನ್ಯತೆ ನೀಡುವ ಬದಲು ಪಕ್ಷದಲ್ಲಿರುವ ನಿಷ್ಠಾವಂತರನ್ನು ಪರಿಗಣಿಸುವುದು ಸೂಕ್ತ’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಗದ್ದಲ

ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷರ ನೇಮಕ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಗದ್ದಲ ಉಂಟಾಯಿತು.

ಸದಸ್ಯತ್ವ ಅಭಿಯಾನಕ್ಕೆ ಅಗತ್ಯವಿರುವ ಅರ್ಜಿ ಪುಸ್ತಕ ವಿತರಣೆ ಮಾಡುವಾಗಲೇ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಹಿರಿಯೂರು ತಾಲ್ಲೂಕು ಘಟಕಕ್ಕೆ ಹಸ್ತಾಂತರ ಮಾಡದಂತೆ ಒತ್ತಡ ಹೇರಿದರು. ಈ ವಿಧಾನಸಭಾ ಕ್ಷೇತ್ರದಿಂದ ಬಂದಿದ್ದ ಕಾರ್ಯಕರ್ತರು ಸಭೆಯಲ್ಲಿ ಅಸಮಾಧಾನ ಹೊರಹಾಕಿದರು.

ಜೆಡಿಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಪ್ರತಾಪ್‌ ಜೋಗಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಗಣೇಶ್‍ಕುಮಾರ್, ಪರಮೇಶ್ವರಪ್ಪ, ಸಣ್ಣತಿಮ್ಮಪ್ಪ. ಎನ್.ಹನುಮಂತರಾಯಪ್ಪ, ಪಿ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ಮುಖಂಡರಾದ ರವೀಶ್, ಕುಮಾರಸ್ವಾಮಿ, ಶ್ರೀನಿವಾಸ್ ಗದ್ದಿಗೆ, ಲಲಿತ ಕೃಷ್ಣಮೂರ್ತಿ, ಗುರುಸಿದ್ದಪ್ಪ, ಗೀತ, ಎಚ್.ವೀರಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.