ADVERTISEMENT

ಸೃಜನಶೀಲ ಬರವಣಿಗೆಗೆ ಸಾಹಿತ್ಯ ಓದು ಅವಶ್ಯ: ದಿನೇಶ್‌ ಅಮಿನ್‌ ಮಟ್ಟು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:56 IST
Last Updated 23 ಆಗಸ್ಟ್ 2025, 7:56 IST
ಪತ್ರಿಕಾ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರವನ್ನು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಉದ್ಘಾಟಿಸಿದರು
ಪತ್ರಿಕಾ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರವನ್ನು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಉದ್ಘಾಟಿಸಿದರು   

ಚಿತ್ರದುರ್ಗ: ‘ಸಾಹಿತ್ಯ ಓದಿನಿಂದ ಪತ್ರಕರ್ತರ ಪದ ಸಂಪತ್ತು ವಿಸ್ತಾರಗೊಳ್ಳುತ್ತದೆ. ಇದು ಬರವಣಿಗೆಯಲ್ಲಿ ಅಭಿವ್ಯಕ್ತಗೊಂಡು ಲೇಖನದ ತೂಕ ಹೆಚ್ಚುತ್ತದೆ. ಸೃಜನಶೀಲ ಬರವಣಿಗೆಗಾಗಿ ಯುವ ಪತ್ರಕರ್ತರು ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ತಿಳಿಸಿದರು. 

ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಆಯೋಜಿಸಿದ್ದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. 

‘ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಮೂರ್ನಾಲ್ಕು ದಶಕದಲ್ಲಿ ಪತ್ರಕರ್ತರ ವೃತ್ತಿಯ ಸ್ವರೂಪ ತೀವ್ರಗತಿಯಲ್ಲಿ ಬದಲಾಗಿದೆ. ಇಂತಹ ಬದಲಾವಣೆಯನ್ನು ಸಾಹಿತ್ಯ ಕ್ಷೇತ್ರದಲ್ಲೂ ಕಾಣಬಹುದು. ಕೃತಕ ಬುದ್ಧಿಮತ್ತೆ ತಂತ್ರಾಂಶಗಳು ಸೃಜನಶೀಲ ಕ್ಷೇತ್ರವನ್ನು ಪ್ರವೇಶಿಸಿವೆ. ಭಾಷಾಂತರ ತಂತ್ರಾಂಶ ಬಳಕೆಯಿಂದ ಮಾಧ್ಯಮ ಕ್ಷೇತ್ರಕ್ಕೆ ಸಹಕಾರಿಯಾಗಿದೆ. ಇದರ ನಡುವೆಯೂ ಪತ್ರಕರ್ತ ಸೃಜನಶೀಲ ಬರವಣಿಗೆ ಕಲೆಯನ್ನು ರೂಢಿಸಿಕೊಳ್ಳುವುದು ಅಗತ್ಯವಾಗಿದೆ’ ಎಂದು ತಿಳಿಸಿದರು. 

ADVERTISEMENT

‘ಸರಳ ಭಾಷೆಯಲ್ಲಿ ವರದಿಯನ್ನು ಬರೆಯುವ ಮೂಲಕ ಓದುಗರನ್ನು ತಲುಪಬೇಕು. ಸರಳವಾಗಿ ಬರೆಯುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಾಕಷ್ಟು ಅಧ್ಯಯನದ ಅಗತ್ಯವಿದೆ. ಯುವ ಪತ್ರಕರ್ತರು ರಾಜಕೀಯ, ಸಾಹಿತ್ಯ, ವಿಜ್ಞಾನ, ವೈದ್ಯಕೀಯ, ಸಾಮಾಜಿಕ ವಿಚಾರಗಳನ್ನು ಓದಿ ತಿಳಿದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. 

