ADVERTISEMENT

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತರಾಸು ಕೊಡುಗೆ ಅನನ್ಯ

ತರಾಸು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ಶಿವಸ್ವಾಮಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 5:24 IST
Last Updated 22 ಏಪ್ರಿಲ್ 2022, 5:24 IST
ತಳಕು ಗ್ರಾಮದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ತ.ರಾ.ಸು ಜನ್ಮದಿನೋತ್ಸವವು ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಗ್ರಂಥಾಲಯದಲ್ಲಿ ನಡೆಯಿತು.
ತಳಕು ಗ್ರಾಮದಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ತ.ರಾ.ಸು ಜನ್ಮದಿನೋತ್ಸವವು ಟಿ.ಎಸ್. ವೆಂಕಣ್ಣಯ್ಯ ಸ್ಮಾರಕ ಗ್ರಂಥಾಲಯದಲ್ಲಿ ನಡೆಯಿತು.   

ನಾಯಕನಹಟ್ಟಿ: ‘ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ ಅವರ ಕೊಡುಗೆ ಅನನ್ಯ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಹೇಳಿದರು.

ತಳುಕು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಳಕು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗುರುವಾರ ನಡೆದ ತರಾಸು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾದಂಬರಿ ಲೋಕದಲ್ಲಿ ಅನಭಿಷಕ್ತ ದೊರೆಯಾಗಿದ್ದ ಅ.ನ. ಕೃಷ್ಣರಾಯರ ನಂತರ ಕಾದಂಬರಿ ಕ್ಷೇತ್ರದಲ್ಲಿ ಅವರ ಶಿಷ್ಯರಾಗಿದ್ದ ತ.ರಾ. ಸುಬ್ಬರಾವ್ ಅವರು ಗುರುಗಳ ಸ್ಥಾನವನ್ನು ತುಂಬುತ್ತ ಬಂದರು. ಅವರು ಐತಿಹಾಸಿಕ ಕಾದಂಬರಿಗಳು ಚಿತ್ರದುರ್ಗವನ್ನು ಜಗತ್ತಿಗೆ ಪರಿಚಯಿಸಿದವು. ನಾಗರಹಾವು, ದುರ್ಗಾಸ್ತಮಾನ ದುರ್ಗದ ಗರಿಮೆಯನ್ನು ಎತ್ತಿತೋರಿಸಿದಂತಹ ಮಹತ್ವದ ಕೃತಿಗಳು. ಬೆಂಕಿಯ ಬಲೆ, ಗಾಳಿಮಾತು, ಚಂದನದಗೊಂಬೆ, ಚಂದವಳ್ಳಿಯ ತೋಟ, ಹಂಸಗೀತೆ, ಮಸಣದ ಹೂ ಇವರ ಕಾದಂಬರಿಯಾಧಾರಿತ ಚಲನಚಿತ್ರಗಳು. 1956 ರಲ್ಲಿ ಇವರ ಹಂಸಗೀತೆ ಕಾದಂಬರಿ ಆಧಾರಿಸಿ ಹಿಂದಿಯಲ್ಲಿ ‘ಬಸಂತ್‌ ಬಹಾರ್’ ಚಲನಚಿತ್ರ ಬಿಡುಗಡೆಯಾಯಿತು ಎಂದರೆ ಅವರ ಬರವಣಿಗೆ ಎಷ್ಟರಮಟ್ಟಿಗೆ ಸತ್ವಯುತವಾಗಿತ್ತು ಎಂಬುದನ್ನು ಗಮನಿಸಬಹುದು’
ಎಂದರು.

ADVERTISEMENT

‘ತ.ರಾ.ಸು ಅವರ ಜನ್ಮದಿನವನ್ನು ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡುವುದಕ್ಕಿಂತ ಅವರ ಸ್ವಗ್ರಾಮ ತಳುಕಿನಲ್ಲಿ ಆಚರಿಸುವುದು ಹೆಚ್ಚು ಮಹತ್ವಪೂರ್ಣ ಎಂದು ಇಲ್ಲಿ ಸರಳವಾಗಿ ಆಚರಣೆ ಮಾಡಲಾಗಿದೆ. ಈ ಗ್ರಾಮದ ಜನರ ಬಹುದಿನಗಳ ಬೇಡಿಕೆಯಂತೆ ತಳುಕಿನ ಬಸ್‌ನಿಲ್ದಾಣದ ಬಳಿ ಕುವೆಂಪು ಅವರ ಗುರುಗಳಾಗಿದ್ದ ಟಿ.ಎಸ್. ವೆಂಕಣ್ಣಯ್ಯ, ಜಿ.ಎಸ್. ಶಿವರುದ್ರಪ್ಪ ಅವರ ಗುರುಗಳಾಗಿದ್ದ ತ.ಸು.ಶಾಮರಾಯರು ಮತ್ತು ತ.ರಾ.ಸು ಅವರ ಪ್ರತಿಮೆಗಳು ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ‘ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕಾರ್ಯಕ್ರಮವೊಂದರಲ್ಲಿ ತ.ಸು. ಶಾಮರಾಯರ ಅವರನ್ನು ಕಂಡು ಬಂಗಾರಪ್ಪನವರು, ನಾನು ನಿಮ್ಮ ಶಿಷ್ಯ. ನಾಳೆ ನಿಮ್ಮ ಮನೆಗೆ ಭೇಟಿಯಾಗಲು ಪೋನ್ ಮಾಡಿ ಬರುತ್ತೇನೆ ಗುರುಗಳೇ ಎಂದಾಗ, ತ.ಸು. ಶಾಮರಾಯರು ನನ್ನ ಮನೆಗೆ ಫೋನ್ ಇಲ್ಲ ಎಂದು ತಿಳಿಸಿದರು. ತಕ್ಷಣವೇ ಒಂದೇ ದಿನದಲ್ಲಿ ಅವರ ಮನೆಗೆ ಫೋನ್ ಸಂಪರ್ಕ ಕಲ್ಪಿಸಿ ಬಂಗಾರಪ್ಪನವರು ಅವರನ್ನು ಭೇಟಿಯಾದರು ಎಂದರೆ ಗುರುಶಿಷ್ಯರ ಸಂಬಂಧ ಹೇಗಿತ್ತು’ ಎಂದು ಜ್ಞಾಪಿಸಿಕೊಂಡರು.

ತ.ರಾ.ಸು. ಸೋದರ ಸಂಬಂಧಿ ಮಧುರನಾಥ್, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಚೌಳೂರುಲೋಕೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ರವಿಚಂದ್ರ, ರೈತ ಮುಖಂಡ ಓಬಣ್ಣ, ಮುಖಂಡರಾದ ಗುರುಮೂರ್ತಿ, ನಾಗರಾಜ್, ನೀಲೇಶಪ್ಪ, ವೀರೇಶ್ ಇದ್ದರು. ಶಿಕ್ಷಕ ಮಹಾಂತೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.