ADVERTISEMENT

ಕಾರ್ಗಿಲ್‌ ವಿಜಯ ದಿನ ಆಚರಣೆ: ದೇಶಪ್ರೇಮದ ಪರಮೋಚ್ಛ ನಾಯಕ ಸೈನಿಕ

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 5:12 IST
Last Updated 27 ಜುಲೈ 2025, 5:12 IST
ಎಸ್‌ಜೆಎಸ್‌ ವಿದ್ಯಾಸಂಸ್ಥೆ ಆವರಣದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಯೋಧರ ವೇಷಭೂಷಣ ತೊಟ್ಟ ಮಕ್ಕಳ ಜೊತೆ ಕಾರ್ಗಿಲ್‌ ವಿಜಯ ದಿನ ಆಚರಿಸಿದರು
ಎಸ್‌ಜೆಎಸ್‌ ವಿದ್ಯಾಸಂಸ್ಥೆ ಆವರಣದಲ್ಲಿ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಯೋಧರ ವೇಷಭೂಷಣ ತೊಟ್ಟ ಮಕ್ಕಳ ಜೊತೆ ಕಾರ್ಗಿಲ್‌ ವಿಜಯ ದಿನ ಆಚರಿಸಿದರು   

ಚಿತ್ರದುರ್ಗ: ‘ದೇಶಪ್ರೇಮದ ಪರಮೋಚ್ಛ ನಾಯಕ ಸ್ಥಾನವನ್ನು ಸೈನಿಕನಿಗೆ ನೀಡಬೇಕು. ಪ್ರಾಣಪಕ್ಷಿ ಹಾರಿಹೋಗುತ್ತದೆ ಎಂಬ ಅರಿವಿನಿಂದಲೇ ಸೈನಿಕನಾಗಿ ದೇಶ ಸೇವ ಮಾಡುವ ಯೋಧರನ್ನು ಗೌರವಿಸಬೇಕು’ ಎಂದು ಭೋವಿ ಗುರುಪೀಠದ ಪೀಠಾಧ್ಯಕ್ಷ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಎಸ್‌ಜೆಎಂ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶನಿವಾರ ನಡೆದ ಕಾರ್ಗಿಲ್ ವಿಜಯೋತ್ಸವ ದಿನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ಭಾರತ ಮಾತೆಯ ವೀರ ಪುತ್ರರ ಧೈರ್ಯವನ್ನು ನೆನಪಿಸಿಕೊಳ್ಳಬೇಕು. ಅವರು ದೇಶದ ಗೌರವ ಕಾಪಾಡಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿದ್ದ ಆ ವೀರರ ತ್ಯಾಗವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ’ ಎಂದು ಹೇಳಿದರು.

ADVERTISEMENT

‘ವ್ಯಕ್ತಿ, ವಸ್ತು ಹಾಗೂ ಮನೆಗಿಂತಲೂ ಮಿಗಿಲು ಎನ್ನುವ ಅಚಲ ವಿಶ್ವಾಸತೆಯ ಬದ್ಧತೆಯಿಂದ ಯೋಧರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ದೇಶ ರಕ್ಷಣೆ ಹಾಗೂ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಸ್ಪಷ್ಟ ನಿಲುವು ಹೊಂದಿಯೇ ಸೈನ್ಯಕ್ಕೆ ಸೇರ್ಪಡೆಗೊಳ್ಳುವ ಯೋಧರೇ ನಮ್ಮ ಪಾಲಿನ ದೇವರು’ ಎಂದು ಹೇಳಿದರು.