‘ಸಾಹಿತ್ಯ ಹಾಗೂ ಇತಿಹಾಸ ಅಧ್ಯಯನ ಪತ್ರಕರ್ತರಿಗೆ ಬಹಳ ಮುಖ್ಯವಾಗಿದೆ. ದೇಶ, ನಾಡು, ಸಂಸ್ಕೃತಿ ಹಾಗೂ ಭಾಷೆ ಅರಿಯದಿದ್ದಾಗ ಬರವಣಿಗೆ ಕಷ್ಟ ಸಾಧ್ಯ. ಪ್ರಸ್ತುತ ಮೊಬೈಲ್‌, ಇಂಟರ್‌ನೆಟ್‌, ಸಾಮಾಜಿಕ ಮಾಧ್ಯಮಗಳ ಜಾಲತಾಣಗಳಿಂದಾಗಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು. 

‘ಪತ್ರಿಕೋದ್ಯಮಕ್ಕೂ ಸಾಹಿತ್ಯಕ್ಕೂ ಬಹಳ ನಂಟಿದೆ. ಬೇರೆ ಬೇರೆ ಸಂಸ್ಕೃತಿ ಇರುವ ನಮ್ಮ ನಾಡಿನಲ್ಲಿ ಪತ್ರಕರ್ತರು ಓದುವ ಮೂಲಕ ಅರಿವು, ಜ್ಞಾನವನ್ನು ಪಡೆಯಬಹುದಾಗಿದೆ. ಪತ್ರಕರ್ತರು ಚಲನಶೀಲತೆ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಬರಹ ಮೂಡಿಬರಲಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

‘ಬರಹಗಳಲ್ಲಿ ಸತ್ವ ಪಡೆಯಬೇಕಾದರೆ ಲೋಕಾನುಭವ, ಓದು ಬಹಳ ಮುಖ್ಯವಾಗಲಿದೆ. ಅಕ್ಷರ ರೂಪಕ್ಕೆ ಸ್ಪರ್ಶ ನೀಡಬೇಕಾದರೆ ಓದಿನ ಜತೆಗೆ ಸೃಜನಶೀಲತೆ ಮುಖ್ಯ. ಯುವ ಪತ್ರಕರ್ತರಿಗೆ ಸಾಹಿತ್ಯಾಭಿರುಚಿ ಶಿಬಿರ ಆಯೋಜಿಸುವುದು ಉತ್ತಮ ಬೆಳವಣಿಗೆ. ಓದುಗರನ್ನು ಸೆಳೆಯುವಂತಹ ಉತ್ತಮ ಬರಹವನ್ನು ರೂಢಿಸಿಕೊಳ್ಳಬೇಕು. ಅಂತಹ ಗಟ್ಟಿ ಬರಹವನ್ನು ರೂಢಿಸಿಕೊಳ್ಳಲು ಪತ್ರಕರ್ತರಿಗೆ ಇಂತಹ ಶಿಬಿರಗಳು ಬಹಳ ಪ್ರಯೋಜನವಾಗಲಿವೆ’ ಎಂದು ಹೇಳಿದರು. 

‘ಪತ್ರಕರ್ತರಲ್ಲಿ ಕನ್ನಡ ಸಾಹಿತ್ಯ ಅಭಿರುಚಿಯನ್ನು ಸೃಷ್ಟಿಸುವ ಸಣ್ಣ ಜವಾಬ್ದಾರಿ ಕೆಲಸವನ್ನು ಸಾಹಿತ್ಯ ಅಕಾಡೆಮಿ ಮಾಡುತ್ತಿದೆ. ಮನಃ ಪರಿವರ್ತನೆ ಮೌಲ್ಯಗಳಿರುವ ಕನ್ನಡ ಸಾಹಿತ್ಯವನ್ನು ಕಾರಾಗೃಹದಲ್ಲಿನ ಕೈದಿಗಳಿಗೆ ತಿಳಿಸಲು ಶಿಬಿರಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ವಿವಿಧ ವಲಯಗಳ ಜನರಿಗೂ ಕನ್ನಡ ಸಾಹಿತ್ಯ ಪರಿಚಯಿಸಲು ಯೋಜನೆ ರೂಪಿಸಲಾಗಿದೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್‌ ತಿಳಿಸಿದರು. 

