ADVERTISEMENT

ಕನ್ನಡ ಶಾಲೆಗಳ ಜಾಗೃತಿ ಕನಸು| ವಿದೇಶಗಳಿಗೆ ಸೈಕಲ್‌ ಯಾತ್ರೆ:ಸಿರಿಗೆರೆ ಯುವಕನ ಸಾಹಸ

ಸಿರಿಗೆರೆ ಸಮೀಪದ ಹನುಮನಹಳ್ಳಿ ಗ್ರಾಮದ ಯುವಕನ ಸಾಹಸ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 7:11 IST
Last Updated 6 ಏಪ್ರಿಲ್ 2024, 7:11 IST
ವಿಯೆಟ್ನಾಂ ದೇಶದ ಮಕ್ಕಳ ಜೊತೆಯಲ್ಲಿ ಸುದರ್ಶನ್‌
ವಿಯೆಟ್ನಾಂ ದೇಶದ ಮಕ್ಕಳ ಜೊತೆಯಲ್ಲಿ ಸುದರ್ಶನ್‌   

ಸಿರಿಗೆರೆ: ತನ್ನೂರಿನ ಕನ್ನಡ ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ರಾಜ್ಯದ ಕನ್ನಡ ಶಾಲೆಗಳ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಸಮೀಪದ ಹನುಮನಹಳ್ಳಿ ಗ್ರಾಮದ ಯುವಕನೊಬ್ಬ ಹಲವು ದೇಶಗಳಿಗೆ ಸೈಕಲ್‌ ಪ್ರವಾಸ ಕೈಗೊಂಡು ಈಗ ಕಾಂಬೋಡಿಯಾ ತಲುಪಿದ್ದಾರೆ.

ಗ್ರಾಮದ 25 ವರ್ಷದ ಯುವಕ ಡಿ.ಟಿ. ಸುದರ್ಶನ್‌, ಮ್ಯಾನ್ಮಾರ್‌ ಭೂ ಗಡಿ ಮುಚ್ಚಿರುವುದರಿಂದ ಕೊಲ್ಕತ್ತಾದಿಂದ ವಿಮಾನವೇರಿ ವಿಯೆಟ್ನಾಂ ತಲುಪಿ, ಅಲ್ಲಿಂದ ಮುಂದೆ ತಾನು ಜೊತೆಗೆ ಒಯ್ದಿರುವ ಸೈಕಲ್‌ ಏರಿ ಕಾಂಬೋಡಿಯಾದತ್ತ ಸಂಚಾರ ಮುಂದುವರಿಸಿದ್ದಾರೆ.

‌2023ರ ನವೆಂಬರ್ 26ರಂದು ಆರಂಭವಾದ ಅವರ ಸೈಕಲ್‌ ಪ್ರವಾಸದಲ್ಲಿ ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್‌, ಥೈಲ್ಯಾಂಡ್‌, ಮಲೇಶಿಯಾ ದೇಶಗಳ ಪ್ರವಾಸ ಮುಗಿಸಿ ಸಿಂಗಪೂರ ತಲುಪುವ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಎಪ್ರಿಲ್‌ 20ರಂದು ಲಾವೋಸ್‌ ತಲುಪುವ ಗುರಿ ಇಟ್ಟುಕೊಂಡಿದ್ದಾರೆ. ಅದಕ್ಕೆ ಬೇಕಾದ ವೀಸಾ ಕೂಡ ಅವರಿಗೆ ಸಿಕ್ಕಿದೆ.

ADVERTISEMENT

ಪ್ರಾಥಮಿಕ ಶಾಲೆ ಓದಿದ ಹನುಮನಹಳ್ಳಿಗೆ ಬಂದಿದ್ದಾಗ ಅಲ್ಲಿಯ ಶಿಕ್ಷಕರು ಶಾಲೆಯ ಪರಿಸ್ಥಿತಿ ಕುರಿತು ಸುದರ್ಶನ್‌ ಬಳಿ ಚರ್ಚಿಸಿದ್ದರು. ಹಳ್ಳಿಗಳಲ್ಲಿರುವ ಶಾಲೆಗಳು ಭದ್ರವಾಗದೇ ಹೋದರೆ ಗ್ರಾಮಾಂತರ ಮಕ್ಕಳು ಶಿಕ್ಷಣದಿಂದ ದೂರ ಉಳಿಯಬೇಕಾಗುತ್ತದೆ ಎಂಬುದನ್ನರಿತು ಕನ್ನಡ ಶಾಲೆಗಳ ಅಭಿವೃದ್ಧಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾದರು. ಅಲ್ಲಿಂದ ರೂಪುಗೊಂಡ ಅವರ ಚಿಂತನೆಯು ವಿವಿಧ ದೇಶಗಳ ಪ್ರವಾಸಕ್ಕೆ ಪ್ರೇರಣೆ ನೀಡಿದೆ.

ವಿಯೆಟ್ನಾಂ – ಕಾಂಬೋಡಿಯಾ ದೇಶದ ಭೂ ಗಡಿಯಲ್ಲಿ ಕನ್ನಡ ಬಾವುಟದೊಂದಿಗೆ ಸುದರ್ಶನ್‌

‘ಪ್ರವಾಸ ನಡೆಸುತ್ತಿರುವ ದೇಶಗಳಲ್ಲಿ ಹಲವು ಸಮುದಾಯಗಳ ಜನರ ಸಂದರ್ಶನ ಮಾಡಿರುವೆ. ಸಂಘ– ಸಂಸ್ಥೆಗಳಿಗೆ ಭೇಟಿ ನೀಡಿರುವೆ. ಎಲ್ಲ ಕಡೆ ಸೌಹಾರ್ದಯುತವಾಗಿ, ವಿಶ್ವಾಸದಿಂದ ಬರಮಾಡಿಕೊಂಡಿದ್ದಾರೆ. ಕನ್ನಡ ಭಾಷೆ ಬಗ್ಗೆ ಗೊತ್ತಿಲ್ಲದ ಆ ದೇಶದ ಆಸಕ್ತರಿಗೆ ಕನ್ನಡದ ಕುರಿತು ಮಾಹಿತಿ ನೀಡಿರುವೆ. ಕನ್ನಡ ಶಾಲೆಗಳು ಅಳಿವಿನ ಅಂಚಿಗೆ ಬಂದಿರುವುದರಿಂದ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಮಾಹಿತಿ ಪಡೆದುಕೊಂಡು ಉದಾರವಾಗಿ ಕೊಡುಗೆ ನೀಡಿದವರು ಇದ್ದಾರೆ. ಊರಿನ ಶಾಲೆಯ ಕಟ್ಟಡ ಅಭಿವೃದ್ಧಿಗೆ ₹ ಒಂದು ಕೋಟಿ ಬೇಕು. ಪ್ರವಾಸದ ವೇಳೆ ಸಂಘ–ಸಂಸ್ಥೆಗಳು, ವಿದೇಶಿ ನಾಗರಿಕರು ನೀಡುವ ಕೊಡುಗೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಬರುವ ಹಣವೆಲ್ಲವನ್ನೂ ಕಟ್ಟಡಕ್ಕಾಗಿ ಬಳಸುವೆ. ಜೊತೆಗೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು, ಎನ್‌ಜಿಒಗಳ ನೆರವಿಗೆ ಮೊರೆ ಹೋಗಿರುವೆ’ ಎಂದು ಸುದರ್ಶನ್‌ ಹೇಳಿದರು.

‘ಸೈಕಲ್‌ ಪ್ರವಾಸದ ಎಲ್ಲ ಖರ್ಚುಗಳನ್ನು ವೈಯಕ್ತಿಕ ಆದಾಯದಿಂದ ಭರಿಸುತ್ತಿರುವೆ. ನನ್ನದೇ ಟೆಂಟ್‌ ಇರುವುದರಿಂದ ರಾತ್ರಿ ವೇಳೆ ರಸ್ತೆ ಬದಿಯಲ್ಲಿ, ಸಮುದ್ರ ತೀರದಲ್ಲಿ, ಪೆಟ್ರೋಲ್‌ ಬಂಕ್‌ಗಳಲ್ಲಿ ಕಳೆಯುವೆ. ಇದರಿಂದ ನನ್ನ ಖರ್ಚು ತೀರಾ ಕನಿಷ್ಠ’ ಎನ್ನುತ್ತಾರೆ ಅವರು.

ಹೂ ಚಿ ಮಿನ್‌ ನಗರದಲ್ಲಿನ ಸಮುದಾಯದೊಂದಿಗೆ ಸುದರ್ಶನ್
45,000 ಕಿ.ಮೀ. ಸೈಕಲ್‌ ಯಾತ್ರೆ
ಸುದರ್ಶನ್‌ ಇದುವರೆಗೆ ಸೈಕಲ್‌ ಮೂಲಕ ಮಾಡಿರುವ ಪ್ರವಾಸ 45,000 ಕಿ.ಮೀ. ಮೀರಿದೆ. 2021ರಲ್ಲಿ ಅವರು ಬೆಂಗಳೂರಿನಿಂದ ಭಾರತ ಸೈಕಲ್‌ ಯಾತ್ರೆ ಆರಂಭಿಸಿದ್ದರು. ತಮಿಳುನಾಡು, ಕೇರಳ, ಗೋವಾ, ಕರ್ನಾಟಕ, ತೆಲಂಗಾಣ, ಛತ್ತೀಸಗಡ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ಸಿಕ್ಕಿಂ, ಮೇಘಾಲಯ, ತ್ರಿಪುರ ರಾಜ್ಯಗಳ ಬಹುತೇಕ ಎಲ್ಲ ಜಿಲ್ಲೆಗಳನ್ನು ಸುತ್ತಿದ್ದರು. ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮಿಜೋರಾಂ ರಾಜ್ಯಗಳಲ್ಲೂ ಸುತ್ತಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳು ಬಜೆಟ್‌ನಲ್ಲಿ ಹೆಚ್ಚು ಹಣವನ್ನು ತೆಗೆದಿರಿಸಲು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.