‘ಸೈನಿಕನ ಜೀವನವು ಸಾಹಸ ಮತ್ತು ಅಪಾಯಗಳಿಂದ ತುಂಬಿರುತ್ತದೆ. ಸೈನಿಕರು ಯಾವುದೇ ಪರಿಸ್ಥಿತಿಯಲ್ಲಿಯೂ ತಮ್ಮ ತಾಯ್ನಾಡನ್ನು ರಕ್ಷಿಸಲು ಪ್ರತಿಜ್ಞೆ ಮಾಡುತ್ತಾರೆ. ಅವರು ಎಂದಿಗೂ ಕರ್ತವ್ಯದಿಂದ ಹೊರಗುಳಿಯುವುದಿಲ್ಲ. ಇದು ಅವರ ಧೈರ್ಯ ಮತ್ತು ಇಚ್ಛಾಶಕ್ತಿಯ ಪ್ರತೀಕ. ನಾವು ನಮ್ಮ ಕುಟುಂಬಗಳೊಂದಿಗೆ ಪ್ರತಿ ಸಂದರ್ಭವನ್ನು ಶಾಂತಿಯುತವಾಗಿ ಆಚರಿಸಲು ಅವರು ವರ್ಷಪೂರ್ತಿ ತಮ್ಮ ಕುಟುಂಬಗಳಿಂದ ದೂರವಿರುತ್ತಾರೆ. ಅವರನ್ನು ಸ್ಮರಿಸಬೇಕು’ ಎಂದರು.

ಬಿಜೆಪಿಯಿಂದ ವಿಜಯೋತ್ಸವ; ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಒನಕೆ ಓಬವ್ವ ವೃತ್ತದಲ್ಲಿ ಕಾರ್ಗಿಲ್‌ ವಿಜಯೋತ್ಸವ ನಡೆಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ‘ನಮ್ಮ ದೇಶದ ಸೈನಿಕರು ಪಾಕಿಸ್ತಾನಿ ಸೈನ್ಯವನ್ನು ಸೋಲಿಸಿ ನಮ್ಮ ಜಾಗವನ್ನು ವಾಪಸ್‌ ಪಡೆಯುವಲ್ಲಿ ಯಶಸ್ವಿಯಾದರು. ಈ ದಿವಸ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಗೌರವ ಅರ್ಪಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದರು.

‘ಕಾರ್ಗಿಲ್ ಬೆಟ್ಟಗಳಿಂದ ಉಗ್ರಗಾಮಿಗಳನ್ನು ಹೊಡೆದೋಡಿಸಿದ ಸಂದರ್ಭವನ್ನು ಸ್ಮರಿಸಲು ದೇಶದಾದ್ಯಂತ ‘ಕಾರ್ಗಿಲ್ ವಿಜಯ್ ದಿನ’ ಆಚರಿಸಲಾಗುತ್ತಿದೆ. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಳ್ಳಲು ಸಂಚು ರೂಪಿಸುತ್ತಿದ್ದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತನ್ನ ಶೌರ್ಯ ದಿನ ಹೆಮ್ಮಯ ಕ್ಷಣವಾಗಿದೆ’ ಎಂದರು.

ರೈತ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಯಾದವ್ ಮಾತನಾಡಿ, ‘ಪಾಕಿಸ್ತಾನದ ಶತ್ರು ಪಡೆಗಳು ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶವನ್ನು ಪ್ರವೇಶಿಸಿದಾಗ ಯುದ್ಧ ನಡೆಯಿತು. ಅವರು ಕಾರ್ಗಿಲ್‍ನಲ್ಲಿ ಖಾಲಿಯಾಗಿದ್ದ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿದರು. ಅವರ ಆಕ್ರಮಣದ ಬಗ್ಗೆ ತಿಳಿದ ನಂತರ ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಕಾರ್ಯಾಚರಣೆ ನಡೆಸಿ ಗೆಲುವು ಸಾಧಿಸಿತು’ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜುನ್, ಗ್ರಾಮಾಂತರ ಅಧ್ಯಕ್ಷ ನಾಗರಾಜ್, ವಕ್ತಾರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಚಾಲುಕ್ಯ ನವೀನ್, ತಿಪ್ಪೇಸ್ವಾಮಿ, ನಂದಿ ನಾಗರಾಜ್, ಕವನಾ, ಶುಂಭು, ಬಸಮ್ಮ, ಶಾಂತಮ್ಮ, ರಘು ಇದ್ದರು.

ಬಿಜೆಪಿ ಮುಖಂಡರು ಒನಕೆ ಓಬವ್ವ ವೃತ್ತದಲ್ಲಿ ಕಾರ್ಗಿಲ್‌ ವಿಜಯೋತ್ಸವ ಆಚರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.