‘ಸಾರ್ವಜನಿಕರ ತಿಳುವಳಿಕೆಯನ್ನು ಹೆಚ್ಚಿಸಿ, ಪ್ರಜ್ಞಾವಂತರನ್ನಾಗಿಸುವ ಕೆಲಸವನ್ನು ಮಾಧ್ಯಮಗಳು ಮಾಡಬೇಕಿದೆ. ಯುವ ಪತ್ರಕರ್ತರಿಗೆ ಹಳೆಗನ್ನಡ, ವಚನ ಸಾಹಿತ್ಯ, ಕೀರ್ತನೆ, ತತ್ವಪದ, ಸಾಂಗತ್ಯ, ಸಾಹಿತ್ಯ ಚರಿತ್ರೆ, ನವೋದಯ, ನವ್ಯ, ಬಂಡಾಯ ಪ್ರಗತಿಶೀಲ, ಮಹಿಳಾ ವಿಮೋಚನೆ ಸೇರಿದಂತೆ ಕನ್ನಡ ಸಾಹಿತ್ಯದ ವಿವಿಧ ಮಜಲುಗಳನ್ನು ಪರಿಚಯಿಸುವ ಕಾರ್ಯ ಶಿಬಿರದಲ್ಲಿ ಮಾಡಲಾಗುವುದು’ ಎಂದು ಹೇಳಿದರು. 

ಸಾಹಿತ್ಯ ಅಕಾಡೆಮಿ ರಿಜಿಸ್ಟರ್‌ ಎನ್‌.ಕರಿಯಪ್ಪ, ಶಿಬಿರದ ನಿರ್ದೇಶಕ ಪ್ರೊ.ಎಂ.ಅಬ್ದುಲ್‌ ರೆಹಮಾನ್‌ ಪಾಷ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್ ಗೌಡಗೆರೆ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್‌.ಅಹೋಬಳಪತಿ, ಸಾಹಿತ್ಯ ಅಕಾಡೆಮಿ ಸಂಚಾಲಕಿ ಪಿ.ಚಂದ್ರಿಕಾ, ಶಿಬಿರದ ಸಹ ನಿರ್ದೇಶಕರಾದ ನಾಕೀಕೆರೆ ತಿಪ್ಪೇಸ್ವಾಮಿ, ಮಮತಾ ಅರಸೀಕೆರೆ ಇದ್ದರು.

ಎಡಿಟಿಂಗ್‌ ಡಿಸೈನಿಂಗ್‌ ತರಬೇತಿ ಬೇಕು

‘ಇಂದಿನ ಎಲೆಕ್ಟ್ರಾನಿಕ್‌ ಹಾಗೂ ಮುದ್ರಣ ಮಾಧ್ಯಮದಲ್ಲೂ ಬದಲಾವಣೆ ಬಂದಿದೆ. ಕೇವಲ 250 ಪದಗಳ ಮಿತಿಯಲ್ಲಿ ವರದಿಯನ್ನು ಕಟ್ಟಿಕೊಡುವ ಪರಿಸ್ಥಿತಿಯಿದೆ. ವಿಶ್ಲೇಷಣಾತ್ಮ ವರದಿಗಳು ಕಡಿಮೆಯಾಗಿವೆ. ವಿಡಿಯೋ ಎಡಿಟಿಂಗ್‌ ಪೋಸ್ಟರ್‌ ಡಿಸೈನಿಂಗ್‌ಗೆ ಹೆಚ್ಚಿನ ಬೇಡಿಕೆ ಇದ್ದು ಇವುಗಳ ತರಬೇತಿಯನ್ನು ಸಹ ಪತ್ರಿಕೋದ್ಯಮ ತರಗತಿಯಲ್ಲಿ ನೀಡಬೇಕು’ ಎಂದು ದಿನೇಶ್‌ ಅಮಿನ್‌ ಮಟ್ಟು ಹೇಳಿದರು. ‘ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳಲ್ಲಿ ಪ್ರಸ್ತುತ ಮಾಧ್ಯಮ ಕ್ಷೇತ್ರದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸಬೇಕು. ಕನ್ನಡ ಸಾಹಿತ್ಯವನ್ನು ಒಂದು ವಿಷಯವಾಗಿ ಬೋಧಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.