ಹೊಳಲ್ಕೆರೆ: ತಾಲ್ಲೂಕಿನ ರಾಮಗಿರಿಯಲ್ಲಿ ಡಿ.16 ರಂದು ಕರಿಸಿದ್ದೇಶ್ವರ ಸ್ವಾಮಿಯ ಲಕ್ಷ ದೀಪೋತ್ಸವ ನಡೆಯಲಿದ್ದು, ರಾಜ್ಯದ ನಾನಾ ಭಾಗಗಳಿಂದ ಅಂದಾಜು 1 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ.
ಮಧ್ಯ ಕರ್ನಾಟಕದ ದೊಡ್ಡ ಉತ್ಸವಗಳಲ್ಲಿ ರಾಮಗಿರಿ ಲಕ್ಷ ದೀಪೋತ್ಸವವೂ ಒಂದಾಗಿದ್ದು, ಪ್ರತೀ ವರ್ಷ ವೈಭವದಿಂದ ಜಾತ್ರೆ ನಡೆಯುತ್ತದೆ. ಉತ್ಸವಕ್ಕೆ ರಾಮಗಿರಿ ಪಟ್ಟಣ ನವವಧುವಿನಂತೆ ಸಿಂಗಾರಗೊಂಡಿದೆ.
ಬೆಟ್ಟದ ತುದಿಯಲ್ಲಿ ದೇವಾಲಯ ಇದ್ದು, ಅಲ್ಲಿಯವರೆಗೆ ಇರುವ 300ಕ್ಕೂ ಹೆಚ್ಚು ಮೆಟ್ಟಿಲುಗಳಿದ್ದು, ಎರಡೂ ಬದಿಯಲ್ಲಿ ದೀಪಗಳನ್ನು ಬೆಳಗಿಸಲಾಗುತ್ತದೆ. ರಾತ್ರಿ ವೇಳೆ ಇಡೀ ಬೆಟ್ಟ ದೀಪಗಳಿಂದ ಕಂಗೊಳಿಸುತ್ತದೆ. ಸೋಮವಾರ ರಾತ್ರಿ ಬೆಟ್ಟದಲ್ಲಿ ನಡೆಯುವ ದೀಪೋತ್ಸವದ ಅಪೂರ್ವ ದೃಶ್ಯವನ್ನು ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ.
ಮಂಗಳವಾರ ಬೆಳಗಿನ ಜಾವ 4 ಗಂಟೆಗೆ ಕರಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಬೆಟ್ಟದಿಂದ ಕೆಳಗೆ ಕರೆ ತರಲಾಗುತ್ತದೆ. ಬಾಳೆ ದಿಂಡುಗಳಲ್ಲಿ ಕಲಾತ್ಮಕವಾಗಿ ನಿರ್ಮಿಸುವ ಕದಳಿ ಮಂಟಪದಲ್ಲಿ ಕರಿಸಿದ್ದೇಶ್ವರ ಸ್ವಾಮಿ, ಕರಿಯಮ್ಮ ದೇವಿ, ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇಡೀ ರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.
ಕರಿಸಿದ್ದೇಶ್ವರ ಸ್ವಾಮಿ ಜಾತ್ರೆಯನ್ನು ಬಾಳೆಹಣ್ಣು ಜಾತ್ರೆ ಎಂದೇ ಕರೆಯಲಾಗುತ್ತದೆ. ದೇವರ ಮುಂದೆ ಬಾಳೆಹಣ್ಣುಗಳ ರಾಶಿ ಹಾಕುವುದು ಇಲ್ಲಿನ ವಿಶೇಷ. ಭಕ್ತರು ತಮ್ಮ ಇಷ್ಟಾನುಸಾರ ‘ನೂರಾ ಒಂದು, ಐನೂರಾ ಒಂದು, ಸಾವಿರದ ಒಂದು, ಐದು ಸಾವಿರದ ಒಂದು…’ ಹೀಗೆ ಬಾಳೆಹಣ್ಣು ನೀಡುವುದಾಗಿ ಹರಕೆ ಹೊರುತ್ತಾರೆ. ಭಕ್ತರು ಕೊಟ್ಟ ಬಾಳೆಹಣ್ಣಿನ ಗೊನೆಗಳನ್ನು ದೇವರ ಮುಂದೆ ರಾಶಿ ಹಾಕಲಾಗುತ್ತದೆ. ಈ ರಾಶಿಯೇ ಅಂದಾಜು 15 ರಿಂದ 20 ಅಡಿ ಎತ್ತರ ಇರುತ್ತದೆ. ಹಣ್ಣನ್ನು ರಾಶಿ ಹಾಕಿದ ನಂತರ ಪೂಜೆ ಸಲ್ಲಿಸಿ ಭಕ್ತರಿಗೆ ಗೊನೆ ಸಮೇತ ಹಂಚಲಾಗುತ್ತದೆ.
ಇದರೊಂದಿಗೆ ನೆನೆಸಿದ ಕಡಲೆಕಾಳು ವಿತರಿಸಲಾಗುತ್ತದೆ. ಜಾತ್ರೆಯಲ್ಲಿ ಬಾಳೆ ಹಣ್ಣು ಮಾರಾಟ ಜೋರಾಗಿರುತ್ತದೆ. ವ್ಯಾಪಾರಿಗಳು ಮಾರಾಟಕ್ಕೆ ಟನ್‌ಗಟ್ಟಲೆ ಬಾಳೆಹಣ್ಣು ತರಿಸಿ ಮಾರಾಟ ಮಾಡುತ್ತಾರೆ. ‘ದೇವರಿಗೆ ಬಾಳೆಹಣ್ಣು ಅರ್ಪಿಸಿಲ್ಲವೆಂದರೆ ಪೂಜೆ ಪೂರ್ಣಗೊಳ್ಳುವುದಿಲ್ಲ’ ಎಂಬ ನಂಬಿಕೆ ಭಕ್ತರದು.
ಇಲ್ಲಿನ ಕರಿಸಿದ್ದೇಶ್ವರ ಸ್ವಾಮಿಯನ್ನು ಭಕ್ತರು ಪವಾಡ ಪುರುಷನೆಂದೇ ನಂಬಿದ್ದಾರೆ. ದೇವರ ಪವಾಡಗಳ ಬಗ್ಗೆ ಹಿರಿಯರು ಅನೇಕ ದಂತಕತೆಗಳನ್ನು ಹೇಳುತ್ತಾರೆ. ‘ಹಿಂದೆ ರಾಜನೊಬ್ಬ ಈ ಭಾಗದಲ್ಲಿ ಬೀಡು ಬಿಟ್ಟಿರುತ್ತಾನೆ. ಅವನ ಪ್ರೀತಿಯ ಆನೆ ಅನಾರೋಗ್ಯದಿಂದ ಮೃತಪಡುತ್ತದೆ. ದಿಕ್ಕು ತೋಚದಂತಾದ ರಾಜ, ಆನೆಯನ್ನು ಬದುಕಿಸುವಂತೆ ದೇವರಲ್ಲಿ ಬೇಡುತ್ತಾನೆ. ಆಗ ಸಾಧುವಿನ ವೇಷದಲ್ಲಿ ಒಬ್ಬರು ಅಲ್ಲಿಗೆ ಬರುತ್ತಾರೆ. ಸಾಧು ವೇಷ ಧರಿಸಿದ ದೇವರು ತನ್ನ ಮಂತ್ರದಂಡದಿಂದ ಆನೆಯನ್ನು ಮುಟ್ಟಿದಾಗ ಅದು ಎದ್ದು ನಿಲ್ಲುತ್ತದೆ. ಕರಿ(ಆನೆ)ಯನ್ನು ಬದುಕಿಸಿದ್ದರಿಂದ ಕರಿಸಿದ್ದೇಶ್ವರ ಎಂಬ ಹೆಸರು ಬಂತು’ ಎನ್ನುತ್ತಾರೆ ಗ್ರಾಮದ ಹಿರಿಯರು.
ರಾಮಗಿರಿಯಲ್ಲಿ ಈ ವರ್ಷವೂ ವಿಜೃಂಭಣೆಯಿಂದ ಲಕ್ಷ ದೀಪೋತ್ಸವ ನಡೆಯಲಿದೆ. ಭಕ್ತರಿಗೆ ಮಂಗಳವಾರ ಬೆಳಿಗ್ಗೆ ಅನ್ನಸಂತರ್ಪಣೆ ನಡೆಸಲಾಗುವುದುಓಂಕಾರಪ್ಪ ದೇವಸ್ಥಾನ ಸಮಿತಿಯ ಅಧ್ಯಕ್ಷ
ಬೆಟ್ಟದ ಮೇಲಿನ ಕರಿಸಿದ್ದೇಶ್ವರ ಸ್ವಾಮಿ ದೇವಾಲಯದ ಒಳಗೆ ಗಂಗಮ್ಮನ ಬಾವಿ ಇದ್ದು ಇದನ್ನು ‘ಕಾಲಜ್ಞಾನಿ ಬಾವಿ’ ಎಂದೇ ನಂಬಲಾಗಿದೆ. ‘ಬೆಟ್ಟದ ತುದಿಯಲ್ಲಿದ್ದರೂ ಈ ಬಾವಿಯ ನೀರು ಎಂದೂ ಬತ್ತುವುದಿಲ್ಲ. ಇದು ಭವಿಷ್ಯ ನುಡಿಯುವ ಬಾವಿಯಾಗಿದ್ದು ಇದರಲ್ಲಿನ ನೀರು ಸ್ವಲ್ಪ ಕೆಳಗೆ ಹೋದರೆ ಆ ವರ್ಷ ಹೆಚ್ಚು ಮಳೆ ಬರುತ್ತದೆ ನೀರು ಮೇಲೆ ಬಂದರೆ ಮಳೆ ಕಡಿಮೆ ಆಗುತ್ತದೆ ಎಂಬ ನಂಬಿಕೆ ಇದೆ. ಈ ನೀರು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ’ ಎನ್ನುತ್ತಾರೆ ಇಲ್ಲಿನ ಅರ್ಚಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.