ಚಿತ್ರದುರ್ಗ: ‘ನಗರದಲ್ಲಿ ಬರೋಬ್ಬರಿ 6 ವರ್ಷಗಳ ನಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮಹೂರ್ತ ಕೂಡಿ ಬಂದಿದೆ. ಫೆ. 17 ಮತ್ತು 18ರಂದು ಸ್ಟೇಡಿಯಂ ರಸ್ತೆಯ ಜಿಜಿ ಸಮುದಾಯ ಭವನದಲ್ಲಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ’ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸಮ್ಮೇಳನದ ಪೂರ್ವ ಸಿದ್ಧತೆ ಮತ್ತು ಸಲಹಾ ಸಭೆಯಲ್ಲಿ ಅವರು ಮಾತನಾಡಿದರು.
‘ಇಲ್ಲಿಯವರೆಗೂ 17 ಜಿಲ್ಲಾ ಸಮ್ಮೇಳನಗಳು ನಡೆದಿದ್ದು, ಪ್ರಸ್ತುತ 18ನೇ ಸಮ್ಮೇಳನ ಇದಾಗಿದೆ. ಈ ಬಾರಿ ತುಂಬಾ ವಿಶೇಷ ಹಾಗೂ ಅರ್ಥಗರ್ಭಿತವಾಗಿ ಸಮ್ಮೇಳನವನ್ನು ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಎಲ್ಲಾ ಕನ್ನಡಪರ ಮನಸ್ಸುಗಳು, ಸಹೃದಯರು, ಚಿಂತಕರು, ಸಾಹಿತಿಗಳು, ಲೇಖಕರು, ಬರಹಗಾರರು, ರೈತರು, ಮಹಿಳೆಯರು, ಮಕ್ಕಳು ಎಲ್ಲರೂ ಸಮ್ಮೇಳನದಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ಸುಗೊಳಿಸಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಲ್.ಪ್ರಶಾಂತ್ ಮಾತನಾಡಿ, ‘ಜಿಲ್ಲಾ ಕನ್ನಡಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ಸಕಲಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ಸಾಹಿತ್ಯ ಪರಿಷತ್ತಿನಿಂದಾಗಲೀ ಅಥವಾ ಸರ್ಕಾರದಿಂದಾಗಲೀ ಯಾವುದೇ ಅನುದಾನ ಇಲ್ಲ. ಬದಲಾಗಿ ಜಿಲ್ಲೆಯ ಎಲ್ಲ ಕನ್ನಡ ಮನಸ್ಸುಗಳು ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.
‘ಸಮ್ಮೇಳನದಲ್ಲಿ ಎಲ್ಲಿಯೂ ಯಾವುದೇ ಲೋಪದೋಷಗಳು ಬರದಂತೆ ಪ್ರತಿಯೊಂದು ವಿಷಯದಲ್ಲೂ ಜಾಗೃತೆ ವಹಿಸಲಾಗಿದೆ. ಸಮ್ಮೇಳನದಲ್ಲಿ ಮೆರವಣಿಗೆ, ಕಲಾತಂಡಗಳು, ಊಟದ ವ್ಯವಸ್ಥೆ, ಗೋಷ್ಠಿಗಳು, ಸಮ್ಮೇಳನದ ಪ್ರಚಾರ ಹೀಗೆ ಎಲ್ಲ ವಿಷಯದಲ್ಲೂ ಕ್ರಮಬದ್ಧತೆಯನ್ನು ಕಾಯ್ದುಕೊಳ್ಳಲಾಗಿದೆ. ಎಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ’ ಎಂದರು.
‘ಜಿಲ್ಲೆಯ ಎಲ್ಲ ಬರಹಗಾರರು, ಲೇಖಕರು, ಸಾಹಿತಿಗಳು, ಕವಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಸಾಹಿತ್ಯಕ ವಾತಾವರಣವನ್ನು ನಿರ್ಮಿಸಬೇಕು. ಹಾಗೇ ಅಜ್ಞಾತವಾಗಿರುವ ಸಾಧಕರ ಮೇಲೆ ಬೆಳಕು ಚೆಲ್ಲಿ ಅವರನ್ನು ಸ್ಮರಿಸುವ ಕೆಲಸವಾಗಬೇಕು. ಜಿಲ್ಲೆಯ ಐತಿಹಾಸಿಕ ಮಹತ್ವ ಸಾಹಿತ್ಯ ಸಮ್ಮೇಳನದಲ್ಲಿ ಹೊರಹೊಮ್ಮಬೇಕು’ ಎಂದು ಮುಖಂಡರಾದ ಗೋಪಾಲಸ್ವಾಮಿನಾಯಕ ಸಲಹೆ ನೀಡಿದರು.
ಜಿಲ್ಲಾ ನೌಕರರ ಸಂಘದ ಪದಾಧಿಕಾರಿ ಲೋಲಾಕ್ಷಮ್ಮ ‘ಸಮ್ಮೇಳನದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಸಮ್ಮೇಳನದಲ್ಲಿ ಬಳಸಿಕೊಳ್ಳಬೇಕು. ಹಾಗೆಯೇ ಪ್ರತಿನಿಧಿ ಶುಲ್ಕವನ್ನು ಹೊರೆಯಾಗದಂತೆ ನಿರ್ಧರಿಸಬೇಕು. ಜಿಲ್ಲಾ ನೌಕರರ ಸಂಘದಿಂದ ಅಗತ್ಯ ಸಹಕಾರ ನೀಡಲಾಗುವುದು’ ಎಂದರು.
ಕನ್ನಡ ರಕ್ಷಣಾ ವೇಧಿಕೆಯ ಟಿ.ರಮೇಶ್, ಕರುನಾಡು ವಿಜಯ ಸೇನೆಯ ಕೆ.ಟಿ.ಶಿವಕುಮಾರ್, ನೃತ್ಯಗಾರ ಹರೀಶ್, ನವೀನ್‌ಮಸ್ಕಲ್, ಮಾಲತೇಶ್ ಅರಸ್ ಮಾತನಾಡಿದರು. ಸಭೆಯಲ್ಲಿ ಶಿಕ್ಷಕ ರಂಗಾನಾಯ್ಕ, ಬಸವರಾಜ್, ವಿಶ್ವನಾಥ್, ಸೌಮ್ಯಾ, ಸಿ.ಎಂ.ಚಂದ್ರಶೇಖರ್, ಎಂ.ಕೆ.ಹರೀಶ್, ಆರ್.ಮಹಾಂತೇಶ್, ರಜನಿಲೇಪಾಕ್ಷ, ರಾಘವೇಂದ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.