ಹಿರಿಯೂರು: ಸರ್ಕಾರದ ಆದೇಶದಂತೆ ನಗರದ ಅಂಗಡಿಗಳ ಮಾಲೀಕರು ನಾಮಫಲಕ ಮತ್ತು ಜಾಹೀರಾತು ಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬರೆಸದೇ ಇದ್ದರೆ ಮಾರ್ಚ್ 2ರಂದು ನಾಮಫಲಕಗಳಿಗೆ ಮಸಿ ಬಳಿಯುವ ಅಥವಾ ಕಿತ್ತು ಹಾಕುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಆದೇಶವನ್ನು ಅಂಗಡಿಗಳ ಮಾಲೀಕರು ಹಾಗೂ ಜಾಹೀರಾತುದಾರರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಕನ್ನಡದಲ್ಲಿ ನಾಮಫಲಕ ಬರೆಯಿಸುವಂತೆ ಒತ್ತಾಯಿಸಿ ಎರಡು ತಿಂಗಳ ಹಿಂದೆಯೇ ನಗರಸಭೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೆವು. ಹಿರಿಯೂರು ನಗರಸಭೆ ವತಿಯಿಂದ ನಾಮಫಲಕಗಳನ್ನು ಬದಲಾಯಿಸಲು ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಹೀಗಾಗಿ ಗುರುವಾರ ಮತ್ತೊಮ್ಮೆ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಪೌರಾಯುಕ್ತರು, ಅಂಗಡಿ ಮಾಲೀಕರು ಹಾಗೂ ಜಾಹೀರಾತುದಾರರಿಗೆ ಸರ್ಕಾರದ ಆದೇಶ ಪಾಲಿಸುವಂತೆ ತಾಕೀತು ಮಾಡಬೇಕು. ವೇದಿಕೆ ವತಿಯಿಂದ ಎಲ್ಲಾ ಅಂಗಡಿಗಳ ಮಾಲೀಕರಿಗೆ ಕರಪತ್ರಗಳನ್ನು ಹಂಚಲಾಗಿದೆ ಎಂದು ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ,ಮೊಹಮ್ಮದ್ ಜಾಕಿರ್, ಡಿ.ಕೆ.ಎಸ್.ದಾದಾಪೀರ್, ಗಿರೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.