ADVERTISEMENT

ಗ್ರಾಮೀಣ ಒಳರಸ್ತೆಗಳ ಅಭಿವೃದ್ಧಿ ಗುರಿ: ಶಾಸಕ ಬೇಳೂರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 16:00 IST
Last Updated 1 ಏಪ್ರಿಲ್ 2025, 16:00 IST
ಕಾರ್ಗಲ್ ಸಮೀಪದ ಇಡುವಾಣಿ ಗ್ರಾಮದಿಂದ ಹೆನ್ನಿಬೈಲು ದೇವಸ್ಥಾನದವರೆಗೆ ₹20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ಚಾಲನೆ ನೀಡಿದರು
ಕಾರ್ಗಲ್ ಸಮೀಪದ ಇಡುವಾಣಿ ಗ್ರಾಮದಿಂದ ಹೆನ್ನಿಬೈಲು ದೇವಸ್ಥಾನದವರೆಗೆ ₹20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ಚಾಲನೆ ನೀಡಿದರು   

ಕಾರ್ಗಲ್: ಸಾಗರ ತಾಲ್ಲೂಕಿನ ಎಲ್ಲಾ ಗ್ರಾಮಗಳ ಒಳ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿಗೆ ಸಮೀಪದ ತಲವಾಟ ಗ್ರಾಮ ಪಂಚಾಯಿತಿಯ ಇಡುವಾಣಿ ಗ್ರಾಮದ ಮುಖ್ಯ ರಸ್ತೆಯಿಂದ ಹೆನ್ನಿಬೈಲು ಮಾಸ್ತ್ಯಮ್ಮ ದೇವಸ್ಥಾನದವರೆಗೆ ₹20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಪ್ರಗತಿ ಪಥ ಯೋಜನೆಯಡಿಯಲ್ಲಿ ತಾಲ್ಲೂಕಿನಲ್ಲಿ 70 ಕಿ.ಮೀ. ರಸ್ತೆ ಅಭಿವೃದ್ಧಿಗೆ ಅಂದಾಜು ₹60 ಕೋಟಿ ಅನುದಾನ ಲಭ್ಯವಾಗುತ್ತಿದ್ದು, ಅದನ್ನು ಆದ್ಯತೆಯ ಮೇರೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ADVERTISEMENT

‘ಪಟ್ಟಣ ಪ್ರದೇಶದಷ್ಟೇ ಪ್ರಾಮುಖ್ಯತೆಯನ್ನು ಗ್ರಾಮಾಂತರ ಪ್ರದೇಶಗಳಿಗೆ ನೀಡುತ್ತಿದ್ದೇನೆ. ಕಾಲಾಂತರಗಳಿಂದ ಕಡೆಗಣಿಸಲ್ಪಟ್ಟ ರಸ್ತೆಗಳ ಪಟ್ಟಿ ಮಾಡಿಕೊಳ್ಳಲಾಗಿದೆ. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣ ಕಾಲದಿಂದ ಅಲ್ಲಲ್ಲಿ ಕುಗ್ರಾಮಗಳಲ್ಲಿ ಜನ ವಸತಿ ಪ್ರದೇಶಗಳಿದ್ದು, ಜಮೀನು, ಮನೆ ಮಾಡಿಕೊಂಡು ಜನರು ಜೀವನ ನಡೆಸುತ್ತಿದ್ದಾರೆ. ಆದರೆ ಓಡಾಡಲು ಸಮರ್ಪಕ ರಸ್ತೆಗಳಿಲ್ಲದೇ ಅವರ ಜೀವನಮಟ್ಟ ಸುಧಾರಿಸಿಲ್ಲ. ಈ ವಿಚಾರಗಳನ್ನು ಅರಿತು ರಸ್ತೆ ಅಭಿವೃದ್ಧಿಗೆ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.

‘ಸರ್ಕಾರದಿಂದ ಬಗರ್ ಹುಕುಂ ಯೋಜನೆ ಅಡಿ 4 ಎಕರೆ ಭೂಮಿಯನ್ನು ರೈತರಿಗೆ ಮಂಜೂರು ಮಾಡುತ್ತಿದ್ದು, ಈ ಪೈಕಿ ಕನಿಷ್ಠ ಅರ್ಧ ಎಕರೆಯಲ್ಲಿ ಅರಣ್ಯ ಬೆಳೆಸುವ ಕೈಂಕರ್ಯಕ್ಕೆ ರೈತರು ಮುಂದಾಗಬೇಕು. ನೀವು ಬೆಳೆಸುವ ಮತ್ತು ಕಾಪಾಡುವ ಅರಣ್ಯ ಮುಂದಿನ ಜನಾಂಗಕ್ಕೆ ಅನುಕೂಲವಾಗುತ್ತದೆ. ರೈತರಿಗೆ ಅಗತ್ಯವಿರುವ ಸೊಪ್ಪು, ಕಟ್ಟಿಗೆ, ಇತ್ಯಾದಿ ಅಗತ್ಯತೆಗಳಿಗೆ ಪೂರಕವಾಗಿ ನೀವು ಬೆಳೆಸುವ ಅರಣ್ಯ ಉಪಯೋಗವಾಗುತ್ತದೆ’ ಎಂದು ಹೇಳಿದರು.

ಭಾರಂಗಿ ಹೋಬಳಿಯ ಅರಳಗೋಡು ಗ್ರಾಮ ಪಂಚಾಯಿತಿಯ ಭಟ್ಕಳ ಮುಖ್ಯ ರಸ್ತೆಯಿಂದ ಒಳರಸ್ತೆಗೆ ಕಾಂಕ್ರೀಟ್ ರಸ್ತೆ, ಆರೋಡಿ ರಸ್ತೆಗೆ ಡಾಂಬರೀಕರಣ, ನಾಗವಳ್ಳಿ ಸೌತ್ ಕೇರಿ ಗ್ರಾಮಕ್ಕೆ ಸಂಪರ್ಕ ರಸ್ತೆ, ಕಡಕೋಡು ರಸ್ತೆ ಅಭಿವೃದ್ಧಿ, ಚಪ್ಪರಮನೆ ಕಾಂಕ್ರೀಟ್ ರಸ್ತೆ, ಕಣಪಗಾರು ಗ್ರಾಮದ ಕಂಚಿಗದ್ದೆ ಹಳ್ಳಕ್ಕೆ ಕಾಲುಸಂಕ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.

ತಲವಾಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಹೆಗಡೆ, ಸದಸ್ಯ ಕನ್ನಪ್ಪ ಹಿರೇಮನೆ, ಕೃಷ್ಣಮೂರ್ತಿ ಇಡುವಾಣಿ, ಬಂಗಾರಪ್ಪ ಪಡಂಬೈಲು, ಆಶ್ರಯ ಸಮಿತಿ ಸದಸ್ಯ ಹ.ಸಾ. ಸಾದಿಖ್, ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ, ಗ್ರಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಉಪಾಧ್ಯಕ್ಷೆ ಭವ್ಯಾ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಗಲ್ ಸಮೀಪದ ಇಡುವಾಣಿ ಗ್ರಾಮದಿಂದ ಹೆನ್ನಿಬೈಲು ದೇವಸ್ಥಾನದವರೆಗೆ ₹20 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ಚಾಲನೆ ನೀಡಿ